ಗದಗ: ಜಿಲ್ಲೆಯ ಖಾನತೋಟ (Khanathota) ಓಣಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಬೃಹತ್ ಗಾತ್ರದ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದೆ.
ಸತತ ಮಳೆಯಿಂದ ಮರದ ಬುಡ ಕೊಳೆತ ಸ್ಥಿತಿಯಲ್ಲಿತ್ತು. ಮಂಗಳವಾರ ಬೀಸಿದ ಬಿರುಗಾಳಿಯಿಂದ ಬೇರುಗಳು ಸಡಿಲಗೊಂಡು ರಸ್ತೆಗೆ ಉರುಳಿದೆ. ಹತ್ತಿರದಲ್ಲೇ ಇದ್ದ ವಿದ್ಯುತ್ ಕಂಬವು ನೆಲಕ್ಕಪಳಿಸಿದೆ. ವಿದ್ಯುತ್ ಕಂಬ ತುಂಡಾಗಿ ಬಿದ್ದ ಪರಿಣಾಮ ಕೆಲಕಾಲ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿತ್ತು. ಮರ ಹಾಗೂ ವಿದ್ಯುತ್ ಕಂಬ ಬಿದ್ದಾಗ ರಸ್ತೆಯಲ್ಲಿ ಜನ ಸಂಚಾರ ಇಲ್ಲದಿದ್ದುದರಿಂದ ಭಾರೀ ಅನಾಹುತ ತಪ್ಪಿದೆ. ಇದನ್ನೂ ಓದಿ: ಪಾಕ್, ಚೀನಾಗೆ ಟಕ್ಕರ್ ಕೊಡಲು ಹೊಸ ಫೈಟರ್ ಜೆಟ್‌ಗೆ ಭಾರತ ಅನುಮೋದನೆ
ಬಿರುಗಾಳಿ (Storm) ಮಳೆಗೆ ಖಾನತೋಟ ಬಡಾವಣೆಯಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು. ನಂತರ ನಗರಸಭೆ ಹಾಗೂ ಅರಣ್ಯ ಇಲಾಖೆಯವರು ಮರ ತೆರವುಗೊಳಿಸಿದರು. ಇನ್ನು ಹೆಸ್ಕಾಂ ಸಿಬ್ಬಂದಿ ಸಹ ವಿದ್ಯುತ್ ಕಂಬ ತೆರವುಗೊಳಿಸಿದರು. ಇದರಿಂದ ಕೆಲವು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಗ್ರಾಮಸ್ಥರು, ಅಪಾಯಕಾರಿ ಹಳೆಯ ಮರ ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.