-1.10ಲಕ್ಷ ಸಿಬ್ಬಂದಿಗೆ 25%ರಷ್ಟು ವೇತನ ಹೆಚ್ಚಿಸುವಂತೆ ಪಟ್ಟು
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಸಿಡಿದೆದ್ದಿದ್ದಾರೆ. ಮತ್ತೆ ಮುಷ್ಕರಕ್ಕೆ ಪ್ಲ್ಯಾನ್ ಮಾಡಿದ್ದು, ಪ್ರತಿಭಟನೆ ಸಂಬಂಧ ಇಂದು (ಜು.3) ಮಹತ್ವದ ಸಭೆ ನಡೆಸಲು ನಾಲ್ಕು ನಿಗಮದ ನೌಕರ ಸಂಘಟನೆಗಳು ಮುಂದಾಗಿವೆ.
ಸಾರಿಗೆ ನೌಕರರು ಮತ್ತೆ ಸರ್ಕಾರದ ಮುಂದೆ ಅನೇಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ್ದಾರೆ. ಕಳೆದ ವರ್ಷ ಕೂಡ ಬಸ್ ನಿಲ್ಲಿಸಿ ಹೋರಾಟಕ್ಕೆ ಮುಂದಾಗುವ ಎಚ್ಚರಿಕೆ ನೀಡಿದ್ದರು. ಆದರೆ ಸರ್ಕಾರ ಕಳೆದ ಡಿಸೆಂಬರ್‌ನಲ್ಲಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಮೂಲಕ ಮುಖ್ಯಮಂತ್ರಿಗಳ (Siddaramaiah) ಭೇಟಿಯ ಭರವಸೆ ನೀಡಿ ಮುಷ್ಕರಕ್ಕೆ ಮುಂದಾಗದಂತೆ ಮನವಿ ಮಾಡಿ ಮನವೊಲಿಸಿದ್ದರು. ಅದಾದ ಬಳಿಕ ಮತ್ತೆ ಸಿಎಂ ಭೇಟಿಯಾಗಿದ್ದ ಸಂಘಟನೆಯ ಮುಖಂಡರಿಗೆ ಬೇಡಿಕೆ ಈಡೇರಿಸುವ ಭರವಸೆ ನೀಡಲಾಗಿತ್ತು. ಆದರೆ ಭರವಸೆ ನೀಡಿ ತಿಂಗಳುಗಳೇ ಉರುಳಿದ್ದರೂ ಕೂಡ ಸರ್ಕಾರ ಮಾತ್ರ ಈ ಬಗ್ಗೆ ಯಾವುದೇ ವಿಚಾರಕ್ಕೂ ಮುಂದಾಗಿಲ್ಲ. ಇದು ನೌಕರರನ್ನ ಮತ್ತೆ ಕೆರಳುವಂತೆ ಮಾಡಿದೆ. ಇದೇ ಕಾರಣಕ್ಕೆ ಸಭೆ ಮಾಡಿ ಇಂದು ಮುಷ್ಕರದ ಬಗ್ಗೆ ನಿರ್ಧಾರ ಮಾಡಲು ಮುಂದಾಗಿದ್ದಾರೆ.ಇದನ್ನೂ ಓದಿ: ನಿವೃತ್ತ ಡಿಜಿ ಓಂಪ್ರಕಾಶ್ ಪುತ್ರಿಯಿಂದ ದಾಂಧಲೆ – ನಂದಿನಿ ಪಾರ್ಲರ್‌ಗೆ ನುಗ್ಗಿ ವಸ್ತುಗಳು ಪೀಸ್ ಪೀಸ್
ಇನ್ನೂ ಸರ್ಕಾರ 25%ರಷ್ಟು ವೇತನ ಹೆಚ್ಚಳ ಮಾಡಬೇಕು ಎನ್ನುವುದು ನೌಕರರ ಪ್ರಮುಖ ಪಟ್ಟು. ಒಟ್ಟು ನಾಲ್ಕು ನಿಗಮಗಳು ಸೇರಿ, 1.10 ಲಕ್ಷ ಸಿಬ್ಬಂದಿಯಿದ್ದು, ಎಲ್ಲರಿಗೂ ವೇತನ ಹೆಚ್ಚಳ ಮಾಡಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಇದೇ ಸಂಬಂಧ ನಾಲ್ಕು ನಿಗಮದ ನೌಕರ ಸಂಘಟನೆಗಳ ಪ್ರಮುಖರು ಇಂದು ಒಟ್ಟಾಗಿ ಸಭೆ ಮಾಡಲಿದ್ದಾರೆ. ಸಭೆಯಲ್ಲಿ ಮುಂದಿನ ಹೋರಾಟ ಮತ್ತು ಬಂದ್‌ನ ದಿನಾಂಕ ಕೂಡ ಘೋಷಣೆ ಸಾಧ್ಯತೆ ಇದೆ. ಇಂದು ಸಂಜೆ 4:00 ಗಂಟೆಗೆ ಸಭೆಯಲ್ಲಿ ಎಲ್ಲಾ ನೌಕರರ ಸಂಘಟನೆಗಳು ಭಾಗಿಯಾಗಿ ಅಂತಿಮ ನಿರ್ಧಾರ ಮಾಡಲಿವೆ.
ಒಟ್ಟಾರೆ, ಇಂದಿನ ಸಭೆಯಲ್ಲಿ ನೌಕರ ಸಂಘಟನೆಗಳ ಹೋರಾಟದ ರೂಪುರೇಷೆ ಗೊತ್ತಾಗಲಿದೆ. ಆದರೆ ಸರ್ಕಾರ ನೌಕರರ ಹೋರಾಟದ ಎಚ್ಚರಿಕೆಗೆ ಬಗ್ಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.ಇದನ್ನೂ ಓದಿ: ಉತ್ತರ ಕನ್ನಡ – ಎರಡು ತಾಲೂಕುಗಳ ಶಾಲೆಗಳಿಗೆ ಇಂದು ರಜೆ ಘೋಷಣೆ