Districts

24 ಗಂಟೆಯೊಳಗೆ ರೈತರ ಪಂಪ್‍ಸೇಟ್‍ಗೆ ಟ್ರಾನ್ಸ್​ಫಾರ್ಮರ್ ವ್ಯವಸ್ಥೆ ಮಾಡಿ: ಸುನಿಲ್ ಕುಮಾರ್

Published

on

Share this

ಕಲಬುರಗಿ: ಗ್ರಾಮೀಣ ಭಾಗದಲ್ಲಿ ದುರಸ್ತಿಗೊಳಗಾದ ವಿದ್ಯುತ್ ಟ್ರಾನ್ಸ್​ಫಾರ್ಮರ್(ಪರಿವರ್ತಕ)ಗಳ ಬದಲಾವಣೆಯನ್ನು 24 ಗಂಟೆಯೊಳಗೆ ಮಾಡಲೇಬೇಕು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜೆಸ್ಕಾಂ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ಜೆಸ್ಕಾಂ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಯಾವುದೇ ಕಾರಣವಿಲ್ಲದೇ ಟ್ರಾನ್ಸ್​ಫಾರ್ಮರ್ ಬದಲಾವಣೆ ಪ್ರಕ್ರಿಯೆಯಲ್ಲಿ ವಿಳಂಬ ಮಾಡಬಾರದು ಎಂದು ತಾಕೀತು ಮಾಡಿದರು. ಟ್ರಾನ್ಸ್​ಫಾರ್ಮರ್ ಬದಲಾವಣೆ ಸಂಬಂಧ ರೈತರಲ್ಲಿ ಕೆಲ ಸಿಬ್ಬಂದಿ ಹಣದ ಬೇಡಿಕೆ ಇಡುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಮುಂದಿನ ದಿನಗಳಲ್ಲಿ ಯಾರಾದರೂ ಇಂತಹ ಬೇಡಿಕೆ ಇಟ್ಟಲ್ಲಿ, ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ, ಇಂತಹ ಪ್ರಕರಣಗಳ ಕೈಬಿಡುವಂತೆ ಯಾರಾದರೂ ಪ್ರಭಾವಿ ವ್ಯಕ್ತಿಗಳ ಮೂಲಕ ನನ್ನ ಮೇಲೆ ಒತ್ತಡ ಹೇರಲು ಮುಂದಾದರೆ ನಾನು ಯಾವುದಕ್ಕೂ ಜಗ್ಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಗಂಗಾ ಕಲ್ಯಾಣ ಯೋಜನೆಯಡಿ ನೋಂದಾಯಿತ ಫಲಾನುಭವಿ ರೈತರ ಪಂಪ್‍ಸೇಟ್‍ಗಳಿಗೆ ಯಾವುದೇ ವಿಳಂಬವಿಲ್ಲದೇ 30 ದಿನಗಳಲ್ಲಿ ವಿದ್ಯುತ್ ಪೂರೈಸಬೇಕು. ಇತ್ತೀಚೆಗೆ ತೋಟದ ಮನೆಗಳು ಹೆಚ್ಚಾಗುತ್ತಿದ್ದು, ಆದರೆ ಈ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಸವಾಲಾಗಿದೆ. ಪುಟ್ಟ-ಪುಟ್ಟ ಮಕ್ಕಳು, ಜಾನುವಾರುಗಳು ಇಂತಹ ಮನೆಗಳಲಿದ್ದು, ರಾತ್ರಿ ವೇಳೆ ಕತ್ತಲೆಯಲ್ಲಿ ದಿನದೂಡಬೇಕಾಗಿದೆ. ಇಂತಹ ತೋಟದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವೈಜ್ಞಾನಿಕವಾಗಿ ಕ್ರಮಕೈಗೊಳ್ಳಬೇಕು. ಮೊದಲು ಜಿಲ್ಲೆಯಲ್ಲಿ ತೋಟದ ಮನೆಗಳು ಎಷ್ಟು ಇವೆ ಎಂಬುವುದನ್ನು ಸಮೀಕ್ಷೆ ಮಾಡಬೇಕು. ಬಳಿಕ ಯಾವ ವಿಧಾನದ ಮೂಲಕ ಈ ತೋಟದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬಹುದು ಎಂಬುದರ ಬಗ್ಗೆ ಮೂರು ತಿಂಗಳಲ್ಲಿ ಯೋಜನೆ ರೂಪಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.ಇದನ್ನೂ ಓದಿ: ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

ನಿರಂತರವಾಗಿ 7 ತಾಸು ರೈತರ ಪಂಪ್‍ಸೇಟ್‍ಗಳಿಗೆ ವಿದ್ಯುತ್ ಪೂರೈಕೆಯಾಗಬೇಕು. ವಿದ್ಯುತ್ ಪೂರೈಕೆ ಕೇವಲ ದಾಖಲೆಗಳಲ್ಲಿರಬಾರದು, ಅದು ಕಾರ್ಯರೂಪದಲ್ಲಿರಬೇಕು. ಈ ಸಂಬಂಧ ಅಧಿವೇಶನ ಸಂದರ್ಭದಲ್ಲಿ ಎಲ್ಲಾ ಶಾಸಕರ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದ ಅವರು, ಸಭೆಯಲ್ಲಿ ಶಾಸಕರು ಜಿಲ್ಲೆಯ ವಿದ್ಯುತ್ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರೆ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಜೆಸ್ಕಾಂ ಗ್ರಾಹಕರ ಸಹಾಯವಾಣಿ-1912ಗೆ ಬರುವ ದೂರು ಕರೆಗಳಿಗೆ ಪೂರಕವಾಗಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಕೇವಲ ತಾಂತ್ರಿಕ ಕಾರಣ ನೀಡಿ, ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ ಎಂದು ಖಾರವಾಗಿ ಹೇಳಿದ ಸಚಿವರು, ಈ ಸಂಬಂಧ ತಮಗೆ ನಿತ್ಯ ಕರೆಗಳು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಕರೆಗಳು ಬಾರದಂತೆ ನೋಡಿಕೊಳ್ಳಿ ಎಂದರು.

ಜೆಸ್ಕಾಂ ವ್ಯಾಪ್ತಿಯಲ್ಲಿ 33 ಕೆ.ವಿ.ಯ 54 ವಿದ್ಯುತ್ ಉಪಕೇಂದ್ರ ಸ್ಥಾಪಿಸುತ್ತಿರುವುದು ಉತ್ತಮ ಕಾರ್ಯ. ಆದರೆ, ಕಲಬುರಗಿ ಜಿಲ್ಲೆಗೆ 17 ಉಪಕೇಂದ್ರಗಳನ್ನು ನೀಡಿ, ಇನ್ನಿತರ ಜಿಲ್ಲೆಗಳನ್ನು ಕಡೆಗಣಿಸಲಾಗುತ್ತಿದೆ. ಜೆಸ್ಕಾಂ ವ್ಯಾಪ್ತಿಯ ರಾಯಚೂರ ಜಿಲ್ಲೆಗೆ ಒಂದೂ ಉಪಕೇಂದ್ರವನ್ನೂ ಮಂಜೂರು ಮಾಡದಿರುವ ಬಗ್ಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೇವಲ ಕಲಬುರಗಿಗೆ ಪ್ರಾಧಾನ್ಯತೆ ನೀಡಬಾರದು. ಇತರ ಜಿಲ್ಲೆಗಳನ್ನೂ ಸಮನಾಗಿ ಪರಿಗಣಿಸಬೇಕು. ಜಿಲ್ಲೆಯ ಹಲವು ಗ್ರಾಮೀಣ ಕುಟುಂಬಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಹೀಗಾಗಿ ಕತ್ತಲೆಯಲ್ಲಿರುವ ಹಲವು ಕುಟುಂಬಳಿಗೆ ರಾಜ್ಯ ಸರ್ಕಾರದ ಬೆಳಕು ಯೋಜನೆ ತಲುಪಿಸಿ, 100 ದಿನಗಳೊಳಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಈ ಸಂಬಂಧ ಗ್ರಾಮ ಪಂಚಾಯತ್‍ನಿಂದ ಗ್ರಾಹಕರು ನಿರಾಪೇಕ್ಷಣಾ ಪತ್ರ ಪಡೆಯುವ ಅಗತ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಇದನ್ನೂ ಓದಿ: ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕುಡಿಯುವ ನೀರಿನ ಉದ್ದೇಶಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿದ್ಯುತ್ ಸಂಪರ್ಕ ಕೋರಿ ಸಲ್ಲಿಸುವ ಪ್ರಸ್ತಾವನೆಗಳಿಗೆ ಆಯಾ ವರ್ಷದ ಬೇಸಿಗೆ ಕಾಲದಲ್ಲಿ ಸಮಸ್ಯೆಯಾಗದಂತೆ, ಜನವರಿ ಮಾಹೆಯಲ್ಲಿಯೇ ಸಂಪರ್ಕ ಕಲ್ಪಿಸಬೇಕು. ಇದೇ ತಿಂಗಳ 24ರ ನಂತರ ಮತ್ತೇ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದು, ಆ ಸಂದರ್ಭದಲ್ಲಿ ರೈತರು, ಗ್ರಾಹಕರಿಂದ ಯಾವುದೇ ದೂರ ಬರದಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು. ಬಳಿಕ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕೆಳ ಹಂತದ ಅಧಿಕಾರಿಗಳು ಇದೇ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ಪ್ಯಾರಾಲಂಪಿಕ್ಸ್ ಕ್ರೀಡಾಪಟುಗಳನ್ನು ಭೇಟಿ ಮಾಡಿ ಅಭಿನಂದಿಸಿದ ಪ್ರಧಾನಿ

ರಿಚಾರ್ಜ್ ಘಟಕಗಳ ಸ್ಥಾಪನೆ:
ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ರಿಚಾರ್ಜ್ ಸೆಂಟರ್‍ಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು. ರಾಜ್ಯದಲ್ಲಿ ಒಟ್ಟು 500 ಘಟಕಗಳ ಸ್ಥಾಪನೆಗೆ ಚಿಂತನೆ ನಡೆದಿದೆ. ಕಲ್ಯಾಣ ಕರ್ನಾಟಕ ಎಂಬ ಮಾತು ಕೇವಲ ಭಾಷಣದ ವಸ್ತುವಾಗದಂತೆ ನಿಜವಾಗಲೂ ಕಲ್ಯಾಣವನ್ನು ಮಾಡುವುದನ್ನು ಕಾರ್ಯರೂಪಕ್ಕೆ ತರಲು ಎಲ್ಲ ಅಧಿಕಾರಿಗಳು ಜೊತೆಗೂಡಿ ಶ್ರಮಿಸಬೇಕು ಎಂದು ತಿಳಿಹೇಳಿದರು.

ಈ ಸಭೆಯಲ್ಲಿ ಶಾಸಕ ಬಸವರಾಜ ಮತ್ತಿಮಡು, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯ್ಕ್, ಕೆಪಿಟಿಸಿಎಲ್‍ನ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ, ಪ್ರಾದೇಶಿಕ ಆಯುಕ್ತರಾದ ಡಾ.ಎನ್.ವಿ.ಪ್ರಸಾದ, ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ, ಇಂಧನ ಇಲಾಖೆಯ ಜಂಟಿ ನಿರ್ದೇಶಕ ಕೆ.ಪರಮೇಶ್ ಮತ್ತು ಜೆಸ್ಕಾಂನ ವ್ಯಾಪ್ತಿಯ ಜಿಲ್ಲೆಗಳ ಅಧಿಕಾರಿಗಳು ಇದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications