ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮ ಪ್ರೇಮಿಗಳ ಪಾಲಿನ ಪ್ರೇಮಧಾಮ ಹಾಗೂ ಎಲ್ಲರಿಗೂ ಅಚ್ಚು ಮೆಚ್ಚಿನ ವಿಕೇಂಡ್ ಪಿಕ್ನಿಕ್ ಸ್ಪಾಟ್ ಆಗಿದೆ. ಈ ಸ್ವರ್ಗತಾಣಕ್ಕೆ ಪ್ರತಿದಿನ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಈಗ ಒಂದು ಫೇಕ್ ಮೆಸೇಜ್‍ನಿಂದ ಕಳೆದ ಎರಡು ಮೂರು ದಿನಗಳಿಂದ ನಂದಿಗಿರಿಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡಿದೆ.
ನಂದಿಬೆಟ್ಟದಲ್ಲಿ ಚಿರತೆ ದಾಳಿ ನಡೆದಿದೆಯಂತೆ, ಚಿರತೆ ದಾಳಿಗೆ ಹೆದರಿದ ಬೈಕ್ ಸವಾರರು ಮರ ಏರಿ ಕುಳಿತಿದ್ದಾರೆ. ಮತ್ತೊಂದೆಡೆ ಚಿರತೆಯೊಂದು ಬೈಕ್ ಸವಾರರನ್ನು ಬಲಿ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಮೆಸೇಜ್‍ಗಳು ವಾಟ್ಸಾಪ್, ಫೇಸ್‍ಬುಕ್, ಇನ್‍ಸ್ಟಾಗ್ರಾಂಗಳ ಮೂಲಕ ಎಲ್ಲರಿಗೂ ಬಂದಿರುತ್ತೆ. ಇದರಿಂದ ಆತಂಕಕ್ಕೀಡಾಗಿರುವ ಜನ ನಂದಿಗಿರಿಧಾಮಕ್ಕೆ ಹೋಗಲು ಹೆದರುತ್ತಿದ್ದಾರೆ.
Advertisement
Advertisement
ಈ ಸುದ್ದಿ ಸುಳ್ಳು ಸುದ್ದಿಯಾಗಿದ್ದು, ಅಸಲಿಗೆ ನಂದಿಗಿರಿಧಾಮದಲ್ಲಿ ಅಂತಹ ಯಾವುದೇ ಚಿರತೆ ದಾಳಿ ನಡೆದಿಲ್ಲ. ಕೆಲಸವಿಲ್ಲದ ಕೆಲ ಕಿಡಿಗೇಡಿಗಳು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರಿಂದ ಅರಣ್ಯಾಧಿಕಾರಿಗಳಿಗೆ ಕರೆ ಮೇಲೆ ಕರೆ ಬರುತ್ತಿದ್ದು, ರಿಸೀವ್ ಮಾಡಿ ಸ್ಪಷ್ಟನೆ ಕೊಟ್ಟೂ ಕೊಟ್ಟೂ ಅಕ್ಷರಶಃ ಹೈರಾಣಾಗಿ ಹೋಗಿದ್ದಾರೆ.
Advertisement
ಎಲ್ಲೋ ಆಗಿರುವ ಘಟನೆಯನ್ನು ಮತ್ತೆಲ್ಲೋ ಆಗಿದೆ ಅಂತ ಥಳಕು ಹಾಕಿ ಕ್ರಿಯೇಟ್ ಮಾಡಿರುವ ಕೆಲ ಕಿಡಿಗೇಡಿಗಳ ಕೃತ್ಯ ದಿನದಿಂದ ದಿನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ವೇಗವಾಗಿ ವೈರಲ್ ಆಗುತ್ತಿದೆ. ಪ್ರವಾಸಿಗರು ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದೇ ಧೈರ್ಯವಾಗಿ ನಂದಿಗಿರಿಧಾಮಕ್ಕೆ ಹೋಗಬಹುದಾಗಿದೆ.
Advertisement
ಸವಾರರು ಮರವೇರಿದ್ದು ಎಲ್ಲಿ?
ರಸ್ತೆಯಲ್ಲಿ ಸಂಚರಿಸುವಾಗ ಚಿರತೆ ಏಕಾಏಕಿ ದಾಳಿ ಮಾಡಿದ ಘಟನೆ ನಡೆದಿರುವುದು ಖಾನಾಪುರ ಬಳಿಯ ಚೋರಲಾ ಘಾಟಿಯಲ್ಲಿ. ಕೆಲ ದಿನಗಳ ಹಿಂದೆ ಬೆಳಗಾವಿಯಿಂದ ಗೋವಾಕ್ಕೆ ತೆರಳುವ ಚೋರಲಾ ಘಾಟಿ ಬಳಿ ರಸ್ತೆಯಲ್ಲಿ ಸಂಚರಿಸುತ್ತಿದ್ದವರ ಮೇಲೆ ಚಿರತೆ ದಾಳಿ ಮಾಡಿತ್ತು. ವ್ಯಕ್ತಿಯೋರ್ವ ಬೈಕ್‍ನಲ್ಲಿ ಚೋರಲಾ ಘಾಟಿ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ಚಿರತೆ ದಾಳಿ ಮಾಡಿದ ಪರಿಣಾಮ ಗಾಯಗೊಂಡಿದ್ದ. ಇದನ್ನು ಕಂಡ ಇತರೇ ಬೈಕ್ ಸವಾರರು ಭಯದಿಂದ ಮರವೇರಿ ಕುಳಿತಿದ್ದರು.
ಬೆಳಗಾವಿ ಮತ್ತು ಗೋವಾ ಮಧ್ಯೆ ಇರುವ ಚೋರಲಾ ಘಾಟಿ ಸುತ್ತಮುತ್ತ ದಟ್ಟವಾದ ಅರಣ್ಯ ಪ್ರದೇಶವಿದೆ. ಹೀಗಾಗಿ ಚಿರತೆ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ರಸ್ತೆಯಲ್ಲಿ ಏಕಾಏಕಿ ದಾಳಿ ಮಾಡಿದ ಚಿರತೆಯನ್ನು ಕಂಡು ತಬ್ಬಿಬ್ಬಾದ ಬೈಕ್ ಸವಾರರು, ತಮ್ಮ ವಾಹನಗಳನ್ನು ರಸ್ತೆಯಲ್ಲಿಯೇ ಬಿಟ್ಟು ಪ್ರಾಣ ಉಳಿಕೊಂಡರೆ ಸಾಕು ಅಂತ ಮರಗಳನ್ನು ಹತ್ತಿ ಕುಳಿತಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv