ಯಾದಗಿರಿ: ಒಂದು ಕಡೆ ಕೃಷ್ಣ ನದಿ ತೀರದಲ್ಲಿ ಪ್ರವಾಹದ ಭೀತಿ, ಮತ್ತೊಂದು ಸಾಗರದಂತೆ ಹರಿಯುತ್ತಿರುವ ನಾರಾಯಣಪುರ ಜಲಾಶಯದ ಬಳಿ ಜನರು ಸೆಲ್ಫಿಗಾಗಿ ಮುಗಿದು ಬೀಳುತ್ತಿದ್ದಾರೆ. ಜನರ ಸೆಲ್ಫಿ ಹುಚ್ಚು ಭಾರಿ ಅನಾಹುತ ಸೃಷ್ಟಿಸುವಂತಿದೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆರಾಯನ ಅಬ್ಬರಕ್ಕೆ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವ ಕಾರಣಕ್ಕೆ ನಾರಾಯಣಪುರ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಈ ಮಧ್ಯೆ ಜಲಾಯಶಯದಿಂದ ನೀರು ಹೊರಹೋಗುವ ದೃಶ್ಯವನ್ನು ನೋಡಲು ಜನರು ತಾ ಮುಂದು ನಾ ಮುಂದು ಎಂದು ಬರುತ್ತಿದ್ದಾರೆ. ಅಲ್ಲದೆ ಭೋರ್ಗರೆದು ಹರಿಯುತ್ತಿರುವ ನೀರನ ಸೆಲ್ಫಿ ತೆಗೆದುಕೊಳ್ಳುತ್ತಿದ್ದರೆ. ಫೋಟೋ ಕ್ಲಿಕ್ಕಿಸುವಾಗ ಸ್ವಲ್ಪ ಯಾಮಾರಿದರು ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿದಿದ್ದರು ನೀರಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.
ಪ್ರವಾಸಿಗರು ಪ್ರಾಣದ ಹಂಗು ತೊರೆದು ಸೆಲ್ಫಿ ತೆಗದುಕೊಳ್ಳುತ್ತಿದ್ದರು ಅಲ್ಲಿನ ಸಿಬ್ಬಂದಿಯಾಗಲಿ, ಯಾದಗಿರಿ ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಜಲಾಶಯ ಬಾಯಿಗೆ ಜನರನ್ನು ಬಿಟ್ಟ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ. ಜಲಾಶಯದ ಮುಖ್ಯ ಗೇಟಿನ ಬಳಿ ಜನರನ್ನು ಬಿಡುವುದು ಬಹಳ ಅಪಾಯಕಾರಿ, ಹೀಗಾಗಿ ಜಲಾಶಯ ಮುಖ್ಯ ಭಾಗಕ್ಕೆ ಸಾರ್ವಜನಿಕರಿಗೆ ಸಂಪೂರ್ಣ ನಿಷೇಧವಿದೆ. ಹೀಗಿದ್ದರೂ ಪ್ರವಾಸಿಗರು ಕ್ಯಾರೆ ಎನ್ನದೆ ಜಲಾಶಯದಲ್ಲಿ ಮನಬಂದಂತೆ ವರ್ತನೆ ಮಾಡುತ್ತಿದ್ದಾರೆ.
ಸ್ಥಳದಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲ. ಯಾವುದೇ ಮುಂಜಾಗೃತ ಕ್ರಮಗಳನ್ನು ಕೈಗೊಂಡಿಲ್ಲ. ಜಲಾಶಯಕ್ಕೆ ಭೇಟಿ ನೀಡುವ ಪ್ರವಾಸಿಗರು ಒಂದು ಕ್ಷಣ ಮೈಮರೆತರು ಅನಾಹುತ ನಡೆಯೋದು ಗ್ಯಾರೆಂಟಿ. ಹೀಗಾಗಿ ಜಿಲ್ಲಾಡಳಿತ ಈ ಬಗ್ಗೆ ಗಮನವರಿಸಿ, ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.