ಹಾಸನ: ಅರ್ಧ ಹೆಲ್ಮೆಟ್ ಹಾಕುವ ಬೈಕ್ ಸವಾರರಿಗೆ ಟ್ರಾಫಿಕ್ ಪೊಲೀಸರು ಶಾಕ್ ನೀಡಿದ್ದು, ಕಡಿಮೆ ಬೆಲೆಯಲ್ಲಿ ಸಿಗುತ್ತೆ ಎಂದು ಖರೀದಿಸಿದರೆ ಅದು ಪೊಲೀಸರು ಪಾಲಾಗುವುದು ಖಂಡಿತ.
ಹಾಸನ ನಗರ ಸಂಚಾರಿ ಪೊಲೀಸರು ಹಾಫ್ ಹೆಲ್ಮೆಟ್ ಆಪರೇಷನ್ ಪ್ರಾರಂಭಿಸಿದ್ದು, ಸಿಕ್ಕ ಸಿಕ್ಕ ಸವಾರರ ಹಾಫ್ ಹೆಲ್ಮೆಟ್‍ಗಳನ್ನು ಕಸಿದು ಕಸಕ್ಕೆ ಎಸೆಯುತ್ತಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಧರಿಸದೆ ಕೇವಲ ದಂಡ ತಪ್ಪಿಸಿಕೊಳ್ಳಲು ಹಾಕುತ್ತಿದ್ದ ಹೆಲ್ಮೆಟ್ ಗಳು ಇದೀಗ ತಿಪ್ಪೆ ಸೇರುತ್ತಿವೆ.
ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ ಎಂದು ಖರೀದಿಸುತ್ತೇವೆ. ಆದರೆ ಇಂತಹ ಹೆಲ್ಮೆಟ್‍ಗಳಿಗೆ ಪೊಲೀಸರು ಮುಕ್ತಿ ಕಾಣಿಸುತ್ತಿದ್ದು, ಇನ್ನು ಮುಂದೆ ಕಡ್ಡಾಯವಾಗಿ ಐಎಸ್‍ಐ ಗುರುತಿರುವ ಗುಣಮಟ್ಟದ ಫುಲ್ ಹೆಲ್ಮೆಟ್‍ಗಳನ್ನು ಧರಿಸಬೇಕಿದೆ. ಆಫ್ ಹೆಲ್ಮೆಟ್ ಎಲ್ಲವನ್ನೂ ಪೊಲೀಸರು ಕಿತ್ತುಕೊಂಡು ಒಡೆದು ಹಾಕುತ್ತಿದ್ದು, ಹೊಸ ಹೆಲ್ಮೆಟ್ ಖರೀದಿಸುವಂತೆ ಸೂಚನೆ ನೀಡುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ಈ ಆಪರೇಷನ್ ನಡೆಯುತ್ತಿದ್ದು, ಒಂದು ಸಾವಿರಕ್ಕೂ ಅಧಿಕ ಹಾಫ್ ಹೆಲ್ಮೆಟ್‍ಗಳನ್ನು ಪೊಲೀಸರು ಕಿತ್ತು ಬಿಸಾಡುತ್ತಿದ್ದಾರೆ. ಪ್ರಾಣ ರಕ್ಷಣೆಗೆ ಫುಲ್ ಹಾಗೂ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆ ತಾಕೀತು ಮಾಡುತ್ತಿದ್ದಾರೆ.