ಮಡಿಕೇರಿ: ಕೊಡಗು ಅಂದ್ರೆ ಎಲ್ಲರ ಮೈ ರೋಮಾಂಚನವಾಗುತ್ತದೆ. ಪ್ರಕೃತಿಯ ಮಡಿಲಲ್ಲಿ ಒಂದು ನಾಲ್ಕು ದಿನ ಕಳೆದು ಎಂಜಾಯ್ ಮಾಡಿ ಬರೋಣ, ಕೊಡಗಿನ ಪರಿಸರದಲ್ಲಿ ಸುತ್ತಾಡೋಣ ಅಂತೆಲ್ಲಾ ಜಿಲ್ಲೆಗೆ ಪ್ರವಾಸಿಗರು ದಿನನಿತ್ಯ ಸಾಗರೋಪಾದಿಯಲ್ಲಿ ಬರುತ್ತಾರೆ. ಪರಿಣಾಮ ಜಿಲ್ಲೆಯ ಪ್ರವಾಸೋದ್ಯಮವೂ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಆದ್ರೆ ಇಲ್ಲಿನ ಆಡಳಿತದ ವೈಫಲ್ಯ, ಪ್ರವಾಸಿಗರ ಅತಿರೇಕದ ವರ್ತನೆ ಮತ್ತು ಸ್ಥಳೀಯರ ದಬ್ಬಾಳಿಕೆಯಿಂದ ಕೊಡಗು ಜಿಲ್ಲೆಯ ಹೆಸರಿಗೆ ಕಳಂಕ ತರುವಂತವಾಗಿದೆ.
ಇತ್ತೀಚೆಗೆ ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣ ದುಬಾರೆಗೆ ಹೈದ್ರಾಬಾದಿನ ಕಂಪನಿಯ ಯುವಕರ ತಂಡವೊಂದು ಪ್ರವಾಸಕ್ಕೆಂದು ಬಂದಿದ್ದು, ರ‍್ಯಾಫ್ಟಿಂಗ್ ಗೆ ತೆರಳಿದ್ದಾಗ ರ‍್ಯಾಫ್ಟರ್ ನಡುವೆ ಅತಿರೇಕದಿಂದ ವರ್ತಿಸಿ ಜಗಳ ಮಾಡಿದ್ದಾರೆ. ಇದಾದ ಬಳಿಕ ರ‍್ಯಾಫ್ಟಿಂಗ್ ಸ್ಥಳದಲ್ಲಿ ಮತ್ತೆ ಪ್ರವಾಸಿ ಯುವಕರು ಹಾಗೂ ರ‍್ಯಾಫ್ಟರ್ ಗಳ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟವಾಗಿದೆ. ಈ ಸಂದರ್ಭ ರ‍್ಯಾಫ್ಟಿಂಗ್ ಗೆ ಬಳಸುವ ಪೆಡಲ್ ನಿಂದ ರ‍್ಯಾಫ್ಟರ್ ಹಲ್ಲೆ ಮಾಡಿದ್ದಾನೆ. ಪರಿಣಾಮ ಐದಾರು ಮಂದಿಗೆ ಗಾಯಗಳಾಗಿದ್ದು, ಪ್ರವಾಸಿ ಯುವಕ ರಜಿ ಅಹಮ್ಮದ್ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನು ಮೈಸೂರಿನ ಆಸ್ಪತ್ರೆಗೆ ಸಾಗಿಸಿತಾದರೂ ಆತ ಮೃತಪಟ್ಟಿದ್ದಾನೆ.
ಯುವಕನ ಸಾವಿಗೆ ಕಾರಣರಾದ ರ‍್ಯಾಫ್ಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದ ದುಬಾರೆ ಹಾಗೂ ನಂಜರಾಯಪಟ್ಟಣ ಸುತ್ತಮುತ್ತಲಿನ ಸುಮಾರು 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ದುಬಾರೆ ರ‍್ಯಾಫ್ಟಿಂಗ್ ಹಿಂದಿನಿಂದಲೂ ವಿವಾದಿತ ವಿಚಾರವಾಗಿದ್ದು, ಖಾಸಗಿ ವ್ಯಕ್ತಿಗಳು ರ‍್ಯಾಫ್ಟಿಂಗ್ ನಡೆಸುತ್ತಿದ್ದಾರೆ. ಅದನ್ನು ವಶಕ್ಕೆ ಪಡೆದು ರ‍್ಯಾಫ್ಟಿಂಗ್ ನಿರ್ವಹಣೆ ಮಾಡುವುದರಲ್ಲಿ ಹಾಗೂ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ನೀಡಿ, ಪ್ರವಾಸಿಗರ ಅತಿರೇಕದ ವರ್ತನೆಗೆ ಕಡಿವಾಣ ಹಾಕುವುದರಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಂಪೂರ್ಣವಾಗಿ ವಿಫಲವಾಗಿರುವುದೇ ಇಂತಹ ದುರ್ಘಟನೆಗಳಿಗೆ ಕಾರಣ ಎಂಬ ಮಾತುಗಳೂ ಕೇಳಿಬರುತ್ತಿವೆ. ಅಲ್ಲದೆ ಜಿಲ್ಲೆಯ ಇತರೆ ಜಲಪಾತಗಳಂತಹ ಪ್ರವಾಸಿ ತಾಣಗಳಲ್ಲೂ ಪ್ರವಾಸಿರಿಗೆ ಸೂಕ್ತ ರಕ್ಷಣೆ ಇಲ್ಲದಿರೋದು ಹಲವು ಅನಾಹುತಗಳಿಗೆ ಕಾರಣವಾಗಿದೆ.