Connect with us

Bengaluru City

ಕೆಲವರಿಗೆ ತುಳಿಯುವ ಚಟ, ನಮಗೆ ಬೆಳೆಯುವ ಹಠ – ಸಿ.ಟಿ.ರವಿ

Published

on

ಬೆಂಗಳೂರು: ಕೆಲವರಿಗೆ ನಮ್ಮನ್ನು ತುಳಿಯುವ ಚಟ, ಆದರೆ ನಮಗೆ ಅವರ ಮುಂದೆ ಬೆಳೆಯುವ ಹಠ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.

ಇಂದು ಸಂಜೆ 3.51ರ ವೇಳೆಗೆ ರವಿ ಅವರು, ಕೆಲವರಿಗೆ ನಮ್ಮನ್ನು ತುಳಿಯುವ ಚಟ, ಆದರೆ ನಮಗೆ ಅವರ ಮುಂದೆ ಬೆಳೆಯುವ ಹಠ ಎಂದು ಬರೆದು ನಂತರ ಇದು ವಾಟ್ಸಪ್ ನಲ್ಲಿ ಬಂದ ಸಂದೇಶ ಎಂದು ಬರೆದುಕೊಂಡಿದ್ದಾರೆ.

ರವಿ ಅವರ ಟ್ವೀಟ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾರು ಯಾರನ್ನು ತುಳಿಯಲು ಆಗುವುದಿಲ್ಲ. ಅತಿಯಾಗಿ ಬೆಳೆಸಲು ಆಗುವುದಿಲ್ಲ. ನಿಮ್ಮ ಕಾರ್ಯ ನಿಷ್ಠೆ, ನಿಮ್ಮ ಪ್ರಾಮಾಣಿಕತೆ, ಹಾಗೂ ನಿಮ್ಮ ಸ್ವಾಮಿ ನಿಷ್ಠೆ ಯಾವತ್ತೂ ಕಾಪಾಡಿಯೇ ಕಾಪಾಡುತ್ತೆ. ಹಠ ಎಲ್ಲ ಬಿಟ್ಟು ಜನರ ಜೊತೆ ಬೆರೆತು ಅಭಿವೃದ್ಧಿಯ ಕಡೆ ನಿಮ್ಮ ಹೆಚ್ಚಿನ ಗಮನ ಕೊಡಿ ಸರ್ ಎಂದು ಕೆಲವರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಅಣ್ಣಾ ಹಾಗಾದ್ರೆ ನಿಮ್ಮನ್ನು ತುಳಿಯುವವರು ನಿಮ್ಮಲ್ಲೇ ಇದ್ದಾರೆ ಅಲ್ವೇ. ಪಾಪ ನಿಮಗೆ ಹೀಗಾಗಬಾರದಿತ್ತು, ಸೋತವ ಮಂತ್ರಿಯಾದ ಗೆದ್ದವ ಚೆಂಬು ಹಿಡ್ಕಂಡ ಎಂದು ಕೆಲವರು ಪ್ರತಿಕ್ರಿಯಿಸಿದರೆ ಮತ್ತೊಬ್ಬರು ಟ್ವಿಟ್ಟರಿನಲ್ಲಿ ವಾಟ್ಸಪ್ ಮೆಸೇಜ್ ಫಾರ್ವರ್ಡ್ ಮೆಸೇಜ್ ಹಾಕುವ ಬದಲು ಪ್ರವಾಸೋದ್ಯಮದ ಬಗ್ಗೆ ಮಾಹಿತಿ ಕೊಟ್ಟಿದ್ದರೆ ಚೆನ್ನಾಗಿರುತಿತ್ತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಸಂಘದ ಕಾರ್ಯಕರ್ತ ಅಧಿಕಾರಕ್ಕೆ ಆಸೆ ಪಡಬಾರದು, ಅಧಿಕಾರ ಬೇಕಾದರೆ ಸಂಘದಲ್ಲಿ ಇರಬಾರದು ಎಂದು ಹಾಗೂ ಇಂತಹ ಮೆಸೇಜ್‍ಗಳು ನಿಮ್ಮ ಘನತೆಗೆ ಧಕ್ಕೆ ತರುತ್ತವೆ. ಇಂತಹ ಮೆಸೇಜ್‍ಗಳನ್ನು ಪೋಸ್ಟ್ ಮಾಡಬೇಡಿ, ನಿಮಗೆ ಒಳ್ಳೆಯ ಖಾತೆಯನ್ನು ನೀಡಲಾಗಿದೆ. ದಯವಿಟ್ಟು ಇದನ್ನು ಸರಿಯಾಗಿ ನಿರ್ವಹಿಸಿ, ಈ ಸಂದೇಶವು ನಿಮ್ಮ ಆಂತರಿಕ ಬಿರುಕನ್ನು ಎತ್ತಿ ತೋರಿಸುತ್ತದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇದೇ ತರ ಪಕ್ಷ ವಿರೋಧ ಮಾಡುತ್ತಿದ್ದರೆ, ನಿಮಗೂ ಗೇಟ್ ಪಾಸ್ ಕೊಡುತ್ತಾರೆ ಹುಷಾರ್, ನಮಗೆ ನಮಗೆ ಪಕ್ಷ ಮುಖ್ಯವೇ ಹೊರತು ವ್ಯಕ್ತಿಯಲ್ಲ ಎಂದು ಇನ್ನೂ ಕೆಲವರು ಟೀಕಿಸಿದ್ದಾರೆ. ಮೋದಿಯವರ ಕನಸು ಭಾರತವನ್ನು ಅತ್ಯುನ್ನತ್ತ ಪ್ರವಾಸಿ ತಾಣ ಮಾಡಬೇಕು ಎನ್ನುವುದು, ಅದಕ್ಕೆ ಹೆಗಲು ಕೊಟ್ಟು ದುಡೀತೀರಾ ಅಂತ ನಂಬಿಕೆ ಇದೆ ಗುಡ್ ಲಕ್. ತುಳಿಯೋರು ಎಷ್ಟು ಅಂತ ತುಳೀತಾರೆ, ಒಂದ್ ದಿನ ಕೊಚ್ಚಿಕೊಂಡು ಹೋಗ್ತಾರೆ ತಲೆ ಕೆಡಿಸ್ಕೊಬೇಡಿ ಎಂದು ಪ್ರತಿಕ್ರಿಯಿಸಿದ್ದಾರೆ.

