Connect with us

Chitradurga

ಕೋಟೆನಾಡಿಗೆ ಮಂಗಗಳ ಕಾಟ – ಕೋತಿಗಳ ಟಾರ್ಚರ್‍ಗೆ ಪ್ರವಾಸಿಗರು ಹೈರಾಣ

Published

on

ಚಿತ್ರದುರ್ಗ: ಕೋಟೆನಾಡು ಐತಿಹಾಸಿಕ ತಾಣಗಳಿಗೆ ಪ್ರಸಿದ್ಧವಾದ ಸ್ಥಳವಾಗಿದೆ. ಆದ್ದರಿಂದ ಪ್ರತಿದಿನ ನೂರಾರು ಜನ ಪ್ರವಾಸಿಗರು ಈ ಸುಂದರ ತಾಣಗಳ ವೀಕ್ಷಣೆಗಾಗಿ ಭೇಟಿ ನೀಡುತ್ತಾರೆ. ಆದರೆ ಚಂದ್ರವಳ್ಳಿ ಅರಣ್ಯದ ಬಳಿ ಮಾತ್ರ ಮಂಗಗಳ ಕಾಟದಿಂದಾಗಿ ಪ್ರವಾಸಿಗರು ಹೈರಾಣಾಗುವಂತಾಗಿದೆ.

ಜಿಲ್ಲೆಯ ಚಂದ್ರವಳ್ಳಿಯ ಅರಣ್ಯ ಪ್ರದೇಶವಿದ್ದು, ಇಲ್ಲಿನ ಬೆಟ್ಟಗುಡ್ಡಗಳ ಮಧ್ಯೆ ಐತಿಹಾಸಿಕ ಗುಹಾಂತರ ದೇವಾಲಯಗಳಿವೆ. ಹೀಗಾಗಿ ನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಆದರೆ ಯಾರೊಬ್ಬರು ತಮ್ಮ ಕೈಯಲ್ಲಿ ಏನೂ ತರುವಂತಿಲ್ಲ. ಪ್ರವಾಸಿಗರು ತರುವಂತಹ ಹಣ್ಣು, ಬಿಸ್ಕಟ್, ಊಟ, ಉಪಹಾರ ಏನೇ ತಂದರೂ ಸಹ ಇಲ್ಲಿ ಬೀಡು ಬಿಟ್ಟಿರುವ ಮಂಗಗಳ ಪಾಲಾಗುತ್ತದೆ.

ಅಷ್ಟೇ ಅಲ್ಲದೇ ಇಲ್ಲಿ ಪಾರ್ಕಿಂಗ್ ಮಾಡಿದ ಬೈಕ್‍ಗಳ ಸೀಟು, ಸೈಡ್ ಬ್ಯಾಗ್ ಹಾಗೂ ಕಾರುಗಳ ಕನ್ನಡಿ ಮಂಗಗಳ ದಾಳಿಗೆ ಎಲ್ಲಾ ಹಾಳಾಗಿರುತ್ತವೆ. ಇವುಗಳ ಬಗ್ಗೆ ಗೊತ್ತಿರುವ ಕೆಲವರು ಬೈಕಿನ ಮೇಲೆ ಮುಳ್ಳಿನ ಬೇಲಿಯನ್ನಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಶಾಲಾ ವಿದ್ಯಾರ್ಥಿಗಳು, ಮಹಿಳೆಯರಂತೂ ಇಲ್ಲಿಗೆ ಬಂದು ಖುಷಿ ಪಡುವ ಬದಲು ಮಂಗಗಳಿಂದ ಭಯಪಡುವುದೇ ಹೆಚ್ಚಾಗಿದೆ ಎಂದು ಪ್ರವಾಸಿಗರಾದ ಪರಮೇಶ್ ಹೇಳಿದ್ದಾರೆ.

ಇಲ್ಲಿನ ವ್ಯಾಪಾರಿಗಳು ಸಹ ಮಂಗಗಳ ಹಾವಳಿಯಿಂದ ಬೇಸತ್ತು ಹೋಗಿದ್ದಾರೆ. ಈ ಬಗ್ಗೆ ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಕೀಲರಾದ ಅಶೋಕ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ಈ ಚಂದ್ರವಳ್ಳಿ ಅರಣ್ಯ ಪ್ರದೇಶದಲ್ಲಿ ಸುಮಾರು 300 ಮಂಗಗಳು ಬೀಡು ಬಿಟ್ಟಿವೆ. ಈ ಮಂಗಗಳ ಚೇಷ್ಟೆ ಒಂದು ಕ್ಷಣ ಮನರಂಜನೆ ನೀಡಿದ್ರೆ ಮತ್ತೊಂದು ಕ್ಷಣ ಭಯವನ್ನು ಸೃಷ್ಠಿಸುತ್ತಿದೆ.

 

Click to comment

Leave a Reply

Your email address will not be published. Required fields are marked *