ಮಂಗಳೂರು: ಇಲ್ಲಿನ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಸ್ಥಾವರದಿಂದ ಮತ್ತೆ ತ್ಯಾಜ್ಯ ಸೋರಿಕೆಯ ಆರೋಪ ಕೇಳಿಬಂದಿದ್ದು ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.
ಎಂಆರ್‌ಪಿಎಲ್ ಸ್ಥಾವರ ಬಳಿಯ ಕುತ್ತೆತ್ತೂರು ಗ್ರಾಮದ ಕೆಂಗಲ್ ಮತ್ತು ಅತ್ರುಕೋಡಿ ಭಾಗದಲ್ಲಿ ತ್ಯಾಜ್ಯ ಸೋರಿಕೆಯಾಗುತ್ತಿದ್ದು, ತೊರೆಗಳ ನೀರಿನಲ್ಲಿ ಬಿಳಿ ನೊರೆ ಕಾಣಿಸಿಕೊಂಡಿದೆ. ಮಳೆ ನೀರಿಗೆ ಸ್ಥಾವರದ ತ್ಯಾಜ್ಯ ಸೇರಿಕೊಂಡಿದೆ. ಇದೇ ತೊರೆಯ ನೀರು ಹರಿದು ಮುಂದೆ ನಂದಿನಿ ನದಿಯನ್ನು ಸೇರುತ್ತಿದ್ದು, ಮಾಲಿನ್ಯದಿಂದಾಗಿ ಮೀನು ಸಂತತಿ ನಾಶವಾಗುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
Advertisement
Advertisement
ತ್ಯಾಜ್ಯ ಸೋರಿಕೆಯಿಂದ ಬಿಳಿ ನೊರೆ ಕಾಣಿಸಿಕೊಂಡಿಲ್ಲ. ಪರಿಸರದಲ್ಲಿ ಕಾಂಕ್ರೀಟ್ ಕೆಲಸ ನಡೆಯುತ್ತಿದೆ. ಕಾಂಕ್ರೀಟ್ ಮಿಕ್ಸಿಂಗ್ ವೇಳೆ ಮಳೆಯಾಗಿದ್ದು, ನೀರಿಗೆ ಸೇರಿಕೊಂಡು ಬಿಳಿನೊರೆ ಉಂಟಾಗಿರಬೇಕು ಎಂದು ಎಂಆರ್‌ಪಿಎಲ್ ಆಡಳಿತ ಮಂಡಳಿ ಹೇಳುತ್ತಿದೆ.
Advertisement
ಯಾವುದೇ ಕಾಂಕ್ರೀಟ್ ನೀರು ಸೇರಿದರೆ ಬಿಳಿನೊರೆ ಕಾಣಿಸಿಕೊಳ್ಳುವುದಿಲ್ಲ. ತ್ಯಾಜ್ಯ ಸೋರಿಕೆ ಆಗುತ್ತಿರುವುದನ್ನು ಮುಚ್ಚಿ ಹಾಕಲು ಎಂಆರ್‍ಪಿಎಲ್ ಕುಂಟು ನೆಪ ಹೇಳುತ್ತಿದೆ. ಸ್ಥಾವರದ ತಾಂತ್ರಿಕ ವೈಫಲ್ಯದಿಂದ ತ್ಯಾಜ್ಯ ಸೋರಿಕೆಯಾಗುತ್ತಿದೆ. ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳು ಎಂಆರ್‌ಪಿಎಲ್ ಜೊತೆಗೆ ಶಾಮೀಲಾಗಿ ನೈಜ ವರದಿ ನೀಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.