ಬಾಗಲಕೋಟೆ: ಬಸವ ತತ್ವ, ಲಿಂಗಾಯತ ಧರ್ಮದಂತೆ ಮಾತೆ ಮಹಾದೇವಿ ಅವರ ಕ್ರಿಯಾ ವಿಧಿವಿಧಾನವು ಕೂಡಲ ಸಂಗಮದಲ್ಲಿ ಇಂದು ನೆರವೇರಿತು.
ಜಗತ್ತಿನ ಪ್ರಥಮ ಮಹಿಳಾ ಜಗದ್ಗುರು ಡಾ.ಮಾತೆ ಮಹಾದೇವಿ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಗುರುವಾರ ಲಿಂಗೈಕ್ಯರಾಗಿದ್ದರು. ಈ ಮೂಲಕ ಲಿಂಗಾಯತ ಧರ್ಮದ ಮತ್ತೊಂದು ಕೊಂಡಿ ಕಳಚಿದಂತಾಯಿತು.
Advertisement
ಮಾತೆ ಮಹಾದೇವಿ ಶರೀರಕ್ಕೆ ಹೊಸ ವಸ್ತ್ರ ಧಾರಣೆ ಮಾಡಿ, ನೂತನ ಪೀಠಾಧಿಕಾರಿ ಮಾತೆ ಗಂಗಾದೇವಿ ಅವರು ಪೂಜೆ ಸಲ್ಲಿಸಿದರು. ಕ್ರಿಯಾ ಸಮಾಧಿ ನಿರ್ಮಾಣದ ವೇಳೆ ವಿಭೂತಿ ಗಟ್ಟಿ, ಬಿಲ್ವಪತ್ರೆ, ತುಳಸಿ, ರುದ್ರಾಕ್ಷಿ ಮಾಲೆ ಬಳಕೆ ಮಾಡಲಾಗಿತ್ತು. ಈ ವೇಳೆ ಹಲವು ಮಠಾಧೀಶರು, ಶರಣ ಶರಣಿಯರು, ಭಕ್ತರು ಭಾಗಿಯಾಗಿದ್ದರು.
Advertisement
Advertisement
ಇದಕ್ಕೂ ಮುನ್ನ ರಾಜ್ಯ ಸರ್ಕಾರದಿಂದ ಗೌರವ ವಂದನೆ ಸಲ್ಲಿಸಲಾಯಿತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಪೊಲೀಸ್ ಪಡೆ ಗೌರವ ಸಲ್ಲಿಸಿತ್ತು. ಗೃಹಸಚಿವ ಎಂ.ಬಿ.ಪಾಟೀಲ್, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್, ಪಂಚಮಸಾಲಿ ಪೀಠಾಧಿಪತಿ ಬಸವಜಯಮೃತ್ಯುಂಜಯ ಸ್ವಾಮೀಜಿ, ನಿಜಗುಣಾನಂದ ಸ್ವಾಮೀಜಿ, ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್ ಅವರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
Advertisement
ಮಾತಾಜಿ ಪಾರ್ಥಿವ ಶರೀರವನ್ನು ನಿನ್ನೆ ರಾತ್ರಿ ಕೂಡಲಸಂಗಮ ಕ್ರಾಸ್ ಬಳಿ ಬರಮಾಡಿಕೊಂಡ ಭಕ್ತರು, ಬಸವಣ್ಣನವರ ವಚನಗಳ ಮೂಲಕ ಭಕ್ತಿಯ ಶ್ರದ್ಧಾಂಜಲಿ ಅರ್ಪಿಸಿದರು. ಸಂಗಮ ಕ್ರಾಸ್‍ನಿಂದ ಬಸವಣ್ಣನ ವೃತ್ತ ಮೂಲಕ ಬಸವ ಧರ್ಮಪೀಠದವರೆಗೆ ಮೆರವಣಿಗೆ ಮಾಡಲಾಯಿತು. ದಾರಿಯೂದ್ದಕ್ಕೂ ಅಪಾರ ಭಕ್ತರು ಮಾತಾಜಿ ಲಿಂಗೈಕ್ಯ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಬಸವಧರ್ಮ ಪೀಠ ವೇದಿಕೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಯಿತು.
