ಪಕ್ಷಿಗಳ ಸಮೂಹವನ್ನು ಕಾಣುತ್ತಿದ್ದರೆ, ಅವುಗಳ ಚಿಲಿಪಿಲಿ ಸದ್ದನ್ನು ಕೇಳುತ್ತಿದ್ದರೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ತದೇಕಚಿತ್ತದಿಂದ ಆ ಮಧುರ ಧ್ವನಿಗೆ ಕಿವಿಯಾಗುತ್ತಿದ್ದರೆ ಅಂತರಂಗವೂ ಖುಷಿಪಡುತ್ತದೆ. ತಾನೂ ರೆಕ್ಕೆಬಿಚ್ಚಿ ನೀಲಮೇಘಗಳಲ್ಲಿ ಮರೆಯಾಗುತ್ತಾ ಹಾರಾಡಬೇಕು ಎಂದೆನಿಸುತ್ತದೆ. ನೆನಪಿದೆಯಾ ಎಳೆಯರಿದ್ದಾಗ ಪಕ್ಷಿಯ ಚಿತ್ರ ಬರೆಯುವ ಸಂದರ್ಭದಲ್ಲಿ ನಮ್ಮ ಭಾವನೆಗಳಿಗೆ ಆ ಪಕ್ಷಿಯ ಚಿತ್ತಾರದ ಮೂಲಕ ಬಣ್ಣತುಂಬುತ್ತಿದ್ದೆವು. ಚೂಪಾದ ಕೊಕ್ಕು, ದುಂಡಗಿನ ಕಣ್ಣು, ಕೆಂಪನೆಯ ಮುಂಗುರುಳು… ಹೀಗೆ ನಮಗೆ ಇಷ್ಟ ಬಂದ ಆಕಾರವನ್ನು ಅದಕ್ಕೆ ನೀಡುತ್ತಾ ಅವುಗಳನ್ನು ನಮ್ಮ ಪುಟಗಳಲ್ಲಿ ಹಾರಿಸುತ್ತಿದ್ದ ನೆನಪು ನಿನ್ನೆ ಮೊನ್ನೆಯದೋ ಎಂದು ಭಾಸವಾಗುತ್ತಿದೆ.
ಇಂಥ ಸೊಬಗಿನ ಪಕ್ಷಿಗಳ ಲೋಕದಲ್ಲಿ ಮಿಂಚುಳ್ಳಿಗಳೂ ಬಲು ಆಕರ್ಷಣೆಯನ್ನು ಹೊಂದಿವೆ. ನೋಡ ನೊಡುತ್ತಿದ್ದಂತೆ ಮೋಡಿ ಮಾಡುವ ಮಿಂಚುಳ್ಳಿ ಹಕ್ಕಿಯ ಸಂತತಿಯಲ್ಲಿಯೂ ಅನೇಕ ಪ್ರಭೇದಗಳಿವೆ. ಅವುಗಳನ್ನು ನೋಡುತ್ತಿದ್ದಂತೆ ಅವುಗಳ ಬಣ್ಣ, ಮೈಮಾಟ ನಮ್ಮ ಮನಸ್ಸನ್ನು ಸೂರೆಗೊಳ್ಳುತ್ತದೆ. ಇಂತಿರುವ ಮಿಂಚುಳ್ಳಿಗಳ ಕುರಿತ ಪಕ್ಷಿನೋಟದತ್ತ ಒಂದು ಚಿತ್ತ ಹರಿಸೋಣ. ಇದನ್ನೂ ಓದಿ: ಭಾರತಕ್ಕೆ ಬರಲಿದೆ ರಷ್ಯಾ ತೈಲ – ಅಂತಿಮ ಹಂತದಲ್ಲಿ ಮಾತುಕತೆ
ನೀಲಿ ಮಿಂಚುಳ್ಳಿ:
ಮಿಂಚುಳ್ಳಿ ಹಕ್ಕಿಗಳ ಗುಂಪಿನಲ್ಲಿಯೇ ನೀಲಿ ಮಿಂಚುಳ್ಳಿ ಅತ್ಯಂತ ಉಜ್ವಲ ವರ್ಣದ ಹಕ್ಕಿಯಾಗಿದೆ. ಹಳ್ಳಗಳು, ಕೆರೆಗಳ ಪಕ್ಕದಲ್ಲಿ ಒಂಟಿಯಾಗಿ ಕುಳಿತಿರುತ್ತದೆ. ಚುರುಕಾಗಿ ಹಾರಾಡುವ ಇದು ಹಾರುವಾಗ ಚೀ… ಚೀ… ಎಂದು ಕೂಗುತ್ತದೆ. ಕುಳಿತಲ್ಲೇ ಆಗಾಗ್ಗೆ ಕುತ್ತಿಗೆ, ಬಾಲವನ್ನೂ ಮೇಲೆ ಕೆಳಗೆ ಅಲ್ಲಾಡಿಸುತ್ತಿರುತ್ತದೆ. ನೀರು ಹಾಗೂ ನೆಲದ ಮೇಲೆ ತುಂಬಾ ಕೆಳಮಟ್ಟದಲ್ಲಿ ಹಾರುತ್ತದೆ. ಹಾರಾಡುತ್ತ ನಿಲ್ಲುವ ಇವುಗಳು ಮೀನಿಗೆ ಗುರಿ ಇಟ್ಟು ದಿಢೀರನೆ ಬೇಟೆಯಾಡುತ್ತದೆ. ಅಲ್ಲದೆ, ಇದು ಹಿಡಿದ ಮೀನನ್ನು ಕೊಂಬೆಯ ಮೇಲಿಟ್ಟು ಚುಚ್ಚಿ-ಚುಚ್ಚಿ ಕೊಂದು ತಿನ್ನುತ್ತದೆ. ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಸಿಲೋನ್, ಬರ್ಮಾ ದೇಶಗಳ ಅರಣ್ಯ ಪ್ರದೇಶಗಳಲ್ಲಿ ನೀಲಿ ಮಿಂಚುಳ್ಳಿ ಹೆಚ್ಚಾಗಿ ಕಾಣಸಿಗುತ್ತದೆ.
ಗದ್ದೆ ಮಿಂಚುಳ್ಳಿ:
ಇದು ನೀರಿಲ್ಲದ ಹೊಲಗದ್ದೆಗಳಲ್ಲಿ ಹೆಚ್ಚಾಗಿ ಇರುವುದರಿಂದ ಎಲ್ಲರಿಗೂ ಪರಿಚಿತವಾದ ಹಕ್ಕಿ. ಟೆಲಿಗ್ರಾಫ್ ತಂತಿಗಳ ಮೇಲೆ ಹೊಲಗದ್ದೆಗಳ ಬಳಿ ಸುಳಿದಾಡುವುದರಿಂದ ಇತರ ಮಿಂಚುಳ್ಳಿ ಹಕ್ಕಿಗಳಂತೆ ನೀರಿಗೆ ಧುಮುಕುವುದು ಅಪರೂಪ. ಚಿಯಾಂ ಪಿಯಾ ಎಂದು ಕೂಗಿಕೊಂಡು ಹಾರುವಾಗ ಇದು ಆಕರ್ಷಕವಾಗಿ ಕಾಣುತ್ತದೆ. ಗೂಡು ಕಟ್ಟುವುದರಲ್ಲಿ ವಿಶೇಷತೆಯನ್ನು ತೋರುತ್ತಾ ಇತರ ಹಕ್ಕಿಗಳಿಗಿಂತ ಭಿನ್ನತೆಯನ್ನು ತೋರಿಸುತ್ತದೆ. ಇದನ್ನೂ ಓದಿ: ಪುರಿ ಬೀಚ್‍ನಲ್ಲಿ ಅರಳಿತು ‘ದಿ ಕಾಶ್ಮೀರ್ ಫೈಲ್ಸ್’
ಮಾರ್ಚ್ ತಿಂಗಳಿನಿಂದ ಜುಲೈವರೆಗೆ ಪ್ರಪಾತಗಳ ಗೋಡೆಗಳಲ್ಲಿ ನೆಲಕ್ಕೆ ಸಮಾನಾಂತರವಾಗಿ ಪೊಟರೆ ಕೊರೆದು ಗೂಡು ಕಟ್ಟುತ್ತವೆ. ಮಿಡತೆ, ಓತಿಕ್ಯಾತ, ಕಪ್ಪೆ, ಏಡಿ, ಮೀನನ್ನು ಆಹಾರವಾಗಿ ತಿನ್ನುವ ಗದ್ದೆ ಮಿಂಚುಳ್ಳಿ ಹಕ್ಕಿಯನ್ನು ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಸಿಲೋನ್, ಬರ್ಮಾ ದೇಶಗಳಲ್ಲಿ ಅದರಲ್ಲೂ, ಕಡಿಮೆ ನೀರಿನ ವಾತಾವರಣ ಇರುವ ಪ್ರದೇಶದಲ್ಲಿ ಕಾಣಬಹುದು.
