ಮಡಿಕೇರಿ: ಅಸಲಿ ನಕಲಿ ಆಟ ಆಡಿ, ಪೊಲೀಸರ ಕಣ್ಣಿಗೆ ಮಣ್ಣೆರಚಿ ಆಯ್ಕೆ ಸಮಿತಿಗೆ ವಂಚಿಸಿ ಪೊಲೀಸ್ ಸೇವೆಗೆ ಆಯ್ಕೆಯಾಗಿದ್ದ ಯುವಕನನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಇಲಾಖೆಗೆ ಆಯ್ಕೆಯಾಗಲು ಅರ್ಹತೆ ಇಲ್ಲದೇ ಇದ್ದರೂ ದೈಹಿಕ ಪರೀಕ್ಷೆಯ ವೇಳೆ ವಂಚಿಸಿ ಪೊಲೀಸ್ ಪೇದೆ ಕೆಲಸ ಗಿಟ್ಟಿಸಿಕೊಂಡಿದ್ದ ಯುವಕ ಟ್ರೈನಿಂಗ್‍ಗೆ ಬಂದಾಗ ಅಂದರ್ ಆಗಿದ್ದಾನೆ. ಶಿಸ್ತಿನ ಇಲಾಖೆಯ ನೇಮಕಾತಿ ವೇಳೆ ಇಂತಹ ವಂಚನೆ ನಡೆದಿರುವುದು ಖುದ್ದು ಪೊಲೀಸರಿಗೆ ಶಾಕ್ ನೀಡಿದೆ.
ಬಾಗಲಕೋಟೆಯ ಶರೀಫ್ ಸಾಬಲಾಲ ಸಾಬ ವಾಲೀಕರ್(23) ಬಂಧನಕ್ಕೆ ಒಳಗಾದ ವ್ಯಕ್ತಿ. ತಮ್ಮನ ಕೆಲಸಕ್ಕೆ ಸಹಕರಿಸಿದ ಅಣ್ಣ ಮೊದೀನ್ ಸಾಬ ಲಾಲ ಸಾಬ ವಾಲೀಕರ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Advertisement
ಆಗಿದ್ದು ಏನು?
2017ನೇ ಸಾಲಿನ ಕೊಡಗು ಜಿಲ್ಲಾ ಸಶಸ್ತ್ರ ಮೀಸಲು ದಳದ ಪೊಲೀಸ್ ಪೇದೆಯ ಹುದ್ದೆಗೆ ಸಂಬಂಧಿಸಿದಂತೆ ದೈಹಿಕ ಪರೀಕ್ಷೆ ಜನವರಿ 28 ರಂದು ಜಿಲ್ಲಾ ಪೊಲೀಸ್ ಮೈದಾನದಲ್ಲಿ ನಡೆದಿತ್ತು. ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಶರೀಫ್ ಸಾಬ ಬಾಗಲಕೋಟೆ ಜಿಲ್ಲೆಯಿಂದ ಮಡಿಕೇರಿಗೆ ಬಂದು ದಾಖಲಾತಿ ಪರಿಶೀಲನೆಯ ವೇಳೆ ಹಾಜರಿದ್ದ. ಎಲ್ಲ ಪರೀಕ್ಷೆಯಲ್ಲಿ ತೇರ್ಗಡೆಯಾದ ಹಿನ್ನೆಲೆಯಲ್ಲಿ ಇದೇ ನವಂಬರ್ 3 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾನೆ. ಡಿಎಆರ್ ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಆತನಿಗೆ ಎಪಿಸಿ 68 ಸಂಖ್ಯೆಯನ್ನು ನೀಡಲಾಗಿತ್ತು.
Advertisement
ಅನುಮಾನ ಬಂದಿದ್ದು ಹೇಗೆ?
ಪೇದೆ ಹುದ್ದೆ ಸಿಗಬೇಕಾದರೆ ಅಭ್ಯರ್ಥಿ ಕನಿಷ್ಠ 168 ಸೆ.ಮೀ ಎತ್ತರ ಇರಬೇಕು ಎನ್ನುವ ನಿಯಮವನ್ನು ವಿಧಿಸಲಾಗಿತ್ತು. ಆದರೆ ಶರೀಫ್ 162 ಸೆ.ಮೀ ಎತ್ತರ ಹೊಂದಿದ್ದ. ಈತ ಆಯ್ಕೆಯಾದ ಬಳಿಕ ತರಬೇತಿ ವೇಳೆ,”ನೀನು ತುಂಬ ಕುಳ್ಳಗೆ ಇದ್ದಿಯಾ, ನಿನಗೆ ಕೆಲಸ ಸಿಕ್ಕಿದ್ದು ಹೇಗೆ” ಎಂದು ಇತರೇ ಪೇದೆಗಳು ಪ್ರಶ್ನಿಸಿ ರೇಗಿಸುತ್ತಿದ್ದರು. ಈ ವಿಚಾರ ಹಿರಿಯ ಅಧಿಕಾರಿಗಳಿಗೆ ಗೊತ್ತಾಗಿ ಅನುಮಾನದಿಂದ ಪರಿಶೀಲಿಸಿದಾಗ ಈತನ ವಂಚನೆ ಬೆಳಕಿಗೆ ಬಂದಿದೆ.
Advertisement
ವಂಚಿಸಿದ್ದು ಹೇಗೆ?
162 ಸೆ.ಮೀ ಎತ್ತರ ಇರುವ ಕಾರಣ ತಮ್ಮನಿಗೆ ಹುದ್ದೆ ಸಿಗುವುದಿಲ್ಲ ಎಂದು ಅರಿತ ಅಣ್ಣ ಪರೀಕ್ಷೆ ವೇಳೆ ಸಹಾಯ ಮಾಡಿದ್ದಾನೆ. ಹಾಲಿ ಮಂಗಳೂರಿನಲ್ಲಿ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಆಗಿ ಕರ್ತವ್ಯದಲ್ಲಿದ್ದ ಅಣ್ಣ ಮೊದೀನ್ ಸಾಬ ತಮ್ಮನ ಜಾಗದಲ್ಲಿ ದೈಹಿಕ ಪರೀಕ್ಷೆಗೆ ಹಾಜರಾಗಿದ್ದಾನೆ. ನೇಮಕಾತಿ ವೇಳೆ ಇವರ ಗೋಲ್ ಮಾಲ್ ನಡೆದಿದ್ದರೂ ಪೊಲೀಸ್ ಆಯ್ಕೆ ಸಮಿತಿ ಗಮನಕ್ಕೆ ಇದು ಬಂದಿರಲಿಲ್ಲ.
Advertisement
ಗಮನಕ್ಕೆ ಬಂದಿಲ್ಲ ಯಾಕೆ?
162 ಸೆ.ಮೀ ಇದ್ದ ಶರೀಫ್ ಹೇಗೆ ಹುದ್ದೆ ಸಿಕ್ಕಿತು ಎಂದು ಅನುಮಾನ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ದಳದ ನಿರೀಕ್ಷಕರು ದೈಹಿಕ ಪರೀಕ್ಷೆಯ ವಿಡಿಯೋವನ್ನು ಪರಿಶೀಲಿಸಿದ್ದಾರೆ. ನೂರಾರು ಯುವಕರು ಭಾಗವಹಿಸಿದ್ದ ಈ ಪ್ರಕ್ರಿಯೆಯಲ್ಲಿ ದಾಖಲಾತಿ ಹಿಡಿದು ಶರೀಫ್ ನಿಂತಿದ್ದ. ದಾಖಲಾತಿ ಪರಿಶೀಲನೆ ಪಾಸ್ ಆದ ಮೇಲೆ ಮೂತ್ರ ಮಾಡಲು ಆ ಜಾಗದಿಂದ ಹೊರ ಹೋಗಿದ್ದಾನೆ. ಅಷ್ಟರಲ್ಲೇ ತಮ್ಮನ ಜಾಗಕ್ಕೆ ಅಣ್ಣ ಮೊದೀನ್ ಎಂಟ್ರಿ ಆಗಿದ್ದಾನೆ. ಇದನ್ನು ಪೊಲೀಸರು ಗಮನಿಸದ ಪರಿಣಾಮ ತಮ್ಮನ ದಾಖಲೆ ಹಿಡಿದು ಬಂದಿದ್ದ ಮೊದೀನ್ ಗೆ ದೈಹಿಕ ಪರೀಕ್ಷೆ ಮಾಡಿದ್ದಾರೆ. ಈ ಪರೀಕ್ಷೆಯಲ್ಲಿ ಅಣ್ಣ ತೇರ್ಗಡೆಯಾದ ಪರಿಣಾಮ ತಮ್ಮನಿಗೆ ಕೆಲಸ ಸಿಕ್ಕಿದೆ.
ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 114, 419, 420 ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಕ್ರಮವಾಗಿ ಪೊಲೀಸ್ ಕೆಲಸ ಗಿಟ್ಟಿಸಿಕೊಂಡಿದ್ದ ಶರೀಫ್ ಸಾಬ ಲಾಲ ಸಾಬ ವಾಲೀಕರ್ ನನ್ನು ಬಂಧಿಸಿದ್ದಾರೆ.