ಉಡುಪಿ: ಬಸ್ಸಿನಲ್ಲಿ ಅಂತ್ಯಾಕ್ಷರಿ ಹಾಡುತ್ತಾ ನಾವು ಖುಷಿಖುಷಿಯಾಗಿ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದೆವು. ಗಲಾಟೆ ತಾರಕಕ್ಕೇರಿದಾಗ ಚಾಲಕನ ಗಮನ ಬೇರೆಡೆಗೆ ಹೋಗಿದ್ದರಿಂದ ಅಪಘಾತ ಸಂಭವಿಸಿರಬಹುದು ಎಂದು ಗಾಯಾಳುಗಳು ತಿಳಿಸಿದ್ದಾರೆ.
ಜಿಲ್ಲೆಯ ಕಾರ್ಕಳ ತಾಲೂಕಿನ ಎಸ್.ಕೆ ಬಾರ್ಡರ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಮೈಸೂರಿನಿಂದ ಪ್ರವಾಸ ಬಂದಿದ್ದ ಒಂಬತ್ತು ಮಂದಿ ಅಪಘಾತದಲ್ಲಿ ಅಸುನೀಗಿದ್ದಾರೆ. 25 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರನ್ನು ಅನಜ್ಞಾ, ರಂಜಿತಾ ಪಿ, ಯೋಗೇಂದ್ರ, ರಾಧಾ ರವಿ, ವಿನುತಾ, ಪ್ರೀತಂ ಗೌಡ, ಅಡುಗೆ ಸಹಾಯಕ ಬಸವರಾಜ್, ಬಸ್ ಚಾಲಕ ಮಾರುತಿ ಎಂದು ಗುರುತಿಸಲಾಗಿದೆ.
Advertisement
Advertisement
ಕರಾವಳಿ ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಭೀಕರ ಅಪಘಾತವಿದು. ನಂಜನಗೂಡಿನ ವೈಟಲ್ ರೆಕಾರ್ಡ್ ಕಂಪನಿಯಲ್ಲಿ ಡಾಟಾ ಎಂಟ್ರಿ ಕೆಲಸ ಮಾಡುತ್ತಿದ್ದ ಯುವಕರ ತಂಡವಿದು. ಪ್ರವಾಸದ ಸಂತೋಷದಲ್ಲಿದ್ದ ನಮಗೆ ಈ ಅಪಘಾತ ಬರಸಿಡಿಲಿನಂತೆ ಹೊಡೆದಿದೆ. ಬಸ್ಸಿನಲ್ಲಿ ಮೋಜು-ಮಸ್ತಿ ಮಾಡಿಕೊಂಡು ಅಂತ್ಯಾಕ್ಷರಿ ಹಾಡುತ್ತಾ ನಾವು ಖುಷಿಖುಷಿಯಾಗಿ ಬರುತ್ತಿದ್ದೆವು. ಗೌಜು ಗಲಾಟೆ ತಾರಕಕ್ಕೇರಿದಾಗ ಚಾಲಕನ ಗಮನ ಬೇರೆಡೆಗೆ ಹೋಗಿದೆ. ಇದರಿಂದ ಅಪಘಾತ ಸಂಭವಿಸಿದೆ ಎಂದು ಗಾಯಾಳು ದೀಪಿಕಾ ಮತ್ತು ದಿವ್ಯಶ್ರೀ ತಿಳಿಸಿದ್ದಾರೆ.
Advertisement
Advertisement
ಮೃತರು ಮೈಸೂರಿನ ನಂಜನಗೂಡು ಸಮೀಪದ ಸೆಂಚುರಿ ವೈಟಲ್ ರೆಕಾರ್ಡ್ಸ್ ಕಂಪನಿಯ ನೌಕರರು. ಈ ಕಂಪನಿಯಲ್ಲಿ ದುಡಿಯುವ ನೌಕರರು ಫೆ. 14ರಂದು ಮೈಸೂರಿನಿಂದ ಪ್ರವಾಸ ಹೊರಟು ಶೃಂಗೇರಿ ಹೊರನಾಡು ಕಳಸ ಸುತ್ತಾಡಿದ್ದಾರೆ. ಉಡುಪಿ ಜಿಲ್ಲೆಯ ಮಲ್ಪೆಗೆ ಸಮುದ್ರ ನೋಡಲು ಹೊರಟಿದ್ದರು. ಆದರೆ ಮಾರ್ಗಮಧ್ಯದಲ್ಲೇ ಒಂಬತ್ತು ಮಂದಿಯ ಪ್ರವಾಸ ದುರಂತ ಕಂಡಿದೆ.
ಶನಿವಾರ ಸಂಜೆ 5.30ಕ್ಕೆ ಖಾಸಗಿ ಮಿನಿ ಬಸ್ ಘಾಟಿಯಿಂದಿಳಿದು ಬರುತ್ತಿದ್ದಾಗ ಎಡಗಡೆಯ ತಡೆಗೋಡೆಗೆ ಗುದ್ದಿದೆ. ಘಾಟಿಯ ರಸ್ತೆ ಅತಿ ಕಿರಿದಾಗಿದ್ದರಿಂದ ಮುಂದೆ ವಾಹನ ಬಂದಾಗ ಬಲಕ್ಕೆ ತಿರುವು ತೆಗೆದುಕೊಳ್ಳುವಾಗ ಆ್ಯಕ್ಸೆಲ್ ಕಟ್ ಆಗಿದ್ದರಿಂದ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ 9 ಮಂದಿ ಸ್ಥಳದಲ್ಲೇ ಮೃತರಾಗಿದ್ದಾರೆ. ಘಟನೆಯಲ್ಲಿ 25 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾರ್ಕಳದ ಸಿಟಿ ಆಸ್ಪತ್ರೆ, ಸರಕಾರಿ ಆಸ್ಪತ್ರೆ, ಮಣಿಪಾಲದ ಕೆಎಂಸಿಗೆ ದಾಖಲಿಸಲಾಗಿದೆ ಎಂದು ಎಸ್‍ಪಿ ವಿಷ್ಣುವರ್ಧನ್ ತಿಳಿಸಿದ್ದರು.