ಕಿಂಕರರ ಜೊತೆ ರಸ್ತೆಗಿಳಿದ ಯಮಧರ್ಮ- ಸಂಚಾರ ನಿಯಮದ ಅರಿವು ಮೂಡಿಸಿದ ಪೊಲೀಸರು

Public TV
3 Min Read
dvg traffic yama 3jpg

ದಾವಣಗೆರೆ: ಜಿಲ್ಲೆಯ ಪ್ರಮುಖ ರಸ್ತೆಗಳಿಗೆ ಇಂದು ಯಮಧರ್ಮ ಮತ್ತು ಯಮಕಿಂಕರರು ಆಗಮಿಸಿ ವಾಹನ ಸವಾರರಿಗೆ ಸಾವಿನ ಎಚ್ಚರಿಕೆ ಮೂಡಿಸಿದ್ದಾರೆ. ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ನಿಮ್ಮ ಜೀವದ ಜೊತೆ ಚಲ್ಲಾಟವಾಡುವುದನ್ನು ನಿಲ್ಲಿಸಿ ಎಂಬ ಸಂದೇಶ ಸಾರಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಾಹನ ಸಂಚಾರರು ನಿಯಮಗಳನ್ನು ಉಲ್ಲಂಘಿಸಿ, ಸಂಚಾರಿ ನಿಯಮಗಳನ್ನು ಪಾಲಿಸದೆ, ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸದೆ, ಆಟೋ ಚಾಲಕರು ಅತಿ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ಸಂಚರಿಸುತ್ತಿದ್ದಾರೆ. ಕಾರು ಚಾಲಕರು ಸೀಟ್ ಬೆಲ್ಟ್ ಧರಿಸುತ್ತಿಲ್ಲ, ಬಸ್ ಚಾಲಕರು ಅಜಾಗರೂಕತೆಯಿಂದ ಬಸ್ ಚಲಾಯಿಸುತ್ತಿರುವುದನ್ನು ಗಮನಿಸಿದ ಸಂಚಾರಿ ಪೋಲಿಸರು ಇಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ತಾವೇ ಯಮಧರ್ಮ ಹಾಗೂ ಕಿಂಕರರ ವೇಷಧರಿಸಿ ರಸ್ತೆಗಿಳಿದಿದ್ದರು. ಸಂಚಾರ ನಿಯಮಗಳನ್ನು ಪಾಲಿಸುವಂತೆ ವಾಹನ ಸವಾರರಿಗೆ ಅರಿವು ಮೂಡಿಸುವ ಸಲುವಾಗಿ ಪೊಲೀಸ್ ಸಿಬ್ಬಂದಿ ಯಮ, ಯಮಕಿಂಕರ ವೇಷ ಧರಿಸಿ ಜಾಗೃತಿ ಮೂಡಿಸಿದರು.

dvg traffic yama 5jpg

ನಗರದ ಜಯದೇವ ವೃತ್ತದಲ್ಲಿಂದು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಪ್ರಯುಕ್ತ ವಾಹನ ಚಾಲಕರಿಗೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಾಹನ ಸವಾರರಿಗೆ ಗುಲಾಬಿ ಹೂವು ನೀಡಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದರು.

ನೀವು ಹೆಲ್ಮೆಟ್ ಧರಿಸಿಲ್ಲ. ವಾಹನದ ಚಾಲನೆ ವೇಳೆ ಮೊಬೈಲ್ ನಲ್ಲಿ ಮಾತನಾಡುತ್ತೀರಾ? ಸರ್ಕಾರ ಹೆಚ್ಚು ದಂಡ ವಿಧಿಸಿದರೂ ಅಜಾಗರೂಕತೆಯ ವಾಹನ ಚಾಲನೆ ಮಾಡುತ್ತಿರಾ? ನಿಮ್ಮ ಸಾವು ಸಂಭವಿಸುತ್ತದೆ. ನಿಮ್ಮನ್ನು ನಮ್ಮ ಯಮಲೋಕಕ್ಕೆ ಕರೆದುಕೊಂಡು ಹೋಗಿ ಘೋರ ಶಿಕ್ಷೆ ನೀಡುತ್ತೇವೆ. ಭೂ ಲೋಕದಲ್ಲಿ ಪೊಲಿಸರು ಸಾಕಷ್ಟು ಜಾಗೃತಿ ಮೂಡಿಸಿದರು ನೀವು ಪಾಲನೆ ಮಾಡುತ್ತಿಲ್ಲಾ. ಯಮಕಿಂಕರರೇ ಈ ವ್ಯಕ್ತಿಗಳ ಜಾತಕ ಬಹಿರಂಗಪಡಿಸಿ ಎಂದು ಹೀಗೆ ಜಯದೇವವೃತ್ತದಲ್ಲಿ ಯಮನ ವೇಷಧರಿಸಿದ್ದ ಪೋಲಿಸರಾದ ರಾಮಾಂಜನೇಯ ನಾಟಕ ಪ್ರದಶಿಸುವ ಮೂಲಕ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಿದರು. ಯಮನಂತೆಯೇ ಡೈಲಾಗ್ ಹೇಳಿ ರಂಜಿಸುವ ಮೂಲಕ ರಸ್ತೆ ಸಂಚಾರದ ಅರಿವು ಮೂಡಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಯಮಕಿಂಕರರು ಯಮಪಾಶ ಹಾಗೂ ಮೂಲಕ ಸಂಚಾರಿ ನಿಯಮ ಪಾಲಿಸದ ವಾಹನ ಸವಾರರಿಗೆ ಸಾವಿನ ಎಚ್ಚರಿಕೆ ಮೂಡಿಸಿದರು. ನಂತರ ಗುಲಾಬಿ ಹೂಗಳನ್ನು ನೀಡುವ ಮೂಲಕ ಕಟ್ಟುನಿಟ್ಟಾದ ಸಂಚಾರ ಪಾಲಿಸಬೇಕೆಂದು ಪೊಲೀಸ್ ಸಿಬ್ಬಂದಿ ತಿಳಿಸಿದರು.

dvg traffic yama 1jpg

ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಯಮನನ್ನು ಆಹ್ವಾನಿಸಿದಂತೆ. ನಿಯಮ ಮೀರಿ ವಾಹನ ಚಲಾಯಿಸಿ ಮನೆ ತಲುಪಿದ್ದಾರೆ ಎಂದರೆ ಅವರಿಗೆ ಅವಕಾಶ ಸಿಕ್ಕಂತೆ. ಅದನ್ನು ಅರಿತು ಪುನಃ ಸಂಚಾರಿ ನಿಯಮ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು ಎಂದರು.

ಯಮವೇಷ ಧರಿಸಿದ್ದ ಪೊಲೀಸ್ ಸಿಬ್ಬಂದಿ ರಾಮಾಂಜನೇಯ ಮಾತನಾಡಿ, ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಎಸ್‍ಪಿ ಅವರ ಮಾರ್ಗದರ್ಶನದಲ್ಲಿ ಪಿಎಸ್‍ಐ ಮಂಜುನಾಥ್ ಲಿಂಗಾರೆಡ್ಡಿ ಮತ್ತು ಜಯಶೀಲ ಅವರ ನೇತೃತ್ವದಲ್ಲಿ ಪೊಲೀಸ್ ಕರ್ತವ್ಯದ ಜೊತೆಗೆ ಜನರಿಗೆ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ನಿಯಮ ಉಲ್ಲಂಘಿಸಿದಾಗ ಕೇವಲ ದಂಡ ಹಾಕಿದರೆ ಜನರಲ್ಲಿ ಬದಲಾವಣೆ ಕಾಣಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ರೀತಿ ವಿಶೇಷವಾಗಿ ಜಾಗೃತಿ ಮೂಡಿಸಲಾಗುತ್ತಿದ್ದು, ಜನರು ಕೂಡ ಇದಕ್ಕೆ ಸ್ಪಂದನೆ ನೀಡುತ್ತಿದ್ದಾರೆ ಎಂದರು.

dvg traffic yama 4jpg

ಯಮವೇಷಧಾರಿಯಾಗಿ ಪೊಲೀಸ್ ಸಿಬ್ಬಂದಿ ರಾಮಾಂಜನೇಯ, ಯಮಕಿಂಕರನಾಗಿ ಹರೀಶ್ ನಾಯ್ಕ್, ಚಂದ್ರಗುಪ್ತನಾಗಿ ಮಂಜುನಾಥ್ ಪಾತ್ರ ನಿರ್ವಹಿಸಿದರು. ಈ ವೇಳೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಂತಹ ಚಾಲಕರ ಬಳಿ ಹೋಗಿ ನಿಯಮ ಉಲ್ಲಂಘನೆ ಅಪರಾಧ ಮತ್ತು ಜೀವಕ್ಕೆ ಅಪಾಯ ಎಂಬ ಸಂದೇಶದ ಜೊತೆಗೆ ಮುಂದೆ ಸಂಚಾರಿ ನಿಯಮಗಳನ್ನು ಪಾಲಿಸಿ ಜೀವ ರಕ್ಷಿಸಿಕೊಳ್ಳಬೇಕೆಂದು ಜಾಗೃತಿ ಮೂಡಿಸಿದರು.

ಯಮ ಮತ್ತು ಯಮಕಿಂಕರರ ವೇಷದ ಸಿಬ್ಬಂದಿ ಆಟೋ ಚಾಲಕನ ಬಳಿ ಹೋಗಿ ನಿಯಮ ಮೀರಿ ಹೆಚ್ಚು ಪ್ರಯಾಣಿಕರನ್ನು ಕೂರಿಸಿದ್ದಕ್ಕಾಗಿ ಹಾಗೂ ದಾಖಲೆಗಳು ಸರಿಯಾಗಿರದ ಕಾರಣದಿಂದಾಗಿ ಆಟೋ ಚಾಲಕನಿಗೆ ಯಮಪಾಶವನ್ನು ಹಾಕಿ ಯಮಲೋಕಕ್ಕೆ ಕರೆದೊಯ್ಯುವುದಾಗಿ ಎಚ್ಚರಿಕೆ ನೀಡಿದರು. ಅದೇ ರೀತಿ ಖಾಸಗಿ ನಗರ ಸಾರಿಗೆ ಬಸ್‍ನೊಳಗೆ ಹೋದ ಯಮ ಮತ್ತು ಯಮಕಿಂಕರರ ವೇಷದ ಪೊಲೀಸ್ ಸಿಬ್ಬಂದಿ ಪ್ರಯಾಣಿಕರ ಜೀವ ನಿನ್ನ ಮೇಲಿದ್ದು, ಸಂಚಾರಿ ನಿಯಮ ಪಾಲಿಸುವ ಮೂಲಕ ಅವರನ್ನು ಸುರಕ್ಷಿತವಾಗಿ ತಲುಪಿಸುವ ಕೆಲಸ ಮಾಡುವಂತೆ ಬಸ್ ಚಾಲಕನಿಗೆ ಅರಿವು ಮೂಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *