ಚಿಕ್ಕಬಳ್ಳಾಪುರ: ಆತ್ಮಹತ್ಯೆ ಮಾಡಿಕೊಳ್ಳಬಹುದು ಎನ್ನುವ ಅನುಮಾನದ ಹಿನ್ನೆಲೆಯಲ್ಲಿ ಏಕಾಂಗಿಯಾಗಿ ಬರುವ ಪ್ರವಾಸಿಗರಿಗೆ ವಿಶ್ವವಿಖ್ಯಾತ ನಂದಿಗಿರಿಧಾಮದ ಪ್ರವೇಶಕ್ಕೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ಹಾಗಂತ ಒಬ್ಬರೆ ಬರುವ ಆಗಿಲ್ಲ ಎಂದು ಬೈಕಿನಲ್ಲಿ ಬರುತ್ತಿರುವ ಕೆಲವರು ತಮ್ಮ ಜೊತೆಗೆ ಮತ್ತೊಬ್ಬರು ಅವರ ಜೊತೆಗೆ ಇನ್ನೊಬ್ಬರು ಅಂತ ಮೂವರು ಬರುತ್ತಿದ್ದಾರೆ.
ವಿಶ್ವವಿಖ್ಯಾತ ನಂದಿಗಿರಿಧಾಮ ತನ್ನ ಅನನ್ಯ ಪ್ರಾಕೃತಿಕ ಸೊಬಗಿನಿಂದಲೇ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯೋ ಹಚ್ಚು ಹಸುರಿನ ಪ್ರೇಮಧಾಮ. ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದ ಈ ನಯನ ಮನೋಹರ ನಂದಿಬೆಟ್ಟ ಬೆಂಗಳೂರಿಗರಿಗಂತೂ ವಿಕೇಂಡ್ ನ ಪಿಕ್ ನಿಕ್ ಸ್ಪಾಟ್ ಆಗಿದೆ. ಅದರಲ್ಲೂ ಪ್ರೇಮಿಗಳಿಗೆ ಹಾಟ್ ಫೇವರಿಟ್ ತಾಣವಾಗಿದೆ.
Advertisement
Advertisement
ಇಂತಹ ವಿಶ್ವ ಪ್ರಸಿದ್ದಿ ಪಡೆದ ನಂದಿಗಿರಿಧಾಮ ವಿಕೇಂಡ್ ಬಂದರೆ ಸಾಕು ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಆದರೆ ನಂದಿಬೆಟ್ಟಕ್ಕೆ ಬೈಕಿನಲ್ಲಿ ಬರುತ್ತಿರುವ ಬಹುತೇಕರು ತ್ರಿಬಲ್ ರೈಡಿಂಗ್ ಮಾಡುತ್ತಿರುವುದು ಜಾಸ್ತಿಯಾಗಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವ ಬೈಕ್ ಸವಾರರು ರ‍್ಯಾಶ್ ಡ್ರೈವಿಂಗ್ ಮಾಡುತ್ತಾ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಅದರಲ್ಲೂ ಅಪ್ರಾಪ್ತ ಬಾಲಕರು ಸಹ ಬೈಕ್‍ನ್ನು ಅಡ್ಡಾ-ದಿಡ್ಡಿ ಚಾಲನೆ ಮಾಡುತ್ತಾ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ.
Advertisement
Advertisement
ಒಂದು ಬೈಕಿನಲ್ಲಿ ಇಬ್ಬರು ಸಾಲದು ಅಂತ ಮೂವರು ಬರುತ್ತಿದ್ದು, ಜೊತೆಗೆ ಅಂಕು ಡೊಂಕಿನ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಾಯಿಸುತ್ತಾ ಆಪತ್ತನ್ನು ತಮ್ಮ ಮೈಮೇಲೆ ತಾವೇ ಎಳೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ದ್ವಿಚಕ್ರ ವಾಹನ ಚಾಲನೆ ವೇಳೆ ಹೆಲ್ಮೆಟ್ ಕಡ್ಡಾಯ ಅಂತ ಕಾನೂನು ಇದ್ದರೂ ಹೆಲ್ಮೆಟ್ ಹಾಕದೆ ಬಹುತೇಕ ಮಂದಿ ಬೈಕ್ ರೈಡ್ ಮಾಡುತ್ತಿದ್ದಾರೆ. ದುರಂತ ಅಂದರೆ ಕೆಲವರು ಹೆಲ್ಮೆಟ್ ತಂದರೂ ಶೋಕಿಗೆ ಹೆಲ್ಮೆಟ್ ನನ್ನು ಬೈಕ್ ಮುಂಭಾಗ ಅಥವಾ ಕೈಯಲ್ಲಿ ಹಾಕಿಕೊಂಡು ಬೈಕ್ ಚಾಲನೆ ಮಾಡುತ್ತಿದ್ದಾರೆ.
ಪ್ರೇಮಿಗಳ ಪಾಲಿನ ಫೇವರಿಟ್ ತಾಣ ನಂದಿಗಿರಿಧಾಮಕ್ಕೆ ಕದ್ದು ಮುಚ್ಚಿ ಬರುವ ಕೆಲ ಜೋಡಿಗಳು, ಬೈಕ್ ನಲ್ಲಿ ಬರುವಾಗ ತಲೆಗೆ ಹೆಲ್ಮೆಟ್ ಹಾಕಿಕೊಂಡು ಬರುತ್ತಾರೋ ಬಿಡ್ತಾರೋ. ಅಪ್ಪಿ ತಪ್ಪಿ ಎಲ್ಲಾದರೂ ಕ್ಯಾಮೆರಾ ಕಂಡರೆ ಸಾಕು ಮನೆಯಲ್ಲಿ, ಪರಿಚಯಸ್ಥರಿಗೆ ಗೊತ್ತಾಗಿ ಮಾನ ಹೋಗುತ್ತೆ ಅಂತ ಬಟ್ಟೆಯಿಂದ ಮುಖ ಮುಚ್ಕೋತಾರೆ. ಆದರೆ ಅಪಘಾತವಾಗಿ ಪ್ರಾಣ ಹೋಗುತ್ತೆ ಹೆಲ್ಮೆಟ್ ಹಾಕಿಕೊಳ್ಳೋಣ ಎನ್ನುವ ಕನಿಷ್ಠ ಅರಿವು ಇಲ್ಲದೆ ಪ್ರಾಣಕ್ಕಿಂತ ಮಾನ ಮುಖ್ಯ ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv