ಕಾರವಾರ: ಯಲ್ಲಾಪುರ ಹಾಗೂ ಜೋಯಿಡಾ ತಾಲೂಕಿನ ಗಡಿಯ ಶಿವಪುರ ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆಯ ಮೇಲೆ ಅಪರಿಚಿತರು ಕಾರು(Car) ನ್ನು ಚಲಾಯಿಸಿಕೊಂಡು ಹೋಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಜನರು ಓಡಾಡುವ ತೂಗು ಸೇತುವೆ (Bridge) ಯಲ್ಲಿ ಕಾರನ್ನು ಚಲಾಯಿಸಿಕೊಂಡು ಬಂದಿದ್ದಕ್ಕೆ ಸ್ಥಳೀಯರು ಆಕ್ಷೇಪಿಸಿದಾಗ ಕಾರಿನಲ್ಲಿದ್ದವರು ಅನುಚಿತವಾಗಿ ವರ್ತಿಸಿ, ದರ್ಪ ತೋರಿದ್ದಾರೆ. ಸೇತುವೆಯಲ್ಲಿ ಸಾಗಿ ಬಹುದೂರ ಬಂದಿದ್ದ ಕಾರನ್ನು ಸ್ಥಳೀಯರು ತಡೆದು, ಬಂದ ದಾರಿಗೆ ಹಿಂದಕ್ಕೆ ಕಳುಹಿಸಿದ್ದಾರೆ. ಇದನ್ನೂ ಓದಿ: ಗುಜರಾತ್ ಸೇತುವೆ ಕುಸಿತ – ಇಂದು ಮೊರ್ಬಿಗೆ ಪ್ರಧಾನಿ ಮೋದಿ ಭೇಟಿ
Advertisement
Advertisement
ಕಾರು ಚಲಾಯಿಸಿ ಸೇತುವೆಗೆ ಹಾನಿಯಾಗಿ ಅಪಾಯವಾದರೆ ಯಾರು ಹೊಣೆಯಾಗುತ್ತಾರೆ ಎಂದು ಪ್ರವಾಸಿಗರನ್ನು ಸ್ಥಳೀಯರು ಪ್ರಶ್ನಿಸಿದ್ದಾರೆ. ಗುಜರಾತ್‍ನ ಮೊರ್ಬಿ (Gujrat Morbi) ಯಲ್ಲಿ ತೂಗುಸೇತುವೆ ಕುಸಿದು ನೂರಾರು ಜನ ಮೃತಪಟ್ಟ ಘಟನೆ ಮುಂದಿರುವಾಗಲೇ ಕೆಲವರು ಎಚ್ಚೆತ್ತುಕೊಳ್ಳದೇ ಇರುವುದು ದುರಂತವಾಗಿದೆ. ಪ್ರಸಿದ್ಧ ಯಾತ್ರಾಸ್ಥಳ ಜೊಯಿಡಾ ತಾಲೂಕಿನ ಉಳವಿಯಿಂದ ಬರುವ ಅನೇಕ ಮಂದಿ ಶಿವಪುರದ ತೂಗು ಸೇತುವೆಗೆ ಭೇಟಿ ನೀಡುತ್ತಾರೆ. ಅಲ್ಲಿನ ಪ್ರಾಕೃತಿಕ ಸೌಂದರ್ಯದ ಕಾರಣ ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿದೆ. ಹಲವು ಗ್ರಾಮಸ್ಥರಿಗೆ ಈ ತೂಗು ಸೇತುವೆ ದೈನಂದಿನ ಜೀವನದ ಅಗತ್ಯ ಸೌಕರ್ಯವಾಗಿದೆ.
Advertisement
Advertisement
ಪ್ರವಾಸ (Tourist) ಬಂದ ಕೆಲವರು ಸೇತುವೆಯ ಮೇಲೆ ಇಕ್ಕಟ್ಟಾದ ಜಾಗದಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಾರೆ. ಕಾರು ಬಂದಾಗ ಸೇತುವೆಯಲ್ಲಿ ನಡೆದುಕೊಂಡು ಹೋಗಲು ಕೂಡ ಜಾಗವಿರುವುದಿಲ್ಲ. ಇದೊಂದು ದುಃಸ್ಸಾಹಸ, ಕಾರನ್ನು ಅದರಲ್ಲಿ ತರಬೇಡಿ ಎಂದು ಗ್ರಾಮದ ಹಿರಿಯರು ಕಿವಿಮಾತು ಹೇಳಿದರೂ ಧಿಕ್ಕರಿಸುತ್ತಿದ್ದಾರೆ. ಅಂಥವರ ವಿರುದ್ಧ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸೇತುವೆಗೆ ಅಪಾಯವಾಗದಂತೆ ಕಾಪಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಸಹ ಪ್ರತಿಕ್ರಿಯಿಸಿದ್ದು, ಈ ರೀತಿಯಾಗಿ ಪ್ರವಾಸಿಗರು ನಡೆದುಕೊಳ್ಳುತ್ತಿರುವುದು ಸರಿಯಲ್ಲ.ಅವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ. ಜಿಲ್ಲೆಯಲ್ಲಿ ಹಲವು ತೂಗುಸೇತುವೆಗಳು ಸುಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಜಿಲ್ಲೆಯಲ್ಲಿರುವ ತೂಗುಸೇತುವೆಯ ಗುಣಮಟ್ಟವನ್ನು ಅಧ್ಯಯನಮಾಡಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಕಾರವಾರ, ಕಾರು, ತೂಗು ಸೇತುವೆ, karwar, car, bridge