ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮ ಮೂಲಕ ಉದ್ಯೋಗ ಸೃಷ್ಟಿ ಮಾಡಲು ವಿಫುಲವಾದ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಪ್ರವಾಸೋದ್ಯಮ ವ್ಯವಸ್ಥೆಯಲ್ಲಿ ಕೆಲವು ಅಂಶಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಅನೇಕ ಪ್ರವಾಸಿ ಸ್ಥಳಗಳಿಗಲ್ಲಿ ಪ್ರವಾಸಿಗರಿಗೆ ಸ್ಥಳದ ವಿವರಣೆಯನ್ನು ನೀಡುವ ಮಾರ್ಗದರ್ಶಿಗಳು ಇರುವುದಿಲ್ಲ. ಕೆಲೆವೆಡೆ ಇರುವ ಪ್ರವಾಸಿ ಮಾರ್ಗದರ್ಶಿಗಳು ಕನ್ನಡ ಹೊರತುಪಡಿಸಿ ಇತರೆ ಭಾರತೀಯ ಭಾಷೆಗಳಲ್ಲಿ ಪ್ರವಾಸಿ ಸ್ಥಳಗಳ ಬಗ್ಗೆ ವಿವರಿಸುವ ಸಾಮಥ್ರ್ಯ ಹೊಂದಿರುವುದಿಲ್ಲ. ವಿದೇಶಿ ಪ್ರವಾಸಿಗಳಿಗೆ ಅವರ ಭಾಷೆಯಲ್ಲಿ ವಿವರಗಳನ್ನು ತಿಳಿಸಲು ಆಯಾ ಭಾಷೆಗಳಲ್ಲಿ ಪಾಂಡಿತ್ಯವಿರುವ ಮಾರ್ಗದರ್ಶಿಗಳು ಲಭ್ಯವಿಲ್ಲ. ಅನೇಕ ಪ್ರವಾಸಿ ಸ್ಥಳಗಳಲ್ಲಿ ಸಂಜೆಯಾದ ನಂತರ ನೋಡುವಂತಹ ಹಾಗೂ ನಮ್ಮ ಸ್ಕೃತಿ ಸಂಸ್ಕೃತಿಯನ್ನು ಬಿಂಬಿಸುವಂತಹ ಯಾವುದೇ ಸಾಂಸ್ಕೃತಿಕ ಪ್ರದರ್ಶನಗಳು ಸಹ ಇರುವುದಿಲ್ಲ. ರಾಜ್ಯದ ಹಲವಾರು ಪ್ರವಾಸಿ ತಾಣಗಳಲ್ಲಿ ಮತ್ತಷ್ಟು ಉತ್ತಮ ಗುಣಮಟ್ಟದ ಹೊಟೇಲ್ ಒದಗಿಸುವ ಅವಕಾಶವಿದೆ ಎಂದು ಭಾಷಣದಲ್ಲಿ ತಿಳಿಸಿದರು.
Advertisement
Advertisement
ನಮ್ಮ ಸರ್ಕಾರವು ಈ ವರ್ಷ ಬೇಲೂರು, ಹಂಪಿ ಮತ್ತು ವಿಜಯಪುರದಲ್ಲಿ ವಿವಿಧ ಭಾಷೆಗಳಲ್ಲಿ ಪ್ರವಾಸಿ ಮಾರ್ಗದರ್ಶಿಗಳಾಗಿ ಕೆಲಸ ಮಾಡಲು ಮುಂದೆ ಬರುವ ಯುವಕ-ಯುವತಿಯರಿಗೆ ತರಬೇತಿ ನೀಡಲು ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಕ್ರಮ ಕೈಗೊಳ್ಳಲಿದೆ. ಎರಡು ವರ್ಷದ ಡಿಪ್ಲೆಮೋ ತರಬೇತಿ ನೀಡಲು ಈ ಮೂರು ಸ್ಥಳಗಳಲ್ಲಿ ಮುಂದೆ ಬರುವ ಖಾಸಗಿ ತರಬೇತಿ ಸಂಸ್ಥೆಗಳಿಗೆ ತಲಾ 60 ಲಕ್ಷ ರೂಪಾಯಿಗಳನ್ನು ಷೇರು ಬಂಡಾವಾಳದ ರೂಪದಲ್ಲಿ ನೀಡಲಾಗುವುದು.
Advertisement
ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟಂತಹ ವಿಷಯಗಳಲ್ಲಿ ಎರಡು ವರ್ಷಗಳ ಡಿಪ್ಲೊಮಾವನ್ನು ಆರಂಭಿಸಲು ಉದ್ದೇಶಿಸಿದೆ. ಈ ಮೇಲೆ ಹೇಳಿದ ಮೂರು ಪ್ರವಾಸಿ ಕೇಂದ್ರಗಳಲ್ಲಿ ಪರಿಸರ ಹಾಗೂ ಆಹಾರದ ಶುದ್ಧತೆಯನ್ನು ಕಾಪಾಡುವ ಸಲುವಾಗಿ ಅಗತ್ಯ ಸರ್ಕಾರಿ ಸ್ಥಳೀಯ ಸಂಸ್ಥೆಗಳಿಗೆ ನೆರವಾಗಲು 20 ಕೋಟಿ ರೂಪಾಯಿಗಳನ್ನು ನಿಗಧಿಪಡಿಸಲಾಗಿದೆ.
Advertisement
500 ಕೊಠಡಿಗಳ ಸೌಲಭ್ಯವಿರುವ `3 ಸ್ಟಾರ್ ಹೋಟೆಲ್’ಗಳನ್ನು ತೆರೆಯಲು ಮುಂದೆ ಬರುವ ಖಾಸಗಿ ಕಂಪನಿಗಳಿಗೆ 3 ಕೋಟಿ ರೂಪಾಯಿಗಳ ಷೇರು ಬಂಡವಾಳವನ್ನು ಕೊಡಲಾಗುವುದು. ಸರ್ವಿಸ್ ಅಪಾರ್ಟ್‍ಮೆಂಟ್ ಗಳನ್ನು ಕಟ್ಟಲು ಮುಂದೆ ಬಂದಲ್ಲಿ ಆ ಸಂಸ್ಥೆಗಳಿಗೆ ಶೇ.30ರಷ್ಟು ಷೇರು ಬಂಡವಾಳವನ್ನು ಟೆರ್ಮ್ ಶೀಟ್ ಆಧಾರದ ಮೇಲೆ ನೀಡಲಾಗುವುದು.
`ಅಮ್ಯೂಸ್‍ಮೆಂಟ್ ಪಾರ್ಕ್’, `ಜಲಕ್ರೀಡೆ’ ರೀತಿಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ಕಂಪನಿಗಳಿಗೆ ಶೇ. 30ರಷ್ಟು ಷೇರು ಬಂಡವಾಳ ಹೂಡಲಾಗುವುದು. ಪ್ರವಾಸಿ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಈ ವರ್ಷ 80 ಕೋಟಿ ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಎಲ್ಲಾ ಹೂಡಿಕೆಗಳನ್ನು 4 ವರ್ಷದ ನಂತರ ಹಿಂತೆಗೆದುಕೊಂಡು ಮತ್ತೆ ಸರ್ಕಾರಕ್ಕೆ ಜಮಾ ಮಾಡಲಾಗುತ್ತದೆ.
ಈ ಪ್ರದೇಶದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಹೂಡಿಕೆ ಮಾಡಲು ಮುಂದರೆ ಬರುವ ಉದ್ದಿಮೆದಾರರು ಸ್ಥಳೀಯ ಕಾನೂನುಗಳು ಹಾಗೂ ಎಲ್ಲಾ ಪ್ರಾಧಿಕಾರಿಗಳ ಅನುಮೋದನೆ ಪಡೆಯುವುದು ಅವಶ್ಯಕ. ಕರ್ನಾಟಕ ಸರ್ಕಾರವು ಈಗಾಗಲೇ (KITVEN) ಫಂಡ್ ಮ್ಯಾನೇಜರ್ ಗಳನ್ನು ಹೂಡಿಕೆಗೆ ನೆರವು ನೀಡಲು ನೇಮಕಾತಿ ಮಾಡಿರುವುದರಿಂದ ಅವುಗಳನ್ನು ಹೂಡಿಕೆದಾರರು ಉಪಯೋಗಿಸಿಕೊಳ್ಳಬಹುದು. ಹಾಗೆಯೇ ಕೆ.ಎಸ್.ಟಿ.ಡಿ.ಸಿ. ಸಂಸ್ಥೆಗೆ ಹೋಟೆಲ್ ಸೌಲಭ್ಯ ಕಲ್ಪಿಸಲು 80 ಕೋಟಿ ರೂಪಾಯಿ ನೀಡಲು ಆಯೋಜಿಸಿದೆ.
