ಚಿಕ್ಕಬಳ್ಳಾಪುರ: ಅನುಮಾನಾಸ್ಪದ ರೀತಿಯಲ್ಲಿ ಮಂಗಳಮುಖಿ ಪೂಜಾರಿ ಹಾಗೂ ಪೂಜಾರಿ ಶಿಷ್ಯ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಬಳಿಯ ಗುಟ್ಟಹಳ್ಳಿಯಲ್ಲಿ ನಡೆದಿದೆ.
ಶ್ರೀಧರ್(33) ಆಲಿಯಾಸ್ ಅಮ್ಮ ಹಾಗೂ ಶ್ರೀಧರ್ ಸಹಾಯಕ್ಕೆ ಇದ್ದ ಶಿಷ್ಯ ಲಕ್ಷ್ಮೀಪತಿ(31) ಮೃತ ದುರ್ದೈವಿಯಾಗಿದ್ದು, ಗುಟ್ಟಹಳ್ಳಿ ಗ್ರಾಮದ ಶ್ರೀ ಆದಿಶಕ್ತಿ ಕೊಳಾಲಮ್ಮ ದೇವಾಲಯದ ಕೊಠಡಿಯಲ್ಲಿ ಇಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಂಡ ಪ್ರಕಟ- ಅಜಿಂಕ್ಯ ರಹಾನೆ ಕ್ಯಾಪ್ಟನ್
ಅಂದಹಾಗೆ ಬನಹಳ್ಳಿ ನಿವಾಸಿ ಶ್ರೀಧರ್ ಮಂಗಳಮುಖಿಯಾಗಿದ್ದು, 10-12 ವರ್ಷಗಳ ಹಿಂದೆ ಗುಟ್ಟಹಳ್ಳಿಗೆ ಬಂದು ಚಿಕ್ಕ ಗುಡಿಯನ್ನು ಕಟ್ಟಿಕೊಂಡಿದ್ದರು. ತಮಗೆ ಮೈ ಮೇಲೆ ದೇವರು ಬರುತ್ತೆ ಅಂತ ದೇವಾಲಯಕ್ಕೆ ಬರುವ ಭಕ್ತರ ಕಷ್ಟಗಳನ್ನು ಕೇಳಿ ಪರಿಹಾರಗಳನ್ನು ಕೊಡುತ್ತಿದ್ದರಂತೆ. ಹೀಗೆ ಗುಟ್ಟಹಳ್ಳಿ ಸೇರಿದಂತೆ ಸುತ್ತ ಮುತ್ತಲು ಅಪಾರ ಭಕ್ತರನ್ನು ಹೊಂದಿದ್ದ ಶ್ರೀಧರ್ ಅಮ್ಮ ಅಂತಲೇ ಕೆರೆಸಿಕೊಳ್ಳುತ್ತಿದ್ದರು. ಆದರೆ ಕಳೆದ ರಾತ್ರಿ ಅದೇನಾಯ್ತೋ ಏನೋ ಪೂಜಾರಿ ಶ್ರೀಧರ್ ಹಾಗೂ ಲಕ್ಷೀಪತಿ ಇಬ್ಬರು ಸಾವನ್ನಪ್ಪಿದ್ದಾರೆ.
ಶ್ರೀ ಕ್ಷೇತ್ರ ಕೈವಾರ ಪಕ್ಕದ ಗುಟ್ಟಹಳ್ಳಿ ಬಳಿ ಘಟನೆ ನಡೆದಿದ್ದು, ಅಮ್ಮನ ಅಪಾರ ಭಕ್ತರು ಕಣ್ಣಿರುಡುತ್ತಿದ್ದಾರೆ. ಇನ್ನೂ ಈ ಶ್ರೀಧರ್ ಆಲಿಯಾಸ್ ಅಮ್ಮ ಪ್ರತಿನಿತ್ಯ ದೇವಾಲಯದಲ್ಲಿ ಅನ್ನದಾನ ಸೇರಿದಂತೆ ಭಕ್ತರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದರಂತೆ. ಕೊರೊನಾ ಸಮಯದಲ್ಲಿ ಚಿಂತಾಮಣಿ ನಗರದಲ್ಲಿ ಹಲವರಿಗೆ ಅನ್ನದಾನ ಸೇರಿದಂತೆ ಸಮಾಜಮುಖಿ ಕಾರ್ಯಗಳನ್ನು ಮಾಡಿ ಗುರುತಿಸಿಕೊಂಡಿದ್ದರು. ಸದ್ಯ ಘಟನೆ ನಂತರ ಪೊಲೀಸರು ಆಗಮಿಸಿ ಇಬ್ಬರ ಮೃತದೇಹಗಳನ್ನ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಇಬ್ಬರು ಆತ್ಯಹತ್ಯೆ ಮಾಡಿಕೊಂಡರಾ ಇಲ್ಲಾ ಯಾರಾದರೂ ಕೊಲೆ ಮಾಡಿದ್ದರಾ ಈ ಬಗ್ಗೆ ಪೊಲೀಸರ ತನಿಖೆಯಿಂದ ಸತ್ಯಾಂಶ ತಿಳಿಯಬೇಕಿದೆ. ಇದನ್ನೂ ಓದಿ: ನಮ್ಮ ಕುಟುಂಬಕ್ಕೆ MLC ಟಿಕೆಟ್ ಕೊಡಬೇಕು ಅಂತ ಹೇಳಿಲ್ಲ, ಕೇಳಿಲ್ಲ: ಪ್ರಜ್ವಲ್ ರೇವಣ್ಣ
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‍ಪಿ ಮಿಥುನ್ ಕುಮಾರ್, ಡೆತ್ ನೋಟ್ ಸಿಕ್ಕಿದ್ದು ಡೆತ್ ನೋಟ್ ಆಧರಿಸಿ ತನಿಖೆ ನಡೆಸುತ್ತಿದ್ದೇವೆ. ಇಬ್ಬರ ಕುತ್ತಿಗೆಗಳ ಮೇಲೆ ಮಾರ್ಕ್ ಇದ್ದು ಆತ್ಮಹತ್ಯೆ ಎಂಬ ಸಾಧ್ಯತೆ ಇದ್ದರೂ ಅನುಮಾನಸ್ಪದ ಪ್ರಕರಣ ಅಂತಲೇ ಪರಿಗಣಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.