ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರು ಪ್ರಶ್ನಾತೀತ ನಾಯಕರು ಎಂದು ಅಂದುಕೊಂಡಿದ್ದೆ. ಆದರೆ ಅವರ ಪಕ್ಷದಲ್ಲಿ ಇನ್ನೂ ವಿರೋಧ ಪಕ್ಷದ ನಾಯಕರನ್ನ ನೇಮಕ ಮಾಡಿಲ್ಲ. ಸಿದ್ದರಾಮಯ್ಯ ಅವರ ಕಾಲು ಎಳೆಯೋ ಕೆಲಸ ಅವರ ಪಕ್ಷದಲ್ಲೇ ನಡೆಯುತ್ತಿದ್ದು, ಅವರು ಕಾಲು ಜಾರದೆ ಎಚ್ಚರದಿಂದ ಇರಲಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಧ್ಯಂತರ ಚುನಾವಣೆ ಬರುತ್ತೆ ಎಂಬ ಮಾಜಿ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರು ಮೂಢನಂಬಿಕೆ ನಿಷೇಧ ಮಸೂದೆ ತರುವುದಕ್ಕೆ ಹೊರಟಿದ್ದರು. ಅವರು ಭವಿಷ್ಯ ಹೇಳೋದನ್ನ ಯಾವತ್ತಿಂದ ಶುರುಮಾಡಿದ್ದಾರೋ ಗೊತ್ತಿಲ್ಲ. ನಮ್ಮ ಸರ್ಕಾರ ಇನ್ನೂ ಮೂರು ವರ್ಷ 9 ತಿಂಗಳು ಇರುತ್ತದೆ. ದೀರ್ಘಾವಧಿಯ ಯೋಜನೆಗಳನ್ನ ಜಾರಿಗೆ ತರುತ್ತೇವೆ. ಆ ಬಗ್ಗೆ ಅನುಮಾನ ಬೇಡ ಎಂದು ಭರವಸೆ ನೀಡಿದರು.
Advertisement
Advertisement
ಸರ್ಕಾರ ಟೇಕಾಫ್ ಆಗಿಲ್ಲ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಉತ್ತರಿಸಿದ ಸಚಿವರು, ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಲ್ಲಿ ಪ್ರಶ್ನಾತೀತ ನಾಯಕ ಅಂದುಕೊಂಡಿದ್ದೆವು. ಅವರಲ್ಲಿ ಇನ್ನೂ ಪ್ರತಿಪಕ್ಷ ನಾಯಕ ಯಾರೆಂದು ನಿರ್ಧಾರ ಆಗಿಲ್ಲ. ಕಾಂಗ್ರೆಸ್ಸಿನಲ್ಲೇ ಸಿದ್ದರಾಮಯ್ಯ ಅವರ ಕಾಲೆಳೆಯೋರು ಜಾಸ್ತಿಯಾಗಿದ್ದಾರೆ. ಸಿದ್ದರಾಮಯ್ಯ ಮೊದಲು ತಮ್ಮ ಕಾಲು ಯಾರೂ ಎಳೆಯದಂತೆ ನೋಡಿಕೊಳ್ಳಲಿ. ನಮ್ಮ ಸರ್ಕಾರ ಟೇಕಾಫ್ ಆಗಿದೆ. ನಮ್ಮ ಸರ್ಕಾರ ಕಾರ್ಯಾರಂಭ ಮಾಡಿ ತಿಂಗಳಾಗಿದೆ ಎಂದು ತಿರುಗೇಟು ನಿಡಿದೆ.
Advertisement
ಇದೇ ವೇಳೆ ಚಿಕ್ಕಮಗಳೂರಿನಲ್ಲಿ ಸಿಎಂ ಕಾಟಾಚಾರದ ಪರಿಶೀಲನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಂಗಳವಾರ ಸಿಎಂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದಾರೆ. ಕಾಟಾಚಾರದ ಭೇಟಿ ಎನ್ನುವುದು ಸುಳ್ಳು. ವಾತಾವರಣದ ಕಾರಣ ಹೆಲಿಕಾಪ್ಟರ್ ಲ್ಯಾಂಡ್ ಆಗಲು ವಿಳಂಬವಾಯಿತು ಎಂದರು.
Advertisement
ಮೂಡಿಗೆರೆ ತಾಲೂಕಿನ ಮನೆಮಲೆ ಗ್ರಾಮದ ಸ್ಥಿತಿ ನೋಡಿದ್ದಾರೆ. ಅನ್ನ ಬೆಂದಿದೆಯೋ ಎಂದು ತಿಳಿಯಲು ಎಲ್ಲ ಅಕ್ಕಿಯನ್ನು ಮುಟ್ಟಿ ನೋಡಬೇಕಿಲ್ಲ. ಇನ್ನೂ ನಾಲ್ಕೈದು ಗ್ರಾಮಕ್ಕೆ ಹೋಗಬೇಕಿತ್ತು. ಆದರೆ ಸಮಯದ ಅಭಾವದಿಂದ ಹೋಗಲು ಆಗಿಲ್ಲ. ಇನ್ನುಳಿದ ಪ್ರವಾಹ ಪೀಡಿತ ಪ್ರದೇಶದ ವಿಡಿಯೋ ತೋರಿಸುತ್ತೇವೆ. ಶುಕ್ರವಾರ ಚಿಕ್ಕಮಗಳೂರು ಜಿಲ್ಲೆಯ ಸಭೆ ನಡೆಯಲಿದೆ ಎಂದುಸಚಿವ ಸಿ ಟಿ ರವಿ ಸ್ಪಷ್ಟನೆ ನೀಡಿದರು.