ಮಲೇಷ್ಯಾ ಭಾರತೀಯ ಪ್ರವಾಸಿಗರಿಗೆ ಜನಪ್ರಿಯ ತಾಣವಾಗಿದೆ. ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಭಾರತೀಯರು ಈ ದೇಶಕ್ಕೆ ಭೇಟಿ ನೀಡುತ್ತಾರೆ. ಇದೀಗ ಇನ್ನಷ್ಟು ಭಾರತೀಯರನ್ನು ಆಕರ್ಷಿಸುವ ಸಲುವಾಗಿ ಮಲೇಷ್ಯಾ ಅಧಿಕೃತ ಯುಪಿಐ ಸೇವೆಯನ್ನು ಪ್ರಾರಂಭಿಸಿದೆ. ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆ ಯುಪಿಐ ಮಲೇಷ್ಯಾದಲ್ಲಿ ಬಿಡುಗಡೆಯಾಗುವುದರೊಂದಿಗೆ ಜಾಗತಿಕ ಮೈಲಿಗಲ್ಲನ್ನು ಸಾಧಿಸಿದೆ. ಹಾಗಿದ್ರೆ ಮಲೇಷ್ಯಾದಲ್ಲಿ ಯಪಿಐ ಸೇವೆಯಿಂದ ಭಾರತೀಯರಿಗೆ ಏನೆಲ್ಲಾ ಪ್ರಯೋಜನಗಳಿವೆ? ಯಾವೆಲ್ಲಾ ದೇಶಗಳಲ್ಲಿ ಯುಪಿಐ ಸೇವೆಗಳು ಲಭ್ಯವಿದೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಮಲೇಷ್ಯಾದಲ್ಲಿ ಯುಪಿಐ ಸೇವೆ:
ಯುಪಿಐ ಅಳವಡಿಸಿಕೊಂಡ ಒಂಬತ್ತನೇ ದೇಶ ಎಂಬ ಹೆಗ್ಗಳಿಕೆಗೆ ಮಲೇಷ್ಯಾ ಪಾತ್ರವಾಗಿದೆ. ಎನ್‌ಐಪಿಎಲ್, ರೇಜರ್‌ಪೇ ಕರ್ಲೆಕ್‌ನ ಪಾಲುದಾರಿಕೆಯೊಂದಿಗೆ, ಭಾರತೀಯ ಪ್ರವಾಸಿಗರು ಈಗ ಮಲೇಷ್ಯಾದಲ್ಲಿ ತಮ್ಮ ಯುಪಿಐ ಅಪ್ಲಿಕೇಶನ್‌ಗಳೊಂದಿಗೆ ಸುಲಭವಾಗಿ ಪಾವತಿಸಬಹುದು. ಇದು ನಗದು ಅಗತ್ಯವನ್ನು ಕಡಿಮೆ ಮಾಡುತ್ತದೆ.
ಭಾರತದ ರಾಷ್ಟ್ರೀಯ ಪಾವತಿ ನಿಗಮದ (NPCI) ಅಂತರರಾಷ್ಟ್ರೀಯ ಅಂಗವಾದ NIPL, ಮಲೇಷ್ಯಾದಲ್ಲಿ ಅಧಿಕೃತವಾಗಿ ತನ್ನ ಸೇವೆಗಳನ್ನು ಪ್ರಾರಂಭಿಸಿದೆ. ಇದರೊಂದಿಗೆ, UPI ಸೇವೆಗಳನ್ನು ಅಳವಡಿಸಿಕೊಂಡ ವಿಶ್ವದ ಒಂಬತ್ತನೇ ದೇಶವಾಗಿ ಮಲೇಷ್ಯಾ ಮಾರ್ಪಟ್ಟಿದೆ. ಇದರಿಂದ ಮಲೇಷ್ಯಾಕ್ಕೆ ಭೇಟಿ ನೀಡುವ ಲಕ್ಷಾಂತರ ಭಾರತೀಯ ಪ್ರವಾಸಿಗರಿಗೆ ಬಹಳಷ್ಟು ಪ್ರಯೋಜನಗಳಿವೆ. ಮಲೇಷ್ಯಾದಲ್ಲಿ ಖರೀದಿ ಮಾಡಲು ಇನ್ಮುಂದೆ ಭಾರತೀಯರು ನಗದು ಅಥವಾ ವಿದೇಶಿ ಕರೆನ್ಸಿಯನ್ನು ಅವಲಂಬಿಸಬೇಕಾಗಿಲ್ಲ. ಬದಲಾಗಿ ಯುಪಿಐ ಮೂಲಕ ಪಾವತಿಸಿ ತಮಗೆ ಬೇಕಾದ್ದನ್ನು ಪಡೆದುಕೊಳ್ಳಬಹುದು.
