ಗದಗ: ಟ್ರ್ಯಾಕ್ಟರ್ ಟ್ರೇಲರ್ ಕೊಂಡಿ ಕಳಚಿ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಐದು ಜನರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ಗದಗ ಹೊರವಲಯದ ಗದ್ದಿ ಹಳ್ಳದ ಬಳಿ ನಡೆದಿದೆ.
ಮೃತ ಮೂವರು ಗದಗ ತಾಲೂಕಿನ ಕೊಟುಮಚಗಿ ಗ್ರಾಮದ ಕಾರ್ಮಿಕರಾಗಿದ್ದು, ಶೇಖಪ್ಪ ಕರಡಿ (57) ಹಾಗೂ ಪತ್ನಿ ಶಾಂತವ್ವ ಕರಡಿ (45) ದಂಪತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮುದಕಪ್ಪ (57) ಮುಧೋಳ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯ ಸಾವನ್ನಪ್ಪಿದ್ದಾರೆ.
ಗದಗ ನಗರಕ್ಕೆ ನಿತ್ಯ ಕೂಲಿಗಾಗಿ ಬರುತ್ತಿದ್ದು, ರೋಣ ತಾಲೂಕಿನ ಜಕ್ಕಲಿ ಗ್ರಾಮದ ಟ್ರ್ಯಾಕ್ಟರ್ ಕಬ್ಬಿಣ ಹೇರಿಕೊಂಡು ಕೊಟುಮಚಗಿ ಮಾರ್ಗವಾಗಿ ಜಕ್ಕಲಿ ಗ್ರಾಮಕ್ಕೆ ಹೊರಟಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್ ಗೆ ಓವರ್ ಲೋಡ್ ಕಬ್ಬಿಣ ಹೇರುವುದರ ಜೊತೆಗೆ ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನ ಜಿಲ್ಲೆಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ
ಈ ಸಂಬಂಧ ಗದಗ ಸಂಚಾರಿ ಠಾಣೆ ಹಾಗೂ ಬೆಟಗೇರಿ ಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.