ಬೆಂಗಳೂರು: ಸಂಚಾರಿ ಪೊಲೀಸ್ ಪೇದೆಯೊಬ್ಬರು ಕೆಟ್ಟು ನಿಂತಿದ್ದ ವೋಲ್ವೊ ಬಸ್ ರಿಪೇರಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮಡಿವಾಳ ಬ್ರಿಡ್ಜ್ ಬಳಿ ಈ ಘಟನೆ ನಡೆದಿದೆ. ಮಡಿವಾಳ ಟು ಹೊಸೂರು ಮಾರ್ಗವಾಗಿ ಚಲಿಸುತ್ತಿದ್ದ ವೋಲ್ವೊ ಬಸ್ ತಾಂತ್ರಿಕ ದೋಷದಿಂದಾಗಿ ಕೆಟ್ಟು ನಿಂತಿತ್ತು. ಬಸ್ ಕೆಟ್ಟು ನಿಂತ ಪರಿಣಾಮ ಹೊಸೂರ್ ರೋಡ್‍ನಲ್ಲಿ ಸಂಪೂರ್ಣವಾಗಿ ಟ್ರಾಫಿಕ್ ಜಾಮ್ ಆಗಿತ್ತು.
ಈ ವೇಳೆ ಕರ್ತವ್ಯದಲ್ಲಿದ್ದ ಮಡಿವಾಳ ಸಂಚಾರಿ ಠಾಣೆಯ ಪೊಲೀಸ್ ಪೇದೆ ರಾಜಿಸಾಬ್ ಘಂಟಿ ಅರ್ಧ ಗಂಟೆಯಲ್ಲೇ ಬಸ್ ರಿಪೇರಿ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಘಟನೆ ಕಂಡವರಿಂದ ರಾಜಿಸಾಬ್ ಘಂಟಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ.
ವಿಜೇಂದ್ರ ಡಿಟಿ ಅವರು ಫೇಸ್‍ಬುಕ್‍ನಲ್ಲಿ ರಾಜಿಸಾಬ್ ಬಗ್ಗೆ ಈ ರೀತಿ ಬರೆದುಕೊಂಡಿದ್ದಾರೆ.
“ಈ ಫೋಟೋದಲ್ಲಿ ಕಾಣಿಸುತ್ತಿರುವ ವ್ಯಕ್ತಿ ಮಡಿವಾಳ ಟ್ರಾಫಿಕ್ ಪೊಲೀಸ್ ರಾಜಿಸಾಬ್. ಹೊಸೂರು ರೋಡ್ ಸಮೀಪದ ಮಡಿವಾಳ ಬ್ರಿಡ್ಜ್ ಬಳಿ ಕೆಟ್ಟು ನಿಂತಿದ್ದ ನಗರ ಸಾರಿಗೆ ವೋಲ್ವೋವನ್ನು ತಕ್ಷಣವೇ ಸರಿಪಡಿಸಿ, ಟ್ರಾಫಿಕ್ ಸರಿ ದಾರಿಗೆ ತಂದು ಸಾರ್ವಜನಿಕರು ಗಂಟೆಗಟ್ಟಲೆ ಟ್ರಾಫಿಕ್‍ನಲ್ಲಿ ನಿಲ್ಲುವುದನ್ನು ತಪ್ಪಿಸಿ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾದರು. ನಾ ಕಂಡಂತೆ ಇಂತಹ ಸಮಾಜಮುಖಿ ಕೆಲಸಗಳನ್ನು ಇವರು ತುಂಬ ಮಾಡಿದ್ದಾರೆ, ಇಂತಹವರಿಗೆ ಪೊಲೀಸ್ ಇಲಾಖೆ ಮತ್ತು ಸರ್ಕಾರ ಗುರುತಿಸಿ ಅವರಿಗೆ ಅಭಿನಂದಿಸಬೇಕು.”