ಕರೆನ್ಸಿ ಬಗೆಗಿನ ಕಳವಳ ದೂರ:
ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (NIPL) ಮಲೇಷ್ಯಾದಲ್ಲಿ ತನ್ನ ಸೇವೆಗಳನ್ನು ನೀಡಲು ಪ್ರಮುಖ ಮಲೇಷಿಯಾದ ಪಾವತಿ ಗೇಟ್‌ವೇ Razorpay Curlec ಜೊತೆ ಪಾಲುದಾರಿಕೆ ಹೊಂದಿದೆ. ಈ ಪಾಲುದಾರಿಕೆಯು ಇಡೀ ವ್ಯವಸ್ಥೆಯ ಬೆನ್ನೆಲುಬಾಗಿ ರೂಪುಗೊಳ್ಳುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಈ ಹೊಸ ವೈಶಿಷ್ಟ್ಯದೊಂದಿಗೆ, ಮಲೇಷ್ಯಾಕ್ಕೆ ಪ್ರಯಾಣಿಸುವ ಭಾರತೀಯ ನಾಗರಿಕರು ಈಗ ತಮ್ಮ ನೆಚ್ಚಿನ UPI ಅಪ್ಲಿಕೇಶನ್‌ಗಳನ್ನು (Google Pay, PhonePe, Paytm, ಇತ್ಯಾದಿ) ಬಳಸಿಕೊಂಡು ಸ್ಥಳೀಯ ವ್ಯಾಪಾರಿಗಳಿಗೆ ನೇರವಾಗಿ ಪಾವತಿಸಲು ಸಾಧ್ಯವಾಗುತ್ತದೆ.
ಈ ವೈಶಿಷ್ಟ್ಯವು Razorpay ಪ್ಲಾಟ್‌ಫಾರ್ಮ್ ಮೂಲಕವೂ ಕಾರ್ಯನಿರ್ವಹಿಸುತ್ತದೆ. ಮಲೇಷ್ಯಾಕ್ಕೆ ಪ್ರಯಾಣಿಸುವ ಭಾರತೀಯರು ಇನ್ನು ಮುಂದೆ ದೊಡ್ಡ ಪ್ರಮಾಣದ ವಿದೇಶಿ ಕರೆನ್ಸಿಯನ್ನು (ಮಲೇಷಿಯನ್ ರಿಂಗಿಟ್) ಖರೀದಿಸಬೇಕಾಗಿಲ್ಲ.ಇನ್ಮುಂದೆ ಈ ದೇಶದಲ್ಲಿ ಪಾವತಿ ಪ್ರಕ್ರಿಯೆಯು ಭಾರತದ ಚಹಾ ಅಂಗಡಿಯಲ್ಲಿ QR ಕೋಡ್ ಸ್ಕ್ಯಾನ್ ಮಾಡುವಷ್ಟು ಸುಲಭವಾಗಿರುತ್ತದೆ.
