– ಕಮಿಷನರ್ ಪಿ.ಎಸ್ ಹರ್ಷ ಮೆಚ್ಚುಗೆ
ಮಂಗಳೂರು: ಈ ಬಾರಿಯ ಮಳೆಗೆ ಮಂಗಳೂರಿನ ಬಹುತೇಕ ಕಡೆ ರಸ್ತೆಗಳು ಗುಂಡಿ ಬಿದ್ದಿವೆ. ಡಾಂಬರು ಹಾಕುವ ಬದಲು ಮಹಾನಗರ ಪಾಲಿಕೆಯ ಎಂಜಿನಿಯರ್‌ಗಳು ಈಗ ದೊಡ್ಡ ಗುಂಡಿಗಳಿಗೆ ಮಣ್ಣು ಹಾಕಿ, ಮುಚ್ಚುವ ಕೆಲಸ ಮಾಡುತ್ತಿದ್ದಾರೆ.
ಸೂಕ್ತ ಸಿಬ್ಬಂದಿ ಇಲ್ಲದೆ ಲಾರಿಯಿಂದ ಮಣ್ಣು ಸುರಿದು ಟ್ರಾಫಿಕ್ ಜಾಮ್ ಆಗುತ್ತಿತ್ತು. ಇದನ್ನು ಮನಗಂಡ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ತಾವೇ ಮಣ್ಣನ್ನು ಲಾರಿಯಿಂದ ಗುಂಡಿಗೆ ಸುರಿಯುವ ಕೆಲಸ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Advertisement
Advertisement
ಕದ್ರಿ ಸಂಚಾರಿ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಪುಟ್ಟರಾಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂಲತಃ ಉತ್ತರ ಕರ್ನಾಟಕದವರಾದ ಪುಟ್ಟರಾಮ, ಪೊಲೀಸ್ ಪೇದೆ ಎಂಬ ಹಮ್ಮು ತೊರೆದು ಹಾರೆ ಹಿಡಿದು ಕಾರ್ಮಿಕನ ರೀತಿ ಕೆಲಸ ಮಾಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.
Advertisement
ಪೇದೆಯ ಸಾಮಾಜಿಕ ಕಾಳಜಿಯ ಕೆಲಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೈರಲ್ ವಿಡಿಯೋ ನೋಡಿದ ಮಂಗಳೂರು ಕಮಿಷನರ್ ಪಿ.ಎಸ್ ಹರ್ಷ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಸೋಮವಾರ ಕಚೇರಿಗೆ ಕರೆದು ಗೌರವಿಸುವುದಾಗಿ ಕಮಿಷನರ್ ಹೇಳಿಕೊಂಡಿದ್ದಾರೆ.
Advertisement
ಇದೇ ವೇಳೆ ಮಹಾನಗರ ಪಾಲಿಕೆಯ ಬೇಜವಾಬ್ದಾರಿಯೂ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಗುಂಡಿ ಬಿದ್ದ ಕಾಂಕ್ರೀಟ್ ರಸ್ತೆಗಳಿಗೆ ಮಣ್ಣು ತುಂಬಿ ಮುಚ್ಚುವುದನ್ನು ಮಹಾನಗರ ಪಾಲಿಕೆಯ ಎಂಜಿನಿಯರ್‌ಗಳಿಂದಲೇ ಕಲಿಯಬೇಕು ಎನ್ನುವ ನುಡಿ ಕೇಳಿ ಬರುತ್ತಿದೆ.