ಮೈಸೂರು/ಬೆಂಗಳೂರು: ಹೆಲ್ಮೆಟ್ ಧರಿಸೋದು ಕಡ್ಡಾಯ. ಹಾಗಂತ ಕೈಗೆ ಸಿಕ್ಕ ಹೆಲ್ಮೆಟ್ ಹಾಕ್ಕೊಂಡು ಪೊಲೀಸರ ಕೈಯಿಂದ ಬಚಾವಾದ್ರೆ ಸಾಕು ಅಂತಿದ್ರೆ ನೀವು ಈ ಸುದ್ದಿಯನ್ನು ಓದಲೇಬೇಕು.
ಐಎಸ್‍ಐ ಮಾರ್ಕ್ ಇಲ್ಲದ ಹೆಲ್ಮೆಟ್ ಹಾಕುವಂತಿಲ್ಲ. ಒಂದು ವೇಳೆ ಐಎಸ್‍ಐ ಮಾರ್ಕ್ ಇಲ್ಲದ ಹೆಲ್ಮೆಟ್ ಹಾಕ್ಕೊಂಡು ಸಿಕ್ಕಿಬಿದ್ರೆ ಹೆಲ್ಮೆಟ್ ಹೋಗುತ್ತೆ ಜೊತೆಗೆ ದುಡ್ಡು ಹೋಗುತ್ತೆ. ಅಲ್ಲದೆ ಕಿವಿಯನ್ನ ಮುಚ್ಚದ ಅರ್ಧ ಹೆಲ್ಮೆಟ್ ಕೂಡಾ ಧರಿಸುವಂತಿಲ್ಲ. ಈಗಾಗಲೇ ಬೆಂಗಳೂರು, ಮೈಸೂರಲ್ಲಿ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದು, ಐಎಸ್‍ಐ ಮಾರ್ಕ್ ಇಲ್ಲದ ಹಾಗೂ ಅರ್ಧ ಹೆಲ್ಮೆಟ್ ಧರಿಸಿ ಸಿಕ್ಕಿಬಿದ್ದವರಿಂದ ಹೆಲ್ಮೆಟ್ ವಶಪಡಿಸಿಕೊಳ್ತಿದ್ದಾರೆ.
ಮೈಸೂರು ಸಂಚಾರಿ ಪೊಲೀಸರಿಂದ ಮಂಗಳವಾರದಂದು ಆಪರೇಷನ್ ಸೇಫ್ ರೈಡ್ ಹೆಸರಿನಲ್ಲಿ ಮೆಗಾ ಹೆಲ್ಮೆಟ್ ತಪಾಸಣೆ ನಡೆಯಿತು. ಇಷ್ಟು ದಿನ ಹೆಲ್ಮೆಟ್ ಹಾಕದವರಿಗೆ ದಂಡ ಮಾತ್ರ ಹಾಕುತ್ತಿದ್ದ ಪೊಲೀಸರು ನಿನ್ನೆ ಐಎಸ್‍ಐ ಮಾರ್ಕ್ ಇಲ್ಲದ ಹೆಲ್ಮೆಟ್‍ಗಳನ್ನು ಸ್ಥಳದಲ್ಲಿಯೇ ವಶಪಡಿಸಿಕೊಂಡ್ರು. ಗಟ್ಟಿಯಾದ ಹಾಗೂ ಐಎಸ್‍ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸುವಂತೆ ಸವಾರರಿಗೆ ಸೂಚನೆ ನೀಡಿದ್ರು.
ಐಎಸ್‍ಐ ಮಾರ್ಕ್ ಇಲ್ಲದ ಹೆಲ್ಮೆಟ್ ಗಳನ್ನು ಸವಾರರಿಂದ ಪಡೆದು ದಂಡ ಕಟ್ಟಿಸಿಕೊಳ್ಳದೇ ಎಚ್ಚರಿಕೆ ನೀಡಿ ಕಳಿಸಿದ್ರು. ಹಳೇ ಹೆಲ್ಮೆಟ್ ಬೇಕು ಎಂದರೆ ಹೊಸದಾಗಿ ಐಎಸ್‍ಐ ಮಾಕ್ ಉಳ್ಳ ಫುಲ್ ಹೆಲ್ಮೆಟ್ ಖರೀದಿಸಿ ತಂದು ತೋರಿಸುವಂತೆ ಸೂಚಿಸಿದ್ರು. ಮೈಸೂರು ನಗರದಾದ್ಯಂತ ಈ ವಿಶೇಷ ತಪಾಸಣೆ ನಡೆಯಿತು.
ನಿನ್ನೆ ಮೈಸೂರು ನಗರ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿ 15 ಸಾವಿರಕ್ಕೂ ಹೆಚ್ಚು ಹೆಲ್ಮೆಟ್‍ಗಳನ್ನ ವಶಪಡಿಸಿಕೊಂಡಿದ್ದಾರೆ. ಇದೇ ವಾರ ಮತ್ತೊಮ್ಮೆ ದಿಢೀರ್ ದಾಳಿ ಮಾಡಲಿದ್ದಾರೆ.
ಹೆಲ್ಮೆಟ್ ಕಸಿದುಕೊಳ್ಳುತ್ತಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಪೊಲೀಸರು ಹೊಸ ಐಎಸ್‍ಐ ಮಾರ್ಕ್ ಉಳ್ಳ ಹೆಲ್ಮೆಟ್ ತಂದು ತೋರಿಸಿದ್ರೆ ಹಳೇ ಹೆಲ್ಮೆಟ್ ವಾಪಸ್ ನೀಡುವುದಾಗಿ ಹೇಳಿದ್ದಾರೆ. ಆದ್ರೆ ಮತ್ತೆ ಆ ಹಳೇ ಹೆಲ್ಮೆಟ್ ಧರಿಸುವಂತಿಲ್ಲ.