ಈ ಹೊಸ ವ್ಯವಸ್ಥೆಯು ಭಾರತೀಯ ಪ್ರವಾಸಿಗರಿಗೆ ಪ್ರಯೋಜನವನ್ನು ನೀಡುವುದಲ್ಲದೆ, ಮಲೇಷ್ಯಾದ ಆರ್ಥಿಕತೆ ಮತ್ತು ಸ್ಥಳೀಯ ವ್ಯವಹಾರಗಳಿಗೆ ಎರಡು ಪಟ್ಟು ಪ್ರಯೋಜನಗಳನ್ನು ನೀಡುತ್ತದೆ. ಇಲ್ಲಿಯವರೆಗೆ, ಸೀಮಿತ ಪಾವತಿ ಆಯ್ಕೆಗಳು ಪ್ರವಾಸಿಗರು ಮುಕ್ತವಾಗಿ ಶಾಪಿಂಗ್ ಮಾಡುವುದನ್ನು ತಡೆಯುತ್ತಿತ್ತು. ಆದರೆ UPI ಪರಿಚಯದೊಂದಿಗೆ, ಮಲೇಷ್ಯಾದ ವ್ಯವಹಾರಗಳು (ವ್ಯಾಪಾರಿಗಳು) ಭಾರತೀಯ ಗ್ರಾಹಕರಿಂದ ಪಾವತಿಗಳನ್ನು ಸ್ವೀಕರಿಸುವುದು ಹೆಚ್ಚು ಸುಲಭವಾಗುತ್ತದೆ.
ಪಾವತಿಗಳನ್ನು ಸುಲಭಗೊಳಿಸಿದಾಗ, ಗ್ರಾಹಕರು ಹೆಚ್ಚು ಖರ್ಚು ಮಾಡಲು ಸಿದ್ಧರಿರುತ್ತಾರೆ. ಇದು ಸ್ಥಳೀಯ ವ್ಯವಹಾರಗಳಿಗೆ ನೇರವಾಗಿ ಆದಾಯವನ್ನು ಹೆಚ್ಚಿಸುತ್ತದೆ. ಇದು ಎರಡು ದೇಶಗಳ ನಡುವಿನ ವ್ಯಾಪಾರ ಮತ್ತು ಪ್ರವಾಸೋದ್ಯಮ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಯಾವೆಲ್ಲಾ ದೇಶಗಳಲ್ಲಿ ಯುಪಿಐ ಸೇವೆ ಲಭ್ಯ?
UPI ಈಗಾಗಲೇ ಫ್ರಾನ್ಸ್, ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಮಾರಿಷಸ್, ಶ್ರೀಲಂಕಾ, ಸಿಂಗಾಪುರ್, ಭೂತಾನ್, ನೇಪಾಳ ಮತ್ತು ಕತಾರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈಗ, ಮಲೇಷ್ಯಾ ಒಂಬತ್ತನೇ ದೇಶವಾಗಿ ಪಟ್ಟಿಗೆ ಸೇರಿದೆ. ವಿಶೇಷವಾಗಿ ಮಲೇಷ್ಯಾಕ್ಕೆ ಭೇಟಿ ನೀಡುವ ಲಕ್ಷಾಂತರ ಭಾರತೀಯ ಪ್ರವಾಸಿಗರಿಗೆ ಇದು ಸಹಕಾರಿಯಾಗಲಿದೆ.
ಭಾರತದಲ್ಲಿ ಯುಪಿಐ ಸೌಲಭ್ಯ:
ಭಾರತದಲ್ಲಿ ಬಳಕೆಯಲ್ಲಿರುವ ಡಿಜಿಟಲ್ ಪೇಮೆಂಟ್ ಸಿಸ್ಟಂಗಳ ಪೈಕಿ ಯುಪಿಐ ಕಿಂಗ್ ಎನಿಸಿದೆ. ಶೇ. 84.4ರಷ್ಟು ಡಿಜಿಟಲ್ ಪೇಮೆಂಟ್ಗಳು ಯುಪಿಐನಿಂದ ಆಗುತ್ತಿವೆ. ನೆಫ್ಟ್ ಟ್ರಾನ್ಸ್ಫರ್ ಶೇ. 3.9, ಐಎಂಪಿಎಸ್ ಟ್ರಾನ್ಸ್ಫರ್ ಶೇ 2.1ರಷ್ಟು ಆಗಿರುವುದು ದಾಖಲಾಗಿದೆ.