ಇರಲಿ ಸರ್, ಹೊರಗಿನ ಮಾತುಗಳ ಬಗ್ಗೆ ತಲೆಗೆ ಹಚ್ಚಿಕೊಳ್ಳಬೇಡಿ, ಜನರಿಗೆ ಏನು ಬೇಕು ಅದರ ಬಗ್ಗೆ ಚಿಂತನೆ ಮಾಡಿ ಎಂದು ಇನ್ನು ಕೆಲವರು ಕಮೆಂಟ್ ಮಾಡಿದ್ದಾರೆ. ಒಟ್ಟೆರೆಯಾಗಿ ಕೆಲವರು ಸಿ.ಟಿ.ರವಿ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಇನ್ನೂ ಕೆಲವರು ಒಳ್ಳೆಯ ಖಾತೆ ಸಿಕ್ಕಿದೆ ಕೆಲಸ ಮಾಡಿ ಎಂದು ಧೈರ್ಯ ತುಂಬಿದ್ದಾರೆ.

ಉನ್ನತ ಶಿಕ್ಷಣ ಖಾತೆಯ ನಿರೀಕ್ಷೆಯಲ್ಲಿದ್ದ ಸಿ.ಟಿ.ರವಿ ಅವರಿಗೆ ಪ್ರವಾಸೋದ್ಯಮ ಖಾತೆ ನೀಡಲಾಗಿದ್ದು, ಖಾತೆ ಹಂಚಿಕೆ ನಂತರ ಸಿ.ಟಿ.ರವಿ ಅವರು ಅಸಮಾಧಾನಗೊಂಡು ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಹಬ್ಬಿತ್ತು. ನಂತರ ಸಿ.ಟಿ.ರವಿ ಅವರೇ ಸರಣಿ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದರು.

ನಾನು ಯಾರ ಮುಂದೆಯೂ ಮಂತ್ರಿಸ್ಥಾನವನ್ನೇ ಕೇಳಿರಲಿಲ್ಲ. ಇನ್ನು ಖಾತೆಯ ಬಗ್ಗೆ ಯಾಕೆ ಕೇಳಲಿ? ನನ್ನ ಕಡೆ ಸಂಶಯದ ಬೆಟ್ಟು ತೋರಿಸುವವರೇ, ನಾನು ಎಂದೂ ಅವಕಾಶವಾದ ರಾಜಕಾರಣ ಮಾಡಿಲ್ಲ ಮತ್ತು ಅಧಿಕಾರದಲ್ಲಿ ಇರುವವರನ್ನು ಓಲೈಸಿಕೊಂಡು ಲಾಭಗಳಿಸುವ ರಾಜಕಾರಣವನ್ನು ಮಾಡಿಲ್ಲ. ನಾನು ಅಸಾಮಾಧಾನಿತನು ಅಲ್ಲ ಬಂಡಾಯಗಾರನೂ ಅಲ್ಲ. ನನ್ನ ನಿಷ್ಠೆ ಕೇವಲ ಬಿಜೆಪಿಗೆ. ಆದರೆ ನಾನು ಸಿದ್ದಾಂತ ನಿಷ್ಠ ಸ್ವಾಭಿಮಾನಿ. ಸ್ವಾಭಿಮಾನಕ್ಕೆ ಧಕ್ಕೆ ಆದಾಗ ನನ್ನೊಳಗಿನ ಹೋರಾಟಗಾರ ಎದ್ದು ನಿಲ್ಲುತ್ತಾನೆ. ನಾನೇನು ಮಾಡಲಿ, ನಾನು ಜನರ ನಡುವಿನಿಂದ ಬೆಳೆದು ಬಂದ ಹೋರಾಟಗಾರ ಎಂದು ತಿಳಿಸಿದ್ದರು.

Click to comment

Leave a Reply

Your email address will not be published. Required fields are marked *