ಭುವನೇಶ್ವರ: ಸಂಚಾರಿ ನಿಯಮ ಉಲ್ಲಂಘನೆಗೆ ದಂಡವನ್ನು ಹೆಚ್ಚಿಸಿರುವುದರಿಂದ ವಾಹನ ಸವಾರರು ಕಕ್ಕಾಬಿಕ್ಕಿಯಾಗಿದ್ದು, ಕುಡಿದು ಆಟೋ ಚಾಲನೆ ಮಾಡಿರುವುದು ಸೇರಿದಂತೆ ವಿವಿಧ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಟೋ ಚಾಲಕನಿಗೆ ಬರೋಬ್ಬರಿ 47,500 ರೂ. ದಂಡ ವಿಧಿಸಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ.
ಕುಡಿದು ವಾಹನ ಚಾಲನೆ ಮಾಡಿರುವುದು, ಪರ್ಮಿಟ್, ಚಾಲನಾ ಪರವಾನಗಿ, ನೋಂದಣಿ ಸೇರಿದಂತೆ ತಿದ್ದುಪಡಿ ಕಾಯ್ದೆಯ ವಿವಿಧ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 47,500 ರೂ. ದಂಡ ವಿಧಿಸಲಾಗಿದೆ. ಭಾನುವಾರದಿಂದ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಭುವನೇಶ್ವರದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಭುವನೇಶ್ವರದ ಟ್ರಾಫಿಕ್ ಪೊಲೀಸ್ ಹಾಗೂ ಆರ್‍ಟಿಓ ಸಿಬ್ಬಂದಿ ಬುಧವಾರ ನಗರದ ಆಚಾರ್ಯ ವಿಹಾರ ಚೌಕ್‍ನಲ್ಲಿ ಆಟೋ ರಿಕ್ಷಾ ತಡೆದು, ಸಂಚಾರಿ ನಿಯಮ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಚಾಲಕನಿಗೆ 47,500 ರೂ.ಗಳ ಚಲನ್ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
ಸಾಮಾನ್ಯ ಅಪರಾಧ 500ರೂ., ಅಮಾನ್ಯಗೊಂಡ ಡ್ರೈವಿಂಗ್ ಲೈಸೆನ್ಸ್ 5000 ರೂ., ಪರ್ಮಿಟ್ ನಿಯಮ ಉಲ್ಲಂಘಿಸಿದ್ದಕ್ಕೆ 10,000 ರೂ., ಕುಡಿದು ವಾಹನ ಚಲಾಯಿಸಿದ್ದಕ್ಕೆ 10,000ರೂ., ಗಾಳಿ, ಶಬ್ದ ಮಾಲಿನ್ಯ ನಿಯಮ ಉಲ್ಲಂಘಿಸಿದ್ದಕ್ಕೆ 10,000, ಅನಧಿಕೃತ ವ್ಯಕ್ತಿಗೆ ಚಾಲನೆ ಮಾಡಲು ಬಿಟ್ಟಿದ್ದಕ್ಕೆ 5,000 ರೂ. ನೋಂದಣಿ ಮಾಡದೆ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದೆ ವಾಹನ ಚಲಾಯಿಸಿದ್ದಕ್ಕೆ 5,000 ರೂ., ಇನ್ಶುರೆನ್ಸ್ ಇಲ್ಲದೆ ವಾಹನ ಚಲಾಯಿಸಿದ್ದಕ್ಕೆ 2,000 ರೂ. ಒಟ್ಟು 47,500 ರೂ. ದಂಡವನ್ನು ವಿಧಿಸಲಾಗಿದೆ.
Advertisement
ಮದ್ಯ ಸೇವಿಸಿರುವುದಾಗಿ ಒಪ್ಪಿಕೊಂಡ ಆಟೋ ಚಾಲಕ ಹರಿಬಂಧು ಕನ್ಹಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ನನಗೆ ಅಷ್ಟು ದೊಡ್ಡ ಪ್ರಮಾಣದ ದಂಡವನ್ನು ಪಾವತಿಸಲು ಸಾಧ್ಯವಿಲ್ಲ. ಅವರು ನನ್ನ ವಾಹನವನ್ನು ವಶಪಡಿಸಿಕೊಳ್ಳಲಿ ಅಥವಾ ಜೈಲಿಗೆ ಕಳುಹಿಸಲಿ, ನಾನು ಅಷ್ಟು ಮೊತ್ತವನ್ನು ಪಾವತಿಸಲು ಸಾಧ್ಯವಿಲ್ಲ. ಅಲ್ಲದೆ, ಎಲ್ಲ ದಾಖಲೆಗಳು ನನ್ನ ಮನೆಯಲ್ಲಿವೆ ಎಂದು ತಿಳಿಸಿದ್ದಾರೆ.
ಚಾಲಕ ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಸೆಪ್ಟೆಂಬರ್ 1ರಿಂದ ಜಾರಿಯಾಗಿರುವ ಹೊಸ ಸಂಚಾರಿ ನಿಯಮಗಳ ನಿಬಂಧನೆ ಪ್ರಕಾರ ದಂಡ ವಿಧಿಸಲಾಗಿದೆ. ಒಟ್ಟು 47,500 ರೂ. ದಂಡವನ್ನು ಚಂದ್ರಶೇಖರಪುರದ ಚಾಲನಾ ಪರೀಕ್ಷಾ ಕೇಂದ್ರದಲ್ಲಿ ಪಾವತಿಸುವಂತೆ ಆಟೋ ಚಾಲಕನಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.