ಚಾಮರಾಜನಗರ: ಸೆಲ್ಫಿ ಹುಚ್ಚಿಗೆ ಜನ ಏನು ಬೇಕಾದರೂ ಮಾಡುತ್ತಾರೆ ಎಂಬುದು ಮತ್ತೊಮ್ಮೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಬಳಿ ನಡೆದಿದೆ.
ಪ್ರಯಾಣದ ವೇಳೆ ರಸ್ತೆ ಬದಿ ಬೆಳೆದಿರುವ ಬೆಳೆಗಳ ನಡುವೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಆದರೆ ಜಮೀನಿನಲ್ಲಿ ಬೆಳೆ ಹಾಳಾಗುತ್ತದೆ ಇಲ್ಲಿ ಸೆಲ್ಫಿ ತೆಗೆಯಬೇಡಿ ಎಂದಿದ್ದಕ್ಕೆ ಯುವಕರ ಗುಂಪೊಂದು ಜಮೀನು ಮಾಲೀಕನ ಮೇಲೆಯೇ ಹಲ್ಲೆ ನಡೆಸಿದೆ.
Advertisement
ಬಸವಣ್ಣ ಹಲ್ಲೆಗೊಳಗಾದ ಜಮೀನಿನ ಮಾಲೀಕ. ಇವರ ಜಮೀನು ರಾಷ್ಟ್ರೀಯ ಹೆದ್ದಾರಿ 212 ಪಕ್ಕ ಇದೆ. ಇಂದು ಕೇರಳದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಯುವಕರ ಗುಂಪೊಂದು ಸೂರ್ಯಕಾಂತಿ ಬೆಳೆಯ ನಡುವೆ ಸೆಲ್ಫಿ ತೆಗೆದುಕೊಳ್ಳಲು ಜಮೀನಿಗೆ ನುಗ್ಗಿದ್ದಾರೆ. ಈ ವೇಳೆ ಸೂರ್ಯಕಾಂತಿ ಬೆಳೆಯನ್ನು ತುಳಿದು ಹಾಳು ಮಾಡಿದ್ದಾರೆ.
Advertisement
ಇದನ್ನು ನೋಡಿದ ರೈತ ಬಸವಣ್ಣ ಬೆಳೆ ಹಾಳಾಗುತ್ತದೆ ಇಲ್ಲಿ ಫೋಟೋ ತೆಗೆದುಕೊಳ್ಳಬೇಡಿ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಯುವಕರು ಬಸವಣ್ಣ ಮೇಲೆಯೇ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಕೂಡಲೇ ವಿಷಯ ತಿಳಿದು ಗ್ರಾಮಸ್ಥರು ಸ್ಥಳಕ್ಕೆ ಬಂದು ಹಲ್ಲೆ ಮಾಡಿದ ಯುವಕರನ್ನು ಹಿಡಿದು ಥಳಿಸಿದ್ದಾರೆ.
Advertisement
ಈ ವೇಳೆ ಮೂವರು ಯುವಕರು ಸಿಕ್ಕಿಹಾಕಿಕೊಂಡಿದ್ದು, ಉಳಿದ 7 ಮಂದಿ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಅಕ್ರಮವಾಗಿ ಜಮೀನಿಗೆ ನುಗ್ಗಿ ಬೆಳೆ ಹಾಳುಮಾಡಿದ್ದಲ್ಲದೆ ವಿರೋಧ ವ್ಯಕ್ತಪಡಿಸಿದ ಮಾಲೀಕನ ಮೇಲೆಯೇ ಹಲ್ಲೆ ನಡೆಸಿದ ಕಾರಣ ಮೂವರು ಯುವಕರನ್ನು ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.