ಅಂತಿಮ ವಿಧಿ ವಿಧಾನದ ಸಮಯದಲ್ಲಿ ನಿರಂತರ ವಚನ ಪಠಣ, ಓಂಕಾರ ಪಠಣ, ಶ್ರೀ ಗುರುಬಸವ ಲಿಂಗಾಯ ನಮಃ ಎಂಬ ಘೋಷಗಳು ಮುಗಿಲು ಮುಟ್ಟಿದ್ದವು. ಮಹಾಮನೆಯ ಪಕ್ಕದ ಮೈದಾನದಲ್ಲಿ ಸಾರ್ವಜನಕರಿಗೆ ಮಾತಾಜಿ ಅವರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವೇದಿಕೆಯ ಮೇಲೆಯೇ ಬಸವ ಧರ್ಮ ಪೀಠಕ್ಕೆ ನೂತನ ಅಧ್ಯಕ್ಷೆಯರನ್ನಾಗಿ ಮಾತೆ ಗಂಗಾದೇವಿಯವರನ್ನ ನೇಮಿಸಲಾಯಿತು. ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಕಿರೀಟ ತೊಡಿಸಿ ಪೀಠಾಧ್ಯಕ್ಷರನ್ನಾಗಿ ನೇಮಿಸಲಾಯಿತು. ನಂತರ ಬಸವ ಧ್ವಜ ಹಸ್ತಾಂತರಿಸುವ ಮೂಲಕ ಬಸವ ಧರ್ಮಪೀಠದ ಸಿದ್ಧಾಂತ ಹಾಗೂ ಮಾತೆ ಮಹಾದೇವಿಯವರ ತತ್ವಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಗಂಗಾದೇವಿ ಅವರಿಗೆ ಆಶೀರ್ವದಿಸಲಾಯಿತು.
ಈ ವೇಳೆ ಮಹಾರಾಷ್ಟ್ರದ ಕನ್ಹೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳು, ಮುರುಘಾ ಮಠದ ಮುರುಗಾ ಶ್ರೀಗಳು, ಪಂಚಮಸಾಲಿ ಪೀಠದ ಬಸವಜಯಮೃತ್ಯಂಜಯ ಶ್ರೀಗಳು, ಗದುಗಿನ ತೋಂಟದಾರ್ಯ ಶ್ರೀಗಳು, ಬೆಳಗಾವಿಯ ನಾಗನೂರು ಮಠದ ಶ್ರೀಗಳು, ನಿಜಗುಣಾನಂದ ಶ್ರೀಗಳು ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಮಾತಾಜಿಯವರ ಅಂತಿಮ ದರ್ಶನ ಪಡೆದರು. ಇದೇ ವೇಳೆ ಬೀದರ ಸಂಸದ ಭಗವಂತರಾವ ಖೂಬಾ, ಸಚಿವ ಎಂ.ಬಿ.ಪಾಟೀಲ್, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ನಿವೃತ್ತ ಐ.ಎ.ಎಸ್ ಅಧಿಕಾರಿ, ಮಾಜಿ ಸಚಿವ ವಿನಯ ಕುಲಕರ್ಣಿ ಜಾಮದಾರ್, ಬಾಗಲಕೋಟೆ ಸಂಸದ ಗದ್ದಿಗೌಡರ್, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಸೇರಿದಂತೆ ನಾಡಿನ ವಿವಿಧ ಭಾಗಗಳ ರಾಜಕೀಯ ಮುಖಂಡರು ಮಾತಾಜಿಯವರ ಅಂತಿಮ ದರ್ಶನ ಪಡೆದು ಕ್ರಿಯಾ ವಿಧಿವಿಧಾನದಲ್ಲಿ ಭಾಗಿಯಾದ್ದರು.
ಗದಗ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಎಂದಿಗೂ ನಿಲ್ಲುವುದಿಲ್ಲ. ನಮ್ಮನ್ನು ಅಗಲಿದ ಮಾತೆಯ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ನಾವು ಪ್ರತ್ಯೇಕ ಧರ್ಮ ಮಾಡಿಯೇ ತೀರಬೇಕು. ಮುಂದೊಂದು ದಿನ ಪ್ರತ್ಯೇಕತೆಗೆ ಪ್ರತಿಫಲ ಸಿಗುತ್ತೆ ಎಂದರು.
ಮಾತಾಜಿ ದರ್ಶನ ಪಡೆದು ಮಾತನಾಡಿದ ಗೃಹ ಸಚಿವ ಎಂ.ಬಿ.ಪಾಟೀಲ್, ಹನ್ನೆರಡನೇ ಶತಮಾನದಲ್ಲಿ ಆಗಿದ್ದು ಕ್ರಾಂತಿಯಲ್ಲ ದುರಂತ. ಯಾರು ಮಾನ್ಯತೆ ಕೊಡಲಿ ಬಿಡಲಿ ಎಷ್ಟೇ ಅವಮಾನಗಳು ಬಂದರೂ ಬಸವ ಧರ್ಮ ಜಾಗತಿಕ ಧರ್ಮವಾಗುತ್ತೆ ಎಂದರು.