2.75 ಕೋಟಿ ಮಂದಿ ಪ್ರಯಾಣ – ದಾಖಲೆ ಬರೆದ BLR, ಸರಕು ಸಾಗಣೆಯಲ್ಲೂ ಚೇತರಿಕೆ

Public TV
4 Min Read
Bengaluru Kempegowda International Airport 1

ಬೆಂಗಳೂರು:  2022ನೇ ಕ್ಯಾಲೆಂಡರ್‌ ವರ್ಷದಲ್ಲಿ 2.75 ಕೋಟಿ ಪ್ರಯಾಣಿಕರು ಪ್ರಯಾಣಿಸುವ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIAL) ದಾಖಲೆ ಬರೆದಿದೆ. ಇದು 2019ರ ಕೋವಿಡ್‌ ಪೂರ್ವ ಅವಧಿಗಿಂತಲೂ ಹೆಚ್ಚು. ದೇಶಿಯ ವಲಯದಲ್ಲಿ ಶೇ.85ರಷ್ಟು ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಶೇ.65ರಷ್ಟು ಚೇತರಿಕೆ ಕಂಡಿದೆ.

2.75 ಕೋಟಿ ಪ್ರಯಾಣಿಕರ ಪೈಕಿ 2.43 ಕೋಟಿ ದೇಶೀಯ ಹಾಗೂ 31.4 ಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ.  ಡಿಸೆಂಬರ್ ತಿಂಗಳಲ್ಲಿಯೇ ಅತ್ಯಧಿಕ ಜನರು ವಿಮಾನ ಪ್ರಯಾಣವನ್ನು ಆಯ್ಕೆ ಮಾಡುವ ಮೂಲಕ ಈ ದಾಖಲೆ ನಿರ್ಮಾಣವಾಗಿದೆ. ಪ್ರಮುಖ ದೇಶಿಯ ಹಾಗೂ ವಿದೇಶಿಯ ವ್ಯಾಪಾರ ಕೇಂದ್ರಗಳ ಮಾರ್ಗ ಮರುಪ್ರಾರಂಭ ಹಾಗೂ ಹೊಸಮಾರ್ಗಗಳ ಪರಿಚಯ ಈ ತ್ವರಿತ ಸುಧಾರಣೆ ಹಾಗೂ ವಿಮಾನ ನಿಲ್ದಾಣದಲ್ಲಿ (Bengaluru Airport) ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

Bengaluru Kempegowda International Airport 4

 

ವರ್ಷಾಂತ್ಯದ ಚೇತರಿಕೆ:
ಡಿಸೆಂಬರ್‌ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ಈ ಒಂದು ತಿಂಗಳಲ್ಲಿಯೇ 31.3 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. 2019ರ ಡಿಸೆಂಬರ್‌ನಲ್ಲಿ 3.06 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದರು. ಆದರೆ 2022ರ ಡಿಸೆಂಬರ್‌ ಹಿಂದಿನ ಎಲ್ಲಾ ದಾಖಲೆಗಳನ್ನು ಹಿಂದಿಟ್ಟಿದ್ದು, ಡಿ.23 ಒಂದೇ ದಿನದಂದು ಬರೋಬ್ಬರಿ 1,07,825 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಕೋವಿಡ್ ಪೂರ್ವಕ್ಕೆ ಹೋಲಿಸಿದರೆ, ವಿಮಾನ ಸಾರಿಗೆ ಚಲನೆಗಳಲ್ಲಿ (ಎಟಿಎಂ) ಶೇ. 98ರಷ್ಟು ಚೇತರಿಕೆ ಕಂಡಿದೆ.  ಇದನ್ನೂ ಓದಿ: Top Performing Airports 2022 – ವಿಶ್ವದಲ್ಲೇ ಬೆಂಗಳೂರು ನಂ.2

total of 2.75 Crore passengers travelling through BLR Airport in CY 2022 2 scaled

