ಬ್ಲೂ ಫ್ಲ್ಯಾಗ್ ಖ್ಯಾತಿಯ ಶುಭ್ರ, ಸುಂದರ ಉಡುಪಿಯ ಪಡುಬಿದ್ರೆ ಬೀಚ್‌!

Public TV
3 Min Read
BLUE FLAG BEACH 1

– ದೀಪಕ್‌ ಜೈನ್‌
ಉಡುಪಿ: ಉಡುಪಿ (Udupi) ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಿಗೇನೂ ಕೊರತೆಯಿಲ್ಲ.. ಒಂದೆಡೆ ದೇವಸ್ಥಾನಗಳ ಸಾಲು ಸಾಲಾದರೆ, ಇನ್ನೊಂದು ಕಡೆ ಕಡಲ ತಡಿಯ ನಿನಾದ. ಕಳೆದ ಸಂಚಿಕೆಯಲ್ಲಿ ನಾವು ನಿಮಗೆ ಪಡುಕೆರೆ ಬೀಚ್‌ ಬಗ್ಗೆ ಮಾಹಿತಿ ನೀಡಿದ್ದೆವು. ಈ ಬಾರಿ ನಾವು ಹೇಳ್ತಿರೋದು ಪಡುಬಿದ್ರೆ ಬೀಚ್‌ (Padubidri Beach) ವಿಶೇಷ. ಮಂಗಳೂರು ಮೂಲಕ ಉಡುಪಿ ಜಿಲ್ಲೆ ಪ್ರವೇಶಿಸಿ ಪಡುಬಿದ್ರೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದರೆ ನೀವು ಬ್ಲೂ ಫ್ಲ್ಯಾಗ್ ಬೀಚ್ (Blue Flag Beach) ತಲುಪಬಹುದು.

ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಗಡಿಯಿಂದ ಉತ್ತರ ಕನ್ನಡ ಜಿಲ್ಲೆಯ ಗಡಿಯವರೆಗಿನ ಅರಬ್ಬಿ ಸಮುದ್ರದ 107 ಕಿಲೋಮೀಟರ್ ವ್ಯಾಪ್ತಿಯಲ್ಲಿ ಉಡುಪಿ ಜಿಲ್ಲೆ ಆವರಿಸಿಕೊಂಡಿದೆ. ಜಿಲ್ಲೆಯ 7 ತಾಲೂಕುಗಳ ಪೈಕಿ 6 ತಾಲೂಕಿನಲ್ಲಿ ಕಡಲ ತಡಿಯಿದೆ. ಕಾಪು ತಾಲೂಕಿನ ಪಡುಬಿದ್ರೆ ಬ್ಲೂ ಫ್ಲ್ಯಾಗ್ ಬೀಚ್ ಈ ದೇಶದ ಒಂದು ಹೆಮ್ಮೆ. ಇದನ್ನೂ ಓದಿ: ಮಾಲ್ಡೀವ್ಸ್‌ ನಾಚಿಸುವ ಸಾಗರ ತೀರಗಳು ನಮ್ಮ ಕರಾವಳಿಯಲ್ಲೇ ಇವೆ ಕಣ್ತುಂಬಿಕೊಳ್ಳಿ..!

BLUE FLAG BEACH 2

ಡೆನ್ಮಾರ್ಕ್ ಸಂಸ್ಥೆಯಿಂದ ಸತತ ಮೂರನೇ ಬಾರಿಗೆ ಈ ಮಾನ್ಯತೆಯನ್ನು ಉಡುಪಿಯ ಪಡುಬಿದ್ರೆ ಬೀಚ್ ಪಡೆದಿದೆ. ಬ್ಲೂ ಫ್ಲ್ಯಾಗ್ ಬೀಚ್ ನಿರ್ವಹಣೆ ಕಳಪೆಯಾದರೆ, ನಿಯಮ ಮೀರಿದರೆ ಮಾನ್ಯತೆ ವಾಪಸ್ ಪಡೆಯುವ ಎಲ್ಲಾ ಅವಕಾಶವಿದೆ.

ಏನಿದು ಬ್ಲೂ ಫ್ಲ್ಯಾಗ್‌ ಬೀಚ್?
ಬ್ಲೂ ಫ್ಲ್ಯಾಗ್ ಅಥವಾ ನೀಲಿ ಪತಾಕೆ ಕಡಲ ತಡಿಗಳಿಗೆ ಸಿಗುವ ಗೌರವಾನ್ವಿತ ಮಾನ್ಯತೆ. ಡೆನ್ಮಾರ್ಕ್‌ ದೇಶ ಪರಿಸರ ಶಿಕ್ಷಣಕ್ಕಾಗಿ ಫೌಂಡೇಶನ್ ಈ ಮಾನ್ಯತೆಯನ್ನು ನೀಡುತ್ತದೆ. ಭಾರತದಲ್ಲಿ ಒಟ್ಟು 8 ಬೀಚ್‌ಗಳಿಗೆ ಬ್ಲೂ ಫ್ಲ್ಯಾಗ್ ಮಾನ್ಯತೆ ಲೇಬಲ್ ನೀಡಲಾಗಿದೆ. ಬೀಚಿನ ಶುಚಿತ್ವ ಪರಿಸರ, ಬರುವ ಪ್ರವಾಸಿಗರಿಗೆ ಸಿಗುವ ವ್ಯವಸ್ಥೆಗಳು, ಅಲ್ಲಿನ ಸಿಬ್ಬಂದಿ ವರ್ಗದ ಮೇಲ್ವಿಚಾರಣೆ, ಮರಳಿನ ಗುಣಮಟ್ಟ ಈ ಮಾನ್ಯತೆಯನ್ನು ಪ್ರಮುಖವಾಗಿ ನಿರ್ಧರಿಸುತ್ತದೆ. ಇದನ್ನೂ ಓದಿ: ಲಕ್ಷದ್ವೀಪದ ರೋಚಕ ಇತಿಹಾಸ, ಇಲ್ಲಿರುವ ಪ್ರವಾಸಿ ತಾಣಗಳು ಯಾವುವು..?

ನೀಲಿ ಪತಾಕೆ ಎಂಬ ಗೌರವ ಗೆಲ್ಲಲು ಬೀಚ್ ಒಟ್ಟು 33 ಮಾನದಂಡಗಳನ್ನು ಅನುಸರಿಸಬೇಕು. ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡು ಮತ್ತು ಪಡುಬಿದ್ರಿ ಕರ್ನಾಟಕದ ಎರಡು ಅತ್ಯಂತ ಸುಂದರ ಶುಭ್ರ ಬೀಚ್ ಗಳು. ಸ್ವಚ್ಛ ಮತ್ತು ಬಹಳ ಕಾಲ ಸುಸ್ಥಿತಿಯನ್ನು ಕಾಪಾಡಿಕೊಂಡು ಬಂದ ಕಡಲ ತೀರಗಳೆಂಬ ಖ್ಯಾತಿ.

ಪಡುಬಿದ್ರೆ ಬೀಚ್ ಬಹಳ ಶಾಂತಿಯುತ ಮತ್ತು ಪ್ರಶಾಂತವಾಗಿದೆ. ಈ ಬೀಚ್ ವ್ಯಾಪ್ತಿಯಲ್ಲಿ ಎಲ್ಲೂ ಕಸ ಕಡ್ಡಿ ಪ್ಲಾಸ್ಟಿಕ್ ಸಿಗೋದೇ ಇಲ್ಲ. ಮಷಿನ್ ಬಳಸಿ ಮರಳನ್ನು ಶುಚಿ ಮಾಡಲಾಗುತ್ತದೆ. ಇದನ್ನೂ ಓದಿ: ಲಕ್ಷದ್ವೀಪದ ಬೀಚ್‌ನಲ್ಲಿ ಮೋದಿ ಕೂಲ್‌; ಇಲ್ಲಿದೆ ನೋಡಿ PHOTOS