ಪ್ರಮುಖ ಹೆದ್ದಾರಿಗಳಲ್ಲಿ ಪ್ರವಾಸಿಗರು ವಿಶ್ರಾಂತಿ ಪಡೆದು ಊಟ ತಿಂಡಿ ಮಾಡಿಕೊಂಡು ಪ್ರಯಾಣ ಮುಂದುವರೆಸಲು ಅನುಕೂಲವಾಗುವ ರೀತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಮೂರು ಮಾದರಿ ರಸ್ತೆ ಬದಿ ಸೌಲಭ್ಯಗಳನ್ನು (Model way side facilities) ನಿರ್ಮಿಸಲು ಉದ್ದೇಶಿದೆ.
ಪ್ರವಾಸೋದ್ಯಮ ವಲಯದ ಆತಿಥ್ಯ ಕ್ಷೇತ್ರದಲ್ಲಿ ಉದ್ಯೋಗವಕಾಶಗಳನ್ನು ಸೃಜಿಸಲು ಕೌಶಲ್ಯಾಭಿವೃದ್ಧಿ, ಪ್ರವಾಸಿ ಮಾರ್ಗದರ್ಶಿ ತರಬೇತಿ ಕಾರ್ಯಕ್ರಮ ಹಾಗೂ ಪ್ರವಾಸಿ ಟ್ಯಾಕ್ಸಿ ಚಾಲಕರಿಗೆ `ರಿಫ್ರೆಷರ್ ಕೋರ್ಸ್’ಗಳ ಮೂಲಕ ತರಬೇತಿ ನೀಡಲು ಉದ್ದೇಶಿಸಿದೆ.
ಚಾಮರಾಜನಗರ ಜಿಲ್ಲೆಯಲ್ಲಿರುವ ಭರಚುಕ್ಕಿ ಜಲಪಾತ ಮತ್ತು ಮಂಡ್ಯ ಜಿಲ್ಲೆಯಲ್ಲಿರುವ ಗಗನಚುಕ್ಕಿ ಜಲಪಾತಗಳು ಪ್ರವಾಸಿಗರ ಆಕರ್ಷಣೀಯ ತಾಣಗಳಾಗಿರುತ್ತವೆ. ಈ ತಾಣಗಳಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವರು. ಆದ್ದರಿಂದ ಪ್ರವಾಸಿಗರಿಗೆ ಅನುಕೂಲವಾಗುವ ಹೆಚ್ಚುವರಿ ಪ್ರವಾಸಿ ಸೌಲಭ್ಯಗಳನ್ನು ಗಗನಚುಕ್ಕಿ ಮತ್ತು ಭರಚುಕ್ಕಿ ಪ್ರದೇಶಗಳಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲು ಯೋಜನೆ ಸಿದ್ದಪಡಿಸಿದೆ.
ರಾಮನಗರ ಜಿಲ್ಲೆಯಲ್ಲಿ ಪ್ರವಾಸಿ ಚಟುವಟಿಕೆಗಳನ್ನು ಮತ್ತಷ್ಟು ಸಧೃಢಗೊಳಿಸಲು ರಾಮನಗರದ ಬಳಿ `ಆಟ್ಸ್ ಅಂಡ್ ಕ್ರಾಫ್ಟ್ ವಿಲೇಜ್’ ಅನ್ನು ಮತ್ತು ಕಣ್ವ ಜಲಾಶಯದ ಪ್ರದೇಶದಲ್ಲಿ `ಚಿಲ್ಡ್ರನ್ಸ್ ವಲ್ರ್ಡ್’ ಯೋಜನೆಯನ್ನು ಖಾಸಗೀ ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸಲು ಉದ್ದೇಶೀಸಲಾಗಿದೆ.