ನವದೆಹಲಿ: ದೆಹಲಿ ಹೈಕೋರ್ಟ್ (Delhi High Court) ನ್ಯಾಯಾಧೀಶ ನ್ಯಾ.ಯಶವಂತ್ ವರ್ಮಾ ಅವರ ಮನೆಯಲ್ಲಿ ಕಂತೆ ಕಂತೆ ನಗದು ಪತ್ತೆಯಾಗಿದೆ ಎಂಬ ವಿಚಾರಕ್ಕೂ, ಅವರ ವರ್ಗಾವಣೆ ಮತ್ತು ತನಿಖೆಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ತಪ್ಪು ಮಾಹಿತಿ ಮತ್ತು ವದಂತಿಗಳು ಹರಡುತ್ತಿವೆ. ಸೂಚಿಸಿದ ಕಾರ್ಯವಿಧಾನದ ಪ್ರಕಾರ ಆಂತರಿಕ ತನಿಖೆ ನಡೆಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ.
ದೆಹಲಿ ಹೈಕೋರ್ಟ್‌ನಲ್ಲಿ ಎರಡನೇ ಹಿರಿಯ ನ್ಯಾಯಾಧೀಶ ಮತ್ತು ಕೊಲಿಜಿಯಂ ಸದಸ್ಯರಾಗಿರುವ ನ್ಯಾ.ವರ್ಮಾ (Yashwant Varma) ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ (Allahabad High Court) ವರ್ಗಾವಣೆ ಮಾಡುವ ಪ್ರಸ್ತಾವನೆಯು ಸ್ವತಂತ್ರವಾಗಿದೆ. ಇದು ಆಂತರಿಕ ವಿಚಾರಣಾ ಕಾರ್ಯವಿಧಾನದಿಂದ ಪ್ರತ್ಯೇಕವಾಗಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ದೆಹಲಿ ಹೈಕೋರ್ಟ್ ಜಡ್ಜ್ ಮನೆಗೆ ಬೆಂಕಿ – ನಂದಿಸಲು ಹೋದಾಗ ಸಿಕ್ಕಿದ್ದು ಕಂತೆ ಕಂತೆ ನೋಟು
ನ್ಯಾಯಮೂರ್ತಿ ವರ್ಮಾ ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಒಂಬತ್ತನೇ ಹಿರಿಯ ನ್ಯಾಯಮೂರ್ತಿಯಾಗಿರುತ್ತಾರೆ. ಈ ಪ್ರಸ್ತಾವನೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಾಧೀಶರನ್ನು ಒಳಗೊಂಡ ಕೊಲಿಜಿಯಂ ಮಾ.20ರಂದು ಪರಿಶೀಲಿಸಿತ್ತು ಎಂದು ನ್ಯಾಯಾಲಯ ಹೇಳಿದೆ.
ನ್ಯಾ.ವರ್ಮಾ ಅವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಈ ವೇಳೆ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ತೆರಳಿದ್ದಾಗ ಭಾರಿ ಪ್ರಮಾಣದ ನಗದು ಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಪತ್ತೆಯಾದ ಹಣದ ಮೊತ್ತದ ಮಾಹಿತಿ ತಿಳಿದಿಲ್ಲ.
ದೆಹಲಿ ಹೈಕೋರ್ಟ್ ವೆಬ್‌ಸೈಟ್‌ನ ಮಾಹಿತಿ ಪ್ರಕಾರ ನ್ಯಾ.ವರ್ಮಾ ಅವರು ಆಗಸ್ಟ್ 1992 ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದರು. ಅಕ್ಟೋಬರ್ 2014 ರಲ್ಲಿ ಅಲಹಾಬಾದ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. ಫೆಬ್ರವರಿ 2016 ರಲ್ಲಿ ಅಲಹಾಬಾದ್ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು, ನಂತರ ಅಕ್ಟೋಬರ್ 2021 ರಲ್ಲಿ ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು.