ಚಳಿಗಾಲದಲ್ಲಿ ಉತ್ತರಾಖಂಡದ (Uttarakhand) ಸುಂದರವಾದ ಪ್ರವಾಸಿ ತಾಣಗಳಿಗೆ ಹೊರ ರಾಜ್ಯದ ಅನೇಕ ಪ್ರವಾಸಿಗರು ಬರುತ್ತಾರೆ. ಈ ಬಾರಿ ಚಳಿಗಾಲದಲ್ಲಿ (Winter) ಬರುವ ಹೊರರಾಜ್ಯದ ಪ್ರವಾಸಿಗರಿಗೆ ತಮ್ಮ ವೆಚ್ಚ ಸ್ವಲ್ಪ ಹೊರೆಯಾಗಲಿದೆ. ಯಾಕೆಂದರೆ ಉತ್ತರಾಖಂಡದಲ್ಲಿ ಡಿಸೆಂಬರ್ 1 ರಿಂದ ಬೇರೆ ರಾಜ್ಯಗಳಿಂದ ಬರುವ ಪ್ರವಾಸಿ ವಾಹನಗಳಿಗೆ ಗ್ರೀನ್ ಟ್ಯಾಕ್ಸ್ (Green Tax) ವಿಧಿಸಲು ಮುಂದಾಗಿದೆ. ಅದಕ್ಕಾಗಿ ವಿವಿಧ ವಾಹನಗಳಿಗೆ ದರವನ್ನೂ ನಿಗದಿಪಡಿಸಿ ಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಗ್ರೀನ್ ಟ್ಯಾಕ್ಸ್ ಎಂದರೇನು? ಇದನ್ನೂ ಯಾಕೆ ಜಾರಿಗೆ ತರಲಾಗಿದೆ? ತೆರಿಗೆಯ ಪಟ್ಟಿಯ ವಿವರವನ್ನು ಇಲ್ಲಿ ವಿವರಿಸಲಾಗಿದೆ.
ಏನಿದು ಗ್ರೀನ್ ಟ್ಯಾಕ್ಸ್?
ಪರಿಸರ ಕಾಳಜಿ ಮತ್ತು ಪ್ರವಾಸೋದ್ಯಮ ಮೂಲಸೌಕರ್ಯಕ್ಕೆ ಹಣಕಾಸು ಒದಗಿಸುವ ಸಲುವಾಗಿ ಬೇರೆ ರಾಜ್ಯಗಳಿಂದ ಉತ್ತರಾಖಂಡಕ್ಕೆ ಬರುವ ವಾಹನಗಳಿಗೆ ಗ್ರೀನ್ ಟ್ಯಾಕ್ಸ್ ವಿಧಿಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಮಾಲಿನ್ಯವನ್ನು ನಿಯಂತ್ರಿಸುವ, ಪರಿಸರವನ್ನು ರಕ್ಷಿಸುವ ಮತ್ತು ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಈ ತೆರಿಗೆಯನ್ನು ಜಾರಿಗೆ ತರಲಾಗಿದೆ. ಸಣ್ಣ ವಾಹನಗಳಿಗೆ, ಸಣ್ಣ ಸರಕು ಸಾಗಣೆ ವಾಹನಗಳಿಗೆ, ಬಸ್‌ಗಳಿಗೆ ಮತ್ತು ಟ್ರಕ್‌ಗಳಿಗೆ ತೆರಿಗೆ ವಿಧಿಸಲಾಗುತ್ತದೆ. ಈ ದರ ಆ ವಾಹನಗಳ ತೂಕವನ್ನು ಅವಲಂಬಿಸಿ ನಿರ್ಧಾರವಾಗುತ್ತದೆ.