ಕಪ್ಪು- ಬಿಳುಪು ಮಿಂಚುಳ್ಳಿ:
ನೋಡಲು ಆಕರ್ಷಕವಾಗಿರುವ ಬಿಳಿ ಮಿಂಚುಳ್ಳಿ, ಚಿಟ್ಟೆಬುರುಕ ಎಂಬ ಹೆಸರಿನಿಂದಲೂ ಕರೆಸಿಕೊಳ್ಳುತ್ತದೆ. ಈ ಕಪ್ಪು-ಬಿಳುಪು ಮಿಂಚುಳ್ಳಿ ಒಂಟಿಯಾಗಿ ಅಥವಾ ಜೋಡಿಯಾಗಿ ಕೆರೆ, ಹೊಳೆ, ನೀರು ನಿಂತ ಗದ್ದೆಗಳು, ಸಮುದ್ರದ ಹಿನ್ನೀರಲ್ಲಿ ಇರುತ್ತವೆ. ನೀರಿನ ಪಕ್ಕದ ಬಂಡೆಗಳ ಮೇಲೋ, ಮರಗಳ ಕೊಂಬೆಗಳ ಮೇಲೋ ಕುಳಿತಾಗ ಆಗಿಂದಾಗ್ಗೆ ತಲೆ, ಬಾಲವನ್ನು ಮೇಲೆ ಕೆಳಗೆ ಮಾಡುತ್ತಿರುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಮೀನುಗಳನ್ನು ಹಿಡಿಯುವಾಗ ನಿಂತಲ್ಲೇ ನಿಂತು ಗುರಿಯಿಡಬಲ್ಲಷ್ಟು ಚತುರತೆ ಈ ಹಕ್ಕಿಗಳಿಗೆ ಪ್ರಕೃತಿ ನೀಡಿದೆ.
ಮೀನು, ಕಪ್ಪೆಗಳನ್ನು ಹಿಡಿದು ಬಂಡೆಗಳ ಮೇಲಿಟ್ಟು ಚುಚ್ಚಿ ಚುಚ್ಚಿ ಕೊಂದು ತಿನ್ನುತ್ತವೆ. ಮಾರ್ಚ್ ತಿಂಗಳಿನಿಂದ ಜೂನ್ ವರೆಗೆ ಹೊಳೆಯ ಕಡಿದಾದ ದಂಡೆಗಳಲ್ಲಿ ಭೂಮಿಗೆ ಸಮಾನಾಂತರವಾಗಿ ಪೊಟರೆ ಕೊರೆದು ಗೂಡು ಮಾಡಿಕೊಳ್ಳುತ್ತವೆ. ಭಾರತ, ಬಂಗ್ಲಾದೇಶ, ಬರ್ಮಾ, ಪಾಲಿಸ್ತಾನ, ಸಿಲೋನ್ ಪ್ರದೇಶದಲ್ಲಿ ಈ ಹಕ್ಕಿಯನ್ನು ಕಾಣಬಹುದು.
ಹಿಂದೆ ಸಂದೇಶ ರವಾನಿಸುವ ವಾಹಕವನ್ನಾಗಿ ಬಳಸುತ್ತಿದ್ದ ಪಕ್ಷಿಗಳನ್ನು ಇಂದು, ಮನರಂಜನಾ ದೃಷ್ಟಿಯಿಂದ ನೋಡಿ ಖುಷಿಪಡುವಂಥ ಸ್ಥಿತಿ ಇದೆ.
ಮಾಹಿತಿ ಸಂಗ್ರಹ- ಎಸ್.ವರ್ಷಿಣಿ (ಪಕ್ಷಿತಜ್ಞೆ), ಅನಿಲ್ ಅಂತರಸಂತೆ (ವನ್ಯಜೀವಿ ಛಾಯಾಗ್ರಾಹಕ)