ಕಾರವಾರ: ಎರಡು ದಿನ ನಿರಂತರ ರಜೆ ಬಂತು ಎಂದರೆ ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಕ್ಷೇತ್ರಕ್ಕೆ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಬಹುತೇಕ ಪ್ರವಾಸಿಗರು ಹಣಕಾಸಿನ ವ್ಯವಹಾರವನ್ನು ಆನ್‍ಲೈನ್‍ಗಿಂತ ಹೆಚ್ಚು ಎಟಿಎಂಗಳನ್ನು ಬಳಸುತ್ತಾರೆ. ಆದರೆ ಇಂತಹ ಮುಖ್ಯ ದಿನಗಳಲ್ಲಿ ಎಟಿಎಂ ಕೇಂದ್ರಗಳು ಹಣವಿಲ್ಲದೆ ಮುಚ್ಚುತ್ತಿದ್ದು, ಇದರಿಂದ ಪ್ರವಾಸಿಗರು ಪರದಾಡುವಂತಾಗಿದೆ.
ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರನ್ನು ವಿಚಾರಿಸಿದರೆ ತಮಗೆ ಇಂತಿಷ್ಟು ನಗದು ಮಿತಿ ಇರುತ್ತದೆ ಅದರಂತೆ ಹಣ ಭರ್ತಿ ಮಾಡುತ್ತಿದ್ದು, ಬ್ಯಾಂಕ್ ರಜಾ ಅವಧಿಯಲ್ಲಿ ಹಣ ಖಾಲಿಯಾದರೆ ಏನು ಮಾಡುವಂತಿಲ್ಲ ಎಂದು ಉತ್ತರಿಸುತ್ತಾರೆ. ಆದರೆ ದಿನದ ಎಲ್ಲಾ ವೇಳೆಯಲ್ಲೂ ಗ್ರಾಹಕರಿಗೆ ಸೇವೆ ನೀಡಲು ಇರುವ ಕೇಂದ್ರಗಳು ಈ ರೀತಿ ಬಂದ್ ಆಗಿದ್ದರೆ ಹೇಗೆ ಎಂದು ಗ್ರಾಹಕರು ಮಾತನಾಡಿಕೊಳ್ಳುತ್ತಿದ್ದಾರೆ.
Advertisement
Advertisement
ಕಳೆದ ನಾಲ್ಕು ದಿನದಿಂದ ಇಂದಿನವರೆಗೂ ಗೋಕರ್ಣ ಭಾಗದಲ್ಲಿನ ಎಟಿಎಂಗಳಲ್ಲಿ ಹಣ ಹಾಕದೇ ಖಾಲಿ ಆಗಿತ್ತು. ಕೆಲವು ಎಟಿಎಂಗಳು ವಾರ ಕಳೆದಿದ್ದರೂ ಹಣ ತುಂಬಿಸಿಲ್ಲ. ಇಂದು ಕೂಡ ಗೋಕರ್ಣಕ್ಕೆ ಆಗಮಿಸಿದ ಹಲವು ವಿದೇಶಿ ಪ್ರವಾಸಿಗರು ಹಣಕ್ಕಾಗಿ ಪರದಾಡಿದ ದೃಶ್ಯ ಕಂಡು ಬಂತು. ಒಟ್ಟು ನಾಲ್ಕು ಎಟಿಎಂ ಕೇಂದ್ರಗಳಿದ್ದು, ಎಲ್ಲಾ ಕೇಂದ್ರಗಳು ಖಾಲಿಯಾಗಿದೆ. ಎಲ್ಲಾ ಕೇಂದ್ರಗಳಿಗೂ ವಿದೇಶಿ ಪ್ರವಾಸಿಗರು ತೆರಳಿ ಹಣ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ ಎಲ್ಲೂ ಹಣ ಸಿಗದೆ ಪರದಾಡಿದ್ದಾರೆ. ಕೊನೆಯಲ್ಲಿ ಎಸ್‍ಬಿಐ ಎಟಿಎಂ ಮುಂದೆ ನಿಂತ ವಿದೇಶಿ ಮಹಿಳೆ ಹಣ ಪಡೆಯಲು ಬಂದ ಗ್ರಾಹಕರಿಗೆ ಹಣವಿಲ್ಲ ಎಂದು ತಿಳಿಸುತ್ತಾ, ತನಗಾದ ತೊಂದರೆಯನ್ನು ಸ್ವದೇಶಿ ಪ್ರವಾಸಿಗರಿಗೆ ವಿವರಿಸಿದ್ದಾಳೆ.
Advertisement
Advertisement
ಬ್ಯಾಂಕ್ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ಪ್ರವಾಸಿ ಕ್ಷೇತ್ರದಲ್ಲಿ ಬ್ಯಾಂಕ್ ರಜಾ ಅವಧಿಯಲ್ಲಿ ಅಧಿಕ ಪ್ರವಾಸಿಗರು ಬರುತ್ತಿದ್ದಾರೆ. ಇವರಿಗೆ ಅನುಕೂಲಕ್ಕಾಗಿಯೇ ಉಳಿದ ಇಲಾಖೆಯಂತೆ ರಜಾ ಅವಧಿಯಲ್ಲಿ ಎಟಿಎಂಗಳಲ್ಲಿ ಹಣ ಇರುವಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಲ್ಲದೆ ಎಟಿಎಂ ಮೂಲಕ ಹಣ ತೆಗೆಯುವುದಕ್ಕೆ ಹಾಗೂ ನಿರ್ವಹಣೆಗೆ ಎಂದು ಗ್ರಾಹಕರಿಂದ ಹಣ ಪಡೆಯುವ ಬ್ಯಾಂಕ್ ಸೇವೆ ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಖಾಸಗಿ ವ್ಯಕ್ತಿಗಳು ಸ್ವೈಪಿಂಗ್ ಮಷಿನ್ ಹೊಂದಿದ್ದು, ಗ್ರಾಹಕರ ಪರದಾಡುವ ಸಮಯವನ್ನೇ ಬಂಡವಾಳ ಮಾಡಿಕೊಂಡು ಹಣ ನೀಡಿ ಅವರಿಂದ ಕಮಿಷನ್ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇಲ್ಲೆನಾದರೂ ಬ್ಯಾಂಕ್ ಅಧಿಕಾರಿಗಳು ಶಾಮಿಲಾಗಿದ್ದಾರೆಯೇ ಎಂಬ ಸಂದೇಹದ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ.