ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಚಲಿಸುತ್ತಿದ್ದ ಓಮಿನಿ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯಗಳಾಗಿರುವ ಘಟನೆ ಭಾನುವಾರ ರಾತ್ರಿ ಎನ್.ಆರ್.ಪುರ ತಾಲೂಕಿನ ಗುಡ್ಡೇಹಳ್ಳ ಗ್ರಾಮದ ಬಳಿ ನಡೆದಿದೆ.
ಮಹಮ್ಮದ್ ಮತ್ತು ನಾಗಾರಾಜು ಅಪಘಾತದಲ್ಲಿ ಗಾಯಗೊಂಡವರು. ಗಾಯಾಳುಗಳು ಎನ್.ಆರ್.ಪುರ ಮೂಲದವರಾಗಿದ್ದು, ಸದ್ಯ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊಪ್ಪದಿಂದ ಎನ್.ಆರ್.ಪುರಕ್ಕೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಈ ಬಗ್ಗೆ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಮಲೆನಾಡಲ್ಲಿ ಐದು ದಿನದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ದೈತ್ಯ ಮಳೆಗೆ ಮಲೆನಾಡಿಗರ ಬದುಕು ಅಸ್ತವ್ಯಸ್ತವಾಗಿದೆ. ಜಿಲ್ಲೆಯ ನಾಲ್ಕು ತಾಲೂಕಿನಲ್ಲೂ ಕಳೆದ ರಾತ್ರಿ ಜೋರು ಮಳೆಯಾಗಿದೆ. ಕುದುರೆಮುಖ, ಕಳಸ, ಬಾಳೆಹೊನ್ನೂರು, ಕೆರೆಕಟ್ಟೆಯಲ್ಲಿ ಭಾರೀ ಮಳೆಯಾಗಿದ್ದು, ಭದ್ರಾ, ತುಂಗಾ, ಹೇಮಾವತಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದೆ. ಮಳೆ ಹಿನ್ನೆಲೆ ನಾಲ್ಕು ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆಯನ್ನು ಜಿಲ್ಲಾಧಿಕಾರಿ ಶ್ರೀರಂಗಯ್ಯ ಘೋಷಿಸಿದ್ದಾರೆ.