ಸಣ್ಣ ಮೌಲ್ಯದ ವಹಿವಾಟುಗಳಿಗೆ ಯುಪಿಐ ಹೆಚ್ಚು ಬಳಕೆಯಲ್ಲಿದೆ. ಯುಪಿಐ ವಹಿವಾಟಿಗೆ ದೈನಿಂದಿನ ಮಿತಿ ಮತ್ತಿತರ ನಿರ್ಬಂಧಗಳಿರುವುದರ ಹಿನ್ನೆಲೆಯಲ್ಲಿ ಅಧಿಕ ಮೊತ್ತದ ಟ್ರಾನ್ಸಾಕ್ಷನ್ಗಳಿಗೆ ಯುಪಿಐ ಅನ್ನು ಬಳಕೆ ಮಾಡಲಾಗುವುದಿಲ್ಲ. 2 ಲಕ್ಷ ರೂಗೂ ಅಧಿಕ ಮೊತ್ತದ ಹಣ ಕಳುಹಿಸಲು ಆರ್ಟಿಜಿಎಸ್ ಅನ್ನೇ ಹೆಚ್ಚಾಗಿ ಬಳಸಲಾಗುತ್ತದೆ.
ಇನ್ನು ಭಾರತದಲ್ಲಿ ಅಕ್ಟೋಬರ್ ತಿಂಗಲ್ಲಿ 2,070 ಕೋಟಿ ಸಂಖ್ಯೆಯಷ್ಟು ಯುಪಿಐ ವಹಿವಾಟುಗಳು ದಾಖಲಾಗಿವೆ. ಒಂದು ತಿಂಗಳಲ್ಲಿ 2,000 ಕೋಟಿ ಯುಪಿಐ ವಹಿವಾಟು ದಾಖಲಾಗಿರುವುದು ಇದು ಎರಡನೇ ಬಾರಿ. ಆಗಸ್ಟ್ನಲ್ಲಿ 2,001 ಕೋಟಿಯಷ್ಟು ಯುಪಿಐ ಟ್ರಾನ್ಸಾಕ್ಷನ್ಗಳು ನಡೆದಿದ್ದವು. ಸೆಪ್ಟೆಂಬರ್ ತಿಂಗಳಲ್ಲಿ 1,963 ಕೋಟಿ ಟ್ರಾನ್ಸಾಕ್ಷನ್ಗಳಾಗಿವೆ. ಈಗ ಅಕ್ಟೋಬರ್ನಲ್ಲಿ 2,070 ಕೋಟಿ ಯುಪಿಐ ವಹಿವಾಟುಗಳು ಆಗಿರುವುದು ಹೊಸ ದಾಖಲೆ ಎನಿಸಿದೆ.
ಅಕ್ಟೋಬರ್ ತಿಂಗಳಲ್ಲಿ ನಡೆದ 2,070 ಟ್ರಾನ್ಸಾಕ್ಷನ್ಗಳಿಂದ 27.28 ಲಕ್ಷ ಕೋಟಿ ರೂ. ಮೌಲ್ಯದ ಹಣದ ವಹಿವಾಟು ನಡೆದಿದೆ. ಇದೂ ಕೂಡ ದಾಖಲೆ ಎನಿಸಿದೆ. ಆಗಸ್ಟ್ನಲ್ಲಿ 24.85 ಲಕ್ಷ ಕೋಟಿ ರೂ, ಸೆಪ್ಟೆಂಬರ್ನಲ್ಲಿ 24.90 ಲಕ್ಷ ಕೋಟಿ ರೂ ಮೌಲ್ಯದ ಯುಪಿಐ ವಹಿವಾಟುಗಳು ನಡೆದಿದ್ದವು.