BLUE FLAG BEACH 3

ವಿಶೇಷತೆ ಏನು..?
ಬೀಚಲ್ಲೇ ಘನ ತ್ಯಾಜ್ಯ ನಿರ್ವಹಣಾ ಘಟಕಗಳು, ಗ್ರೇವಾಟರ್ ಸಂಸ್ಕರಣಾ ಘಟಕಗಳು, ಆಸನ ವ್ಯವಸ್ಥೆಗಳು, ಶುದ್ಧ ಕುಡಿಯುವ ನೀರು, ವಾಶ್‌ರೂಮ್, ಬಟ್ಟೆ ಬದಲಾಯಿಸುವ ಕೊಠಡಿ, ಸ್ನಾನದ ಸೌಲಭ್ಯ, ಅಂಗವಿಕಲರ ಸ್ನೇಹಿ ಮತ್ತು ಸಾಮಾನ್ಯ ಶೌಚಾಲಯಗಳು, ಪಾರ್ಕಿಂಗ್ ಸೌಲಭ್ಯಗಳು, ಸೌರ ವಿದ್ಯುತ್ ಸ್ಥಾವರಗಳು ಮತ್ತು ಸೌರ ದೀಪಗಳನ್ನು ಹೊಂದಿವೆ.

ಸೂರ್ಯಾಸ್ತ ಮತ್ತು ಸೂರ್ಯೋದಯಗಳನ್ನು ವೀಕ್ಷಿಸಲು ಉತ್ತಮವಾಗಿದೆ. ಆರೋಗ್ಯಕರವಾಗಿ ತಯಾರಿಸಿದ ಆಹಾರವನ್ನು ಮಾರಾಟ ಮಾಡುವ ಆಹಾರ ಮಳಿಗೆಗಳು ಮತ್ತು ಪಡುಬಿದ್ರಿ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ನಿಗಾ ಇರಿಸುವ ಜೀವರಕ್ಷಕರನ್ನು ಸಹ ಹೊಂದಿದೆ. ಪಡುಬಿದ್ರೆ ಬ್ಲೂ ಫ್ಲ್ಯಾಗ್ ಬೀಚ್ ಉಡುಪಿ ಜಿಲ್ಲೆಗೆ ರಾಜ್ಯಕ್ಕೆ ಹೆಮ್ಮೆಯ ಪ್ರವಾಸಿತಾಣ. ಪ್ರವಾಸೋದ್ಯಮ ಅಭಿವೃದ್ಧಿಗೆ ದೇಶ ವಿದೇಶದ ಮಂದಿಯನ್ನು ಸೆಳೆಯಲು ಅತ್ಯವಶ್ಯಕ. ಇದನ್ನೂ ಓದಿ: ಲಕ್ಷದ್ವೀಪದಲ್ಲಿ ಮೋದಿ ಸ್ನಾರ್ಕ್ಲಿಂಗ್ – ಫೋಟೋಗಳು ಸಿಕ್ಕಾಪಟ್ಟೆ ವೈರಲ್‌!

ಆಸುಪಾಸಿನಲ್ಲೇನಿದೆ..?
ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಮಹಾಲಿಂಗೇಶ್ವರ, ಮಹಾಗಣಪತಿ ದೇಗುಲ ಸಹಿತ, ಗುಡಿ, ದೇವಸ್ಥಾನ, ಭಜನಾ ಮಂದಿರಗಳು ಸುತ್ತಮುತ್ತ ಇವೆ.

ಎಷ್ಟು ದೂರ..?
ಮಂಗಳೂರಿನಿಂದ 40 ಕಿ.ಮೀ. ದೂರವಿದೆ. ಉಡುಪಿಯಿಂದ ಮಂಗಳೂರು ಮಾರ್ಗವಾಗಿ 36 ಕಿಲೋ ಮೀಟರ್ ಪ್ರಯಾಣಿಸಬೇಕು. ನಿಗದಿತ ಬಸ್ಸು, ಕ್ಯಾಬ್, ಆಟೋ ಮೂಲಕ ಹೋಗಬಹುದು. ಉಳಿದುಕೊಳ್ಳಲು ಖಾಸಗಿ ಹೋಮ್ ಸ್ಟೇಗಳಿವೆ. ಪಡುಬಿದ್ರೆಯಲ್ಲಿ ಉಳಿದುಕೊಂಡು ಬೀಚ್‌ಗೆ ತೆರಳಬಹುದು.

Share This Article