ರಾಜ್ಯದಲ್ಲಿ ಸ್ವಚ್ಛ ಸಾರಿಗೆ ಮತ್ತು ಪರಿಸರ ಸಮತೋಲನ ಸಾಧಿಸಲು ಇದು ಮಹತ್ವದ ಹೆಜ್ಜೆಯಾಗಿದೆ. ವಿಶೇಷವಾಗಿ ಪ್ರವಾಸ ಋತುಗಳಲ್ಲಿ ವಾಹನಗಳು ಹೊರಸೂಸುವಿಕೆಯಿಂದ ಹೆಚ್ಚು ಸಮಸ್ಯೆಗೊಳಗಾಗುತ್ತಿರುವ ಪರಿಸರ ವ್ಯವಸ್ಥೆಯನ್ನು ರಕ್ಷಿಸುವ ಗುರಿಯನ್ನು ಈ ಉಪಕ್ರಮ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಡೆರಹಿತ ತೆರಿಗೆ ಸಂಗ್ರಹಕ್ಕಾಗಿ ಸ್ಮಾರ್ಟ್ ಟೆಕ್
ಪಾರದರ್ಶಕ ತೆರಿಗೆ ಸಂಗ್ರಹಕ್ಕಾಗಿ ಎಲ್ಲಾ ಪ್ರಮುಖ ಕೇಂದ್ರಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ANPR) ಕ್ಯಾಮೆರಾ ಅಳವಡಿಸಲಾಗುತ್ತದೆ. ಇದಕ್ಕಾಗಿ ರಾಜ್ಯದ ಗಡಿಗಳಲ್ಲಿ ಕ್ಯಾಮೆರಾಗಳ ಸಂಖ್ಯೆಯನ್ನು 16 ರಿಂದ 37 ಕ್ಕೆ ಹೆಚ್ಚಿಸಲಾಗಿದೆ ಎಂದು ರಾಜ್ಯದ ಹೆಚ್ಚುವರಿ ಸಾರಿಗೆ ಆಯುಕ್ತ ಸನತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಈ ಕ್ಯಾಮೆರಾಗಳು ಒಳಬರುವ ವಾಹನಗಳ ನೋಂದಣಿ ಸಂಖ್ಯೆಗಳನ್ನು ಸೆರೆಹಿಡಿಯುತ್ತವೆ. ಬಳಿಕ ಡೇಟಾವನ್ನು ಸಂಗ್ರಹಿಸಿ ನಿಯೋಜಿಸಲ್ಪಟ್ಟ ಕಂಪನಿಗೆ ಕಳಿಸುತ್ತವೆ. ಇದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ದೊಂದಿಗೆ ಕಾರ್ಯನಿರ್ವಹಿಸುತ್ತದೆ. ಬಳಿಕ ವಾಹನ ಮಾಲೀಕರ ವ್ಯಾಲೆಟ್ ಸಂಖ್ಯೆಗಳನ್ನು ಹೊಂದಿಸಿ ತೆರಿಗೆ ಮೊತ್ತವನ್ನು ಅವರ ಖಾತೆಗಳಿಂದ ನೇರವಾಗಿ ಸಾರಿಗೆ ಇಲಾಖೆಗೆ ಸೇರುತ್ತದೆ.
ಯಾವ ವಾಹನಕ್ಕೆ ಎಷ್ಟು ತೆರಿಗೆ?
ಸಣ್ಣ ವಾಹನಗಳು: 80 ರೂ.
ಸಣ್ಣ ಸರಕು ಸಾಗಣೆ ವಾಹನಗಳು: 250 ರೂ.
ಬಸ್‌ಗಳು: 140 ರೂ.
ಟ್ರಕ್‌ಗಳು: 120 ರೂ. –700 ರೂ. (ತೂಕವನ್ನು ಅವಲಂಬಿಸಿ) ತೆರಿಗೆ ವಿಧಿಸಲಾಗುತ್ತದೆ.
ಗ್ರೀನ್ ಟ್ಯಾಕ್ಸ್ ಗುರಿ
ಮಾಲಿನ್ಯವನ್ನು ಕಡಿಮೆ ಮಾಡುವುದು- ಹೆಚ್ಚಿನ ಇಂಗಾಲ ಹೊರಸೂಸುವಿಕೆಯನ್ನು ಹೊಂದಿರುವ ಹಳೆಯ ವಾಹನಗಳ ಬಳಕೆ ನಿಯಂತ್ರಣ ಮಾಡುವುದು. ಪರಿಸರ ಸ್ನೇಹಿ ವಾಹನಗಳ ಆಯ್ಕೆಯನ್ನು ಉತ್ತೇಜಿಸುವುದು . ಈ ಮೂಲಕ ಕಡಿಮೆ ಇಂಗಾಲ ಹೊರಸೂಸುವಿಕೆಯ ವಾಹನಗಳು, ಇವಿ ವಾಹನಗಳ ಖರೀದಿಸಲು ಪ್ರೋತ್ಸಾಹಿಸುವುದು.
ಗ್ರೀನ್ ಟ್ಯಾಕ್ಸ್ ಪ್ರಯೋಜನ
* ಹಸಿರು ತೆರಿಗೆ ವಿಧಿಸುವುದರಿಂದ ಜನರು ಪರಿಸರಕ್ಕೆ ಹಾನಿಕಾರಕ ವಾಹನಗಳನ್ನು ಬಳಸುವುದನ್ನು ಮುಂದುವರಿಸುವುದನ್ನು ನಿಯಂತ್ರಿಸಬಹುದು.
* ಅಂತಹ ತೆರಿಗೆಗಳನ್ನು ವಿಧಿಸುವುದರಿಂದ ವಾಹನ ಮಾಲೀಕರು ಹೊಸ, ಕಡಿಮೆ ಮಾಲಿನ್ಯಕಾರಕ ವಾಹನ ಕೊಳ್ಳಲು ಪ್ರೋತ್ಸಾಹಿಸುತ್ತದೆ.
* ಅಂತಹ ತೆರಿಗೆಯ ಮೂಲಕ ಸಂಗ್ರಹಿಸಲಾದ ಆದಾಯವನ್ನು ವಾಯು ಮಾಲಿನ್ಯ ಎದುರಿಸಲು ಕ್ರಮ ಜಾರಿಗೆ ತರಲು ಬಳಸಬಹುದು.
ಹಸಿರು ತೆರಿಗೆ ಇತರ ರಾಜ್ಯಗಳಿಗೆ ಮಾದರಿ?
ಉತ್ತರಾಖಂಡದ ಹೊಸ ಹಸಿರು ತೆರಿಗೆ ವ್ಯವಸ್ಥೆ ಬೇರೆ ರಾಜ್ಯಗಳಿಗೆ ಮಾದರಿಯಾಗಬಹುದು. ಈ ಉಪಕ್ರಮದೊಂದಿಗೆ, ರಾಜ್ಯವು ಪ್ರವಾಸೋದ್ಯಮ ಬೆಳವಣಿಗೆಯನ್ನು ಪರಿಸರ ಸಂರಕ್ಷಣೆಯೊಂದಿಗೆ ಸಮತೋಲನಗೊಳಿಸಬಹುದು.
ಭಾರತದಲ್ಲಿ ಯಾವ ರಾಜ್ಯಗಳಲ್ಲಿ ಹಸಿರು ತೆರಿಗೆ ಜಾರಿಯಲ್ಲಿದೆ?
ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ದಾದ್ರಾ ಮತ್ತು ಹವೇಲಿ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ಗಳು ಹಸಿರು ತೆರಿಗೆ ಜಾರಿಯಲ್ಲಿದೆ.
ಬಂಡೀಪುರದಲ್ಲೂ ಟ್ಯಾಕ್ಸ್
ಬಂಡೀಪುರ ಅಭಯಾರಣ್ಯದ ಮೂಲಕ ತಮಿಳುನಾಡು ಹಾಗೂ ಕೇರಳಕ್ಕೆ ತೆರಳುವ ಕಾರು, ಲಾರಿ ಸೇರಿದಂತೆ ಎಲ್ಲಾ ವಾಹನಗಳಿಂದ 20 ರೂ. ಟ್ಯಾಕ್ಸ್ ಸಂಗ್ರಹ ಮಾಡಲಾಗುತ್ತಿದೆ.
ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಸ್ಥಳೀಯ ನೋಂದಣಿ ವಾಹನಗಳಿಗೆ ರಿಯಾಯಿತಿ ನೀಡಲಾಗಿದ್ದು, ಹೊರ ಜಿಲ್ಲೆ ಹಾಗೂ ಅಂತರರಾಜ್ಯ ವಾಹನಗಳಿಂದ ಮಾತ್ರ ಸುಂಕ ವಸೂಲಿ ಮಾಡಲಾಗುತ್ತಿದೆ. ಕಳೆದ ವರ್ಷ ಇದರಿಂದ 10 ತಿಂಗಳಲ್ಲಿ 4.5 ಕೋಟಿ ರೂ. ಆದಾಯ ಬಂದಿತ್ತು.



