ಪ್ರಸಿದ್ಧ ವಿಭೂತಿ ಫಾಲ್ಸ್‌ಗೆ ಪ್ರವಾಸಿಗರಿಗೆ ನಿರ್ಬಂಧ

Public TV
1 Min Read
Vibhuti Falls Karwar

ಉತ್ತರ ಕನ್ನಡ: ಜಿಲ್ಲೆಯ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಅಂಕೋಲ ತಾಲೂಕಿನ ಅಚವೆ ಗ್ರಾಮದಲ್ಲಿರುವ ಪ್ರಸಿದ್ಧ ವಿಭೂತಿ ಜಲಪಾತ (Vibhuti Falls) ವೀಕ್ಷಣೆಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ವಿಭೂತಿ ಜಲಪಾತ ತುಂಬಿ ಹರಿಯುತ್ತಿದೆ. ಇದರಿಂದ ಪ್ರತಿ ಕ್ಷಣದಲ್ಲಿ ನೀರಿನ ಪ್ರಮಾಣ ಸಹ ಏರಿಳಿತವಾಗುತ್ತಿದ್ದು, ಹರಿದು ಬರುವ ನೀರಿನಲ್ಲಿ ವಿಷಜಂತುಗಳು, ಮರದ ದಿಮ್ಮಿಗಳು ತೇಲಿಬರುತ್ತಿವೆ. ಅಪಾಯವಿರುವುದರಿಂದ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ನಿಷೇಧ ಹೇರಲಾಗಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಶಾಲಾ ಹೆಣ್ಮಕ್ಕಳ ಬೆತ್ತಲೆ ಫೋಟೋ ಕ್ಲಿಕ್ಕಿಸಿ ಬ್ಲ್ಯಾಕ್‌ಮೇಲ್‌ – ವಿಕೃತ ಕಾಮಿ ಅಂದರ್‌!

vibhuti falls karwar restriction

ಕಳೆದ ವರ್ಷ ಸಹ ಜುಲೈ ತಿಂಗಳಿಂದ ಮಳೆಗಾಲ ಮುಗಿಯುವ ವರೆಗೂ ನಿಷೇಧ ಹೇರಲಾಗಿತ್ತು. ವಿಭೂತಿ ಜಲಪಾತ ಅಂಕೋಲ ತಾಲೂಕಿನ ಗಡಿಯಲ್ಲಿ ಬರುತ್ತದೆ. ಇಲ್ಲಿನ ಜಲಪಾತ ಬೀಳುವ ಸ್ಥಳವು ಸುಣ್ಣದ ರೂಪದ ಕಲ್ಲುಗಳಿಂದ ಕೂಡಿದ್ದು ಸುತ್ತಲೂ ಅರಣ್ಯ ಗುಡ್ಡವನ್ನು ಹೊಂದಿದೆ. ಜಲಪಾತ 30 ಅಡಿ ಎತ್ತರದಲ್ಲಿದೆ. ಪಕ್ಕದಲ್ಲೇ ವಿಶ್ವ ಪ್ರಸಿದ್ಧ ಯಾಣ ಸಹ ಇದೆ. ಇದೇ ಭಾಗದಲ್ಲಿ ಸಹ ಸುಣ್ಣದ ಕಲ್ಲುಗಳಿದ್ದು, ಇವುಗಳ ಮೂಲಕ ಹರಿದುಬರುವುದರಿಂದ ಈ ಜಲಪಾತಕ್ಕೆ ವಿಭೂತಿ ಜಲಪಾತ ಎಂದು ಹೆಸರು ಬಂದಿದೆ.

ಪ್ರತಿ ಮಳೆಗಾಲದಲ್ಲಿ ಬಂದ್ ಇರುತ್ತಿದ್ದು, ಅಕ್ಟೋಬರ್ ತಿಂಗಳ ನಂತರ ಈ ಜಲಪಾತ ನೋಡಬಹುದಾಗಿದೆ. ಜೊತೆಗೆ ಪಕ್ಕದಲ್ಲೇ ಯಾಣ ಸಹ ಇರುವುದರಿಂದ ಕರಾವಳಿ ಪ್ರವಾಸ ಮಾಡುವವರು ಈ ಭಾಗಕ್ಕೆ ಬಂದು ಹೋಗಬಹುದಾಗಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ಕೇಸ್; ಮಾಜಿ ಸಚಿವ ನಾಗೇಂದ್ರ, ದದ್ದಲ್ ಮನೆ ಮೇಲೆ ಇಡಿ ದಾಳಿ

ಗೋಕರ್ಣ (Gokarna) ದಿಂದ ನೇರವಾಗಿ ಇಲ್ಲಿಗೆ ಬರಲು ಉತ್ತಮ ರಸ್ತೆಗಳಿವೆ‌. ಸದ್ಯ ಜಲಪಾತ ವೀಕ್ಷಣೆಗೆ ನಿರ್ಬಂಧ ಹೇರಲಾಗಿದ್ದು, ಮಳೆ ಇಳಿಕೆಯಾದ ನಂತರ ಎಂದಿನಂತೆ ಜನರಿಗೆ ಪ್ರವೇಶ ದೊರೆಯಲಿದೆ.

Share This Article