ಟ್ರಾಕ್ಟರ್ ಟಯರ್‌​ಗಳ ಗೋಡೌನ್ ನಲ್ಲಿ ಬೆಂಕಿ – ಮುಗಿಲೆತ್ತರಕ್ಕೆ ಆವರಿಸಿದ ಹೊಗೆ

Public TV
1 Min Read
FIRE CKB

ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಟಫೆ ಟ್ರಾಕ್ಟರ್ ತಯಾರಿಕಾ ಕಾರ್ಖಾನೆಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ.

ಹೆದ್ದಾರಿ ಪಕ್ಕದ ಮಮತಾ ಪೆಟ್ರೋಲ್ ಬಂಕ್‍ಗೆ ಹೊಂದಿಕೊಂಡಿರುವ ಟ್ರಾಕ್ಟರ್ ತಯಾರಿಕಾ ಕಾರ್ಖಾನೆಯ ಆವರಣದಲ್ಲಿನ ಟ್ರಾಕ್ಟರ್ ಟಯರ್‌ಗಳ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಸಾವಿರಾರು ಟ್ರಾಕ್ಟರ್‌ನ ಟಯರ್‌ಗಳು ಬೆಂಕಿಗಾಹುತಿಯಾಗಿದ್ದು, ಧಗಧಗನೆ ಹೊತ್ತಿ ಉರಿದಿವೆ.

vlcsnap 2019 05 09 08h38m01s637

ಅಗ್ನಿ ಅವಘಡದಿಂದ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಹೊಗೆ ಮುಗಿಲೆತ್ತರಕ್ಕೆ ಆವರಿಸಿದೆ. ಅಗ್ನಿ ಅವಘಡದ ವಿಷಯ ತಿಳಿದು ಸ್ಥಳಕ್ಕೆ ಆಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ಹರಸಾಹಸ ಪಟ್ಟು ಬೆಂಕಿನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 4 ಅಗ್ನಿ ಶಾಮಕ ವಾಹನಗಳ ಮೂಲಕ ಬೆಂಕಿನಂದಿಸುವ ಕಾರ್ಯ ಸಾಗಿದ್ದು, ಬೆಂಕಿ ಹತೋಟಿಗೆ ತರಲು ಹರಸಾಹಸ ಪಡುವಂತಾಗಿದೆ.

ಟಯರ್ ಸುಟ್ಟು ವಾಸನೆಯಿಂದ ಜನ ಕಸಿವಿಸಿಗೊಂಡಿದ್ದಾರೆ. ಮತ್ತೊಂದೆಡೆ ಪೆಟ್ರೋಲ್ ಬಂಕ್ ಸಹ ಪಕ್ಕದಲ್ಲೇ ಇರುವ ಕಾರಣ ಸಾಕಷ್ಟು ಆತಂಕ ಸಹ ಮನೆ ಮಾಡಿದ್ದು, ಸಾರ್ವಜನಿಕರನ್ನ ಹತ್ತಿರ ಸುಳಿಯಲು ಸಹ ಪೊಲೀಸರು ಬಿಟ್ಟಿಲ್ಲ. ಇನ್ನೂ ಈ ಟಯರ್ ಗೋಡೌನ್ ಪಕ್ಕದಲ್ಲೇ ತಯಾರಾದ ಹೊಚ್ಚ ಹೊಸ ಟ್ರಾಕ್ಟರ್​​ಗಳನ್ನ ನಿಲ್ಲಿಸಲಾಗಿದ್ದು, ಅದೃಷ್ಟವಶಾತ್ ಬೆಂಕಿ ನಂದಿಸುವ ಕಾರ್ಯ ನಡೆಸಿ ಟ್ರಾಕ್ಟರ್​​ಗಳಿಗೆ ಬೆಂಕಿ ತಗುಲದಂತೆ ತಡೆಯಲಾಗಿದೆ.

vlcsnap 2019 05 09 08h38m28s469

ಬೆಂಕಿ ಅನಾಹುತಕ್ಕೆ ಕಾರಣ ಏನು ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ಶಾರ್ಟ್ ಸರ್ಕ್ಯೂಟ್ ಸಂಭವಿಸುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದ್ದು, ಕಿಡಿಗೇಡಿಗಳು ಯಾರಾದರೂ ಬೆಂಕಿ ಹಚ್ಚಿದ್ದಾರ ಎನ್ನುವ ಅನುಮಾನ ಮೂಡಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *