ಚಿಕ್ಕಮಗಳೂರು: ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ವಾಹನವೊಂದು ಕಂದಕಕ್ಕೆ ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗುಡ್ಡೆತೋಟ ಎಂಬ ಗ್ರಾಮದ ಬಳಿ ನಡೆದಿದೆ. ದೇವರಮನೆ ಗುಡ್ಡ ಪ್ರವಾಸಿ ತಾಣದಿಂದ ಹಿಂದಿರುಗುವಾಗ ಈ ಅವಘಡ ಸಂಭವಿಸಿದೆ.
ಅದೃಷ್ಟಶಾತ್ ಕಾರಿನಲ್ಲಿದ್ದ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಮೂಲತಃ ಹಾಸನ ಜಿಲ್ಲೆಯದ್ದಾಗಿದ್ದು, ದೇವರಮನೆ ಗುಡ್ಡಕ್ಕೆ ಬಂದ ಪ್ರವಾಸಿಗರು ವಾಪಸ್ ಹೋಗುವಾಗ ಈ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದ ಪ್ರವಾಸಿಗರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ದೇವರಮನೆಗುಡ್ಡ ಗ್ರಾಮಕ್ಕೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿ ವಾರಕ್ಕೊಂದು ಅಪಘಾತ ಕಟ್ಟಿಟ್ಟ ಬುತ್ತಿ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಮಾರ್ಗದಲ್ಲಿ ಹೆಚ್ಚಾಗಿ ಅಪಘಾತವಾಗುವ ಜಾಗದಲ್ಲಿ ಕಂದಕಕ್ಕೆ ತಡೆಗೋಡೆ ನಿರ್ಮಿಸಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಆದರೆ, ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ತಾತನ ಕಷ್ಟಕ್ಕೆ ಮರುಗಿ ಎತ್ತುಗಳಾದ ಮೊಮ್ಮಕಳು – ತಾತನಿಗೆ ನೆರವಾದ ಜ್ಯೋತಿಷಿ ಕಮಲಾಕರ್ ಭಟ್
Advertisement
ಸರ್ಕಾರ ಇಲ್ಲಿ ನಡೆಯುವ ಅಪಘಾತಕ್ಕೆ ಶಾಶ್ವತ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ತಿರುವು ರಸ್ತೆ ಇದ್ದು ಸೂಚನಾಫಲಕ ಅಥವಾ ತಡೆಗೋಡೆ ಇಲ್ಲದಿರುವುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.