ಪ್ರಮುಖ ವಿಸ್ತರಣೆ:
ಕೋವಿಡ್‌ ಸಾಂಕ್ರಾಮಿಕದ ಬಳಿಕ, ಬಹುತೇಕ ವಿಮಾನಯಾನ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಪುನರಾರಂಭಿಸಿವೆ ಹಾಗೂ 2022ರಲ್ಲಿ ಹೆಚ್ಚಿನ ಸಂಖ್ಯೆಯ ನಗರಗಳಿಗೆ ಸಂಪರ್ಕ ಕಲ್ಪಿಸಿವೆ. ಪ್ರಸ್ತುತ BLR ವಿಮಾನ ನಿಲ್ದಾಣವು ಭಾರತಾದ್ಯಂತ 75 ಸ್ಥಳಗಳಿಗೆ ಸಂಪರ್ಕ ಹೊಂದಿದ್ದು, ಪೂರ್ವ ಕೋವಿಡ್‌ಗೆ ಹೋಲಿಸಿದರೆ 16 ಸ್ಥಳಗಳು ಹೊಸದಾಗಿ ಸೇರ್ಪಡೆಗೊಂಡಿದೆ. ಆಕಾಶ ಏರ್‌ಲೈನ್‌ ಸಂಸ್ಥೆಯ ಬೆಳವಣಿಗೆ ಗಮನಾರ್ಹವಾಗಿದ್ದು, ಬಿಎಲ್‌ಆರ್‌ ವಿಮಾನ ನಿಲ್ದಾಣದಲ್ಲಿ ತಮ್ಮ ಉಪಸ್ಥಿತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಏರ್‌ಲೈನ್‌ ಪ್ರಾರಂಭಗೊಂಡ 6 ತಿಂಗಳೊಳಗೆ 11 ಸ್ಥಳಗಳಿಗೆ ಪ್ರತಿದಿನ 30 ಬಾರಿ ವಿಮಾನಯಾನ ನಡೆಸುತ್ತಿದೆ.

Emirates A380 touched down in Bengaluru today 4

ಮಾರ್ಚ್ 2022 ರಲ್ಲಿ ನಿಗದಿತ ಅಂತರಾಷ್ಟ್ರೀಯ ಕಾರ್ಯಾಚರಣೆಗಳ ಪುನರಾರಂಭದ ನಂತರ, ಕ್ವಾಂಟಾಸ್ ಏರ್‌ವೇಸ್‌ನಿಂದ ಬೆಂಗಳೂರು ಮತ್ತು ಸಿಡ್ನಿ ನಡುವೆ ನೇರ ಮಾರ್ಗವನ್ನು (ನಾಲ್ಕು ಸಾಪ್ತಾಹಿಕ ವಿಮಾನಗಳು) ಪರಿಚಯಿಸಲಾಗಿದೆ. ಇದು ದಕ್ಷಿಣ ಭಾರತದಿಂದ ಆಸ್ಟ್ರೇಲಿಯಾಕ್ಕೆ ಮೊದಲ ನೇರ ಸಂಪರ್ಕವಾಗಿದೆ. ಬಿಎಲ್‌ಆರ್‌ ಮತ್ತು ದಕ್ಷಿಣ ಭಾರತದಿಂದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಎಮಿರೇಟ್ಸ್ A380 (ವಿಶ್ವದ ಅತಿ ದೊಡ್ಡ ವಿಮಾನ) ಸೇವೆಯನ್ನು ದುಬೈಗೆ ಪ್ರಾರಂಭಿಸಲಾಗಿದೆ. ಜೊತೆಗೆ, ಏರ್ ಇಂಡಿಯಾ ತನ್ನ ಬೆಂಗಳೂರು – ಸ್ಯಾನ್ ಫ್ರಾನ್ಸಿಸ್ಕೊ ಮೂರು-ಸಾಪ್ತಾಹಿಕ ಮಾರ್ಗವನ್ನು ಡಿಸೆಂಬರ್ 2022ರಲ್ಲಿ ಪುನರ್‌ ಪ್ರಾರಂಭ ಮಾಡಿದೆ. ಈ ವಿಮಾನಯಾನದಿಂದ BLR ವಿಮಾನನಿಲ್ದಾಣವು ಉತ್ತರ ಅಮೆರಿಕಕ್ಕೆ ನೇರ ಸಂಪರ್ಕ ಹೊಂದುವ ದಕ್ಷಿಣ ಮತ್ತು ಮಧ್ಯ ಭಾರತದ ಮೊದಲ ವಿಮಾನ ನಿಲ್ದಾಣವಾಗಿದೆ. ಇದು BLR ಮಾರುಕಟ್ಟೆಯ ವಿಕಾಸ / ಅಭಿವೃದ್ಧಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಇದೇ ಮಾದರಿ ಇತರ ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಸಹ 2022 ರಲ್ಲಿ BLR ವಿಮಾನ ನಿಲ್ದಾಣದಿಂದ ವಿಮಾನಯಾನವನ್ನು ಪುನರಾರಂಭಿಸಿವೆ.

total of 2.75 Crore passengers travelling through BLR Airport in CY 2022 1 scaled

ವರ್ಗಾವಣೆ ಕೇಂದ್ರ:
BLR ವಿಮಾನ ನಿಲ್ದಾಣವು ಬೌಗೋಳಿಕವಾಗಿ ಪ್ರಾದೇಶಿಕ ಸಂಪರ್ಕದ ಕೇಂದ್ರವಾಗಿದ್ದು, ಈ ಕಾರಣದಿಂದಾಗಿ ವರ್ಗಾವಣೆ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೂ ಕಾರಣವಾಗಿದೆ. 100 ಕ್ಕೂ ಹೆಚ್ಚು ದೈನಂದಿನ ನಿರ್ಗಮನಗಳೊಂದಿಗೆ, ವರ್ಗಾವಣೆ ಪ್ರಯಾಣಿಕರ ಪಾಲು ಶೇ.15ಕ್ಕೆ ಏರಿದೆ. ಪೂರ್ವ ಕೋವಿಡ್ ವರ್ಷಗಳಿಗೆ ಹೋಲಿಸಿದರೆ ಶೇ.5ರಷ್ಟು ಏರಿಕೆಯಾಗಿದೆ. ಇದು ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಆದ್ಯತಾ ವರ್ಗಾವಣೆ / ಸಾರಿಗೆ ವಿಮಾನ ನಿಲ್ದಾಣವಾಗಿ BLR ವಿಮಾನ ನಿಲ್ದಾಣ ಸ್ಥಾನ ಪಡೆದುಕೊಂಡಿದೆ.

BENGALURU AIRPORT 8

2022 ವರ್ಷದಲ್ಲಿ ದೆಹಲಿ, ಮುಂಬೈ, ಕೋಲ್ಕತ್ತಾ, ಕೊಚ್ಚಿ ಮತ್ತು ಹೈದರಾಬಾದ್‌ ಅಗ್ರ ದೇಶೀಯ ಮಾರ್ಗಗಳಾಗಿ, ದೇಶೀಯ ಟ್ರಾಫಿಕ್‌ಗೆ ಸರಿಸುಮಾರು ಶೇ.40ರಷ್ಟು ಕೊಡುಗೆ ನೀಡಿವೆ. ದುಬೈ, ಮಾಲೆ, ಸಿಂಗಾಪುರ್, ದೋಹಾ ಮತ್ತು ಅಬುಧಾಬಿಗಳು BLR ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಸಂಚಾರಕ್ಕೆ ಸರಿಸುಮಾರು ಶೇ.47ರಷ್ಟು ಕೊಡುವ ಅಗ್ರ ಅಂತಾರಾಷ್ಟ್ರೀಯ ಮಾರ್ಗಗಳಾಗಿವೆ.

“ಕೋವಿಡ್ ವರ್ಷಗಳು ನಮಗೆ ತುಂಬಾ ಸವಾಲಾಗಿತ್ತು. ಅದರ ಹೊರತಾಗಿಯೂ, ಪ್ರಯಾಣಿಕರ ದಟ್ಟಣೆಯಲ್ಲಿ ಸ್ಥಿರವಾದ ಚೇತರಿಕೆಯಿಂದ ಸಂತಸವಾಗಿದೆ. ಪ್ರಯಾಣಿಕರ ಸೌಕರ್ಯ ಮತ್ತು ತಡೆರಹಿತ ