ಚಾಮರಾಜನಗರ: ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಬೆಸೆಯುವ ಸೇತುವೆ ಎಂದೇ ಕರೆಸಿಕೊಳ್ಳುವ ಹಾಗೂ ಬಿಳಿ ಬಣ್ಣವನ್ನು ಹೊದ್ದುಕೊಂಡಿರುವ ಸ್ವಚ್ಛಂದ ಶ್ವೇತ ವರ್ಣದ ಬೆಟ್ಟದ ಹೆಸರೇ ಶ್ವೇತಾದ್ರಿ.
ಇಂತಹದೊಂದು ಅಪರೂಪವಾದ ಪ್ರಕೃತಿ ರಮಣೀಯವಾದ ಪ್ರೇಕ್ಷಣೀಯ ಸ್ಥಳ ಇರುವುದು ಚಾಮರಾಜನಗರ ಜಿಲ್ಲೆ ಹಾಗೂ ತಾಲೂಕಿನಲ್ಲಿ. ಹಸಿರು ಸೀರೆಯುಟ್ಟ ನಾರಿಯಂತೆ ಕಾಣುವ ಆ ಹಚ್ಚಹಸಿರಾದ ಬೆಟ್ಟ ನೋಡಲು ಕಣ್ಣೆರಡು ಸಾಲದು. ಅಂದ ಚೆಂದದ ಬೆಟ್ಟದ ಸಾಲುಗಳ ಮಧ್ಯೆ ನುಸುಳುವ ಗಾಳಿಗೆ ಮೈ ಒಡ್ಡಿದರೆ ಆಹಾ ಸ್ವರ್ಗದ ಸುಖ. ತೇಲುವ ಮೋಡಗಳ ಮಧ್ಯೆ ಬೆಟ್ಟದ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಒಂದು ರೀತಿಯ ಆಹ್ಲಾದಕರ.
Advertisement
Advertisement
ಪ್ರಕೃತಿ ಸೊಬಗನ್ನು ಹೊದ್ದು ಮಲಗಿದಂತೆ ಕಾಣುವ ಈ ಶ್ವೇತಾದ್ರಿ ಬೆಟ್ಟವನ್ನು ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟವೆಂದೂ ಕರೆಯುತ್ತಾರೆ. ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯ ಪಕ್ಕದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಈ ಬೆಟ್ಟ ಕಂಡು ಬರುತ್ತದೆ. ತಮಿಳುನಾಡಿನ ದಿಂಬ್ಬಂ, ಜೋಡಿಗೆರೆ, ಕಾಡಿಗೆರೆ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿರುವುದರಿಂದ ಪ್ರಕೃತಿ ಹಸಿರು ಸೀರೆಯುಟ್ಟ ನಾರಿಯಂತೆ ಕಂಗೊಳಿಸುತ್ತಿದೆ.
Advertisement
Advertisement
ಮೈದುಂಬಿ ಕೊಂಡಿರುವ ಸುವರ್ಣಾವತಿಗೆ ಮುತ್ತಿಕ್ಕುವಂತೆ ಕಾಣುವ ಮೋಡಗಳು ನೋಡುಗರನ್ನ ಮುದಗೊಳಿಸುತ್ತಿದೆ. ವರ್ಷದ ಬಹುತೇಕ ದಿನಗಳು ಹಸಿರು ಸೀರೆಯುಟ್ಟು ಶೃಂಗಾರಗೊಂಡ ನಾರಿಯಂತೆ ಕಾಣುವ ಈ ಹಚ್ಚ ಹಸಿರಾದ ಬೆಟ್ಟದ ಸೌಂದರ್ಯಕ್ಕೆ ಮನಸೋಲದವರಿಲ್ಲ. ವೀಕೆಂಡ್ ಬಂದರಂತೂ ನೂರಾರು ಜನ ಈ ರಮಣೀಯತೆಯನ್ನು ಕಣ್ತುಂಬಿ ಕೊಳ್ಳಲು ಆಗಮಿಸುತ್ತಾರೆ. ದೂರಕ್ಕೆ ಹಾಲಿನ ನೊರೆಯಂತೆ ಕಾಣುವ ಈ ಬಿಳಿಗಿರಿ ರಂಗನ ಬೆಟ್ಟವನ್ನು ಶ್ವೇತಾದ್ರಿ ಬೆಟ್ಟ ಎಂದು ಕರೆಯುತ್ತಾರೆ.
ಒಂದೆಡೆ ಪ್ರಕೃತಿಯ ಮಡಿಲಿನಲ್ಲಿ ಮಲಗಿದ್ದೇವೆ ಎಂಬಂತೆ ಬಾಸವಾದರೆ ಮತ್ತೊಂದೆಡೆ ತುಂಬಿರುವ ಸುವರ್ಣಾವತಿ ಜಲಾಶಯ ಮುದ ನೀಡುತ್ತದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಸುವರ್ಣಾವತಿಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ನೀಲಿ ನಕ್ಷೆ ತಯಾರಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಜಾರಿಗೆ ಬಂದಿಲ್ಲ. ಚಾಮರಾಜನಗರದಿಂದ 20 ಕಿ.ಮೀ. ದೂರದಲ್ಲಿರುವ ಸುವರ್ಣಾವತಿಗೆ ಉತ್ತಮ ರಸ್ತೆ ಮತ್ತು ಸಾರಿಗೆ ಸೌಕರ್ಯವಿದ್ದರೂ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದರೆ ಉತ್ತಮ ಪ್ರವಾಸಿ ತಾಣವನ್ನಾಗಿ ಮಾಡ ಬಹುದು ಎಂಬುದು ಸ್ಥಳೀಯ ಆಗ್ರಹವಾಗಿದೆ.