– ನಾಲ್ವರು ಗಾಯಾಳುಗಳು ಡಿಸ್ಚಾರ್ಜ್ ಆದರೂ ಸಂದಾಯವಾಗದ ಹಣ
ಬೆಂಗಳೂರು: ಬಾಂಬ್ ಬ್ಲಾಸ್ಟ್ (Bomb Blast) ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಭರಿಸೋದಾಗಿ ಸಿದ್ದರಾಮಯ್ಯ (Siddaramaiah) ಸರ್ಕಾರ ಘೋಷಣೆ ಮಾಡಿತ್ತು. ಆದರೆ ಘಟನೆ ನಡೆದು ಮೂರು ದಿನ ಆಗಿದೆ. ನಾಲ್ವರು ಗಾಯಾಳುಗಳು ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಆಸ್ಪತ್ರೆ ಅವರಿಗೆ ಇದುವರೆಗೂ ಹಣ ಸಂದಾಯ ಆಗಿಲ್ಲ. ಸರ್ಕಾರದ ಪ್ರತಿನಿಧಿಗಳು ಯಾರೂ ವೆಚ್ಚದ ಬಗ್ಗೆ ಮಾತನಾಡಿಲ್ಲ. ಇದರಿಂದ ಮಾಜಿ ಶಾಸಕರು, ಆಸ್ಪತ್ರೆಯವರು ಅಸಮಾಧಾನ ಹೊರಹಾಕುತ್ತಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್ ಬ್ಲಾಸ್ಟ್ ಆಗಿ 9 ಜನ ಗಾಯಾಳುಗಳು ಆಸ್ಪತ್ರೆ ಸೇರಿದ್ದರು. ವೈದೇಹಿಯಲ್ಲಿ ಆರು ಜನ, ಬ್ರೂಕ್ ಫೀಲ್ಡ್ ಆಸ್ಪತ್ರೆಯಲ್ಲಿ ಮೂರು ಜನ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಸರ್ಕಾರದಿಂದ ಚಿಕಿತ್ಸಾ ವೆಚ್ಚ ಭರಿಸೋದಾಗಿ ಘೋಷಣೆ ಮಾಡಿದ್ದರು. ಆದರೆ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳು ಗುಣಮುಖರಾಗಿದ್ದಾರೆ. ವೈದೇಹಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೋಮಿ, ಶ್ರೀನಿವಾಸ್, ಮೋಹನ್ ಮತ್ತು ಬ್ರೂಕ್ ಫೀಲ್ಡ್ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೀಪಾಂಶು ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ – ಎನ್‌ಐಎಗೆ ಕೇಸ್ ವರ್ಗಾವಣೆ
ಗಾಯಾಳುಗಳು ಡಿಸ್ಚಾರ್ಜ್ ಆದರೂ ಇನ್ನೂ ಆಸ್ಪತ್ರೆ ಅವರಿಗೆ ಹಣ ಸಂದಾಯ ಆಗಿಲ್ಲ. ಸರ್ಕಾರದ ಪ್ರತಿನಿಧಿಗಳು ಯಾರೂ ಕೂಡ ಹೋಗಿ ವೆಚ್ಚ ಭರಿಸೋ ಬಗ್ಗೆ ಮಾತನಾಡಿಲ್ಲ. ವೆಚ್ಚ ಭರಿಸೋ ಬೆಳವಣಿಗೆ ಕಾಣಿಸುತ್ತಿಲ್ಲ. ಸರ್ಕಾರ ಬೇಗ ಸಂವಹನ ಮಾಡಬೇಕು ಎಂದು ಮಾಜಿ ಶಾಸಕ ಅರವಿಂದ ಲಿಂಬಾವಳಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ರಾಜ್ಯ ಬಿಜೆಪಿಯಿಂದ 15+ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರು ಫೈನಲ್
ಇನ್ನೂ ಬ್ರೂಕ್ ಫೀಲ್ಡ್ ಆಸ್ಪತ್ರೆಯಲ್ಲಿ ಮೂವರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ ಒಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಸರ್ಕಾರ ಅಥವಾ ಅಧಿಕಾರಿಗಳು ಯಾರೂ ಬಂದು ವೆಚ್ಚಭರಿಸೋ ಬಗ್ಗೆ ಮಾತನಾಡಿಲ್ಲ ಎಂದು ಬ್ರೂಕ್ ಫೀಲ್ಡ್ ನಿರ್ದೇಶಕ ಡಾ.ಪ್ರದೀಪ್ ಹೇಳಿದ್ದಾರೆ. ಇದನ್ನೂ ಓದಿ: ನೌಕಾಪಡೆಗೆ ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ನಿಯೋಜನೆಗೆ ಸಿದ್ಧತೆ – ಭಾರತಕ್ಕೆ ಭೀಮ ಬಲ