ಟ್ರೈನಿ ನರ್ಸ್ ಪ್ರಿಯತಮೆಯನ್ನು ಕತ್ತು ಸೀಳಿ ಕೊಂದ ಪ್ರಿಯಕರ – ಬಳಿಕ ತಾನೂ ಆತ್ಮಹತ್ಯೆಗೆ ಯತ್ನ

Public TV
2 Min Read
Murder in Madhya Pradesh Hospital

– ವಿಫಲವಾದಾಗ ಸ್ಥಳದಿಂದ ಪರಾರಿ

ಭೋಪಾಲ್: ಪ್ರಿಯಕರ ತನ್ನ ಪ್ರಿಯತಮೆಯನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ನರಸಿಂಗ್‌ಪುರದ (Narsingpur) ಜಿಲ್ಲಾ ಆಸ್ಪತ್ರೆಯೊಳಗೆ ನಡೆದಿದೆ.

ಆರೋಪಿಯನ್ನು ಅಭಿಷೇಕ್ ಕೋಶ್ಟಿ ಹಾಗೂ ಮೃತ ವಿದ್ಯಾರ್ಥಿನಿಯನ್ನು ಟ್ರೈನಿ ನರ್ಸ್ ಆಗಿದ್ದ ಸಂಧ್ಯಾ ಚೌಧರಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಹೇಮಾವತಿ ನೀರಿಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧ: ಕುಣಿಗಲ್ ಶಾಸಕ ರಂಗನಾಥ್

ಕೊಲೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಜೂ.27ರಂದು ಆಸ್ಪತ್ರೆಯ ತುರ್ತು ನಿಗಾ ಘಟಕದ ಬಳಿಕ ಈ ಕೃತ್ಯ ನಡೆದಿದೆ. ಮೊದಲಿಗೆ ಆರೋಪಿ ಆಸ್ಪತ್ರೆಗೆ ನುಗ್ಗಿ ಸಂಧ್ಯಾಳಿಗೆ ಕಪಾಳಮೋಕ್ಷ ಮಾಡಿ, ಬಳಿಕ ನೆಲಕ್ಕೆ ಬೀಳಿಸಿದ್ದಾನೆ. ಆಸ್ಪತ್ರೆಯಲ್ಲಿದ್ದ ರೋಗಿಗಳು, ವೈದ್ಯರು, ನರ್ಸ್ಗಳ ಮಧ್ಯೆಯೇ ಆಕೆಯ ಎದೆಯ ಮೇಲೆ ಕುಳಿತು ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ತೀವ್ರ ರಕ್ತಸ್ರಾವವಾಗಿ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಆರೋಪಿ ಇಷ್ಟೊಂದು ಕ್ರೂರವಾಗಿ ನಡೆದುಕೊಳ್ಳುತ್ತಿದ್ದರೂ ಕೂಡ ಸುತ್ತಲಿನ ಜನರು ಯಾರೂ ಆಕೆಯ ಸಹಾಯಕ್ಕೆ ಬರದೇ ಹಾಗೆ ನೋಡುತ್ತಾ ನಿಂತಿರುವುದು ವೈರಲ್ ಆದ ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಆಕೆಯನ್ನು ಹತ್ಯೆಮಾಡಿದ ಬಳಿಕ ತಾನೂ ಕತ್ತು ಸೀಳಿಕೊಳ್ಳಲು ಯತ್ನಿಸಿದ್ದು, ಅದು ವಿಫಲವಾಗಿದೆ. ಬಳಿಕ ಅಲ್ಲಿಂದ ಹೊರನಡೆದು ತನ್ನ ಬೈಕ್ ತೆಗೆದುಕೊಂಡು ಪರಾರಿಯಾಗಿದ್ದಾನೆ.

ಈ ಘಟನೆಯಿಂದ ಭಯಭೀತರಾಗಿ ವಾರ್ಡ್‌ನಲ್ಲಿದ್ದ 11 ರೋಗಿಗಳ ಪೈಕಿ 8 ಜನ ಆ ದಿನವೇ ಡಿಸ್ಚಾರ್ಜ್ ಆಗಿ ಹೋದರು. ಇನ್ನುಳಿದವರು ಮಾರನೇ ದಿನ ಹೊರಟುಹೋದರು ಎಂದು ಮೂಲಗಳು ತಿಳಿಸಿವೆ.

ಆರೋಪಿ ಹಾಗೂ ಸಂಧ್ಯಾ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕೊಲೆಯಾದ ದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿರುವ ತನ್ನ ಸ್ನೇಹಿತೆಯ ಅತ್ತಿಗೆಯನ್ನು ಭೇಟಿ ಮಾಡಲು ಹೋಗುವಾಗಿ ಹೇಳಿ ಸಂಧ್ಯಾ ಮನೆಯಿಂದ ತೆರಳಿದ್ದಳು. ಅವಳು ಆಸ್ಪತ್ರೆಗೆ ಹೋಗುವ ಮುನ್ನ ಆರೋಪಿ ಆಕೆಗಾಗಿ ಕಾಯುತ್ತಿದ್ದ. ಕೊಲೆಯಾಗುವ ಮುನ್ನ ಇಬ್ಬರು ರೂ. ನಂ 22ರ ಮುಂದೆ ನಿಂತು ಮಾತಾಡಿದ್ದರು ಎಂದು ತಿಳಿದು ಬಂದಿದೆ.

ವಿಷಯ ತಿಳಿದ ಬಳಿಕ ಸಂಧ್ಯಾ ಮನೆಯವರು ಆಸ್ಪತ್ರೆಗೆ ಧಾವಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಕಾಲ್ತುಳಿತ ಕೇಸ್‌; IPS ಅಧಿಕಾರಿ ವಿಕಾಸ್‌ ಕುಮಾರ್‌ಗೆ ರಿಲೀಫ್‌ – ಅಮಾನತು ರದ್ದಿಗೆ CAT ಆದೇಶ

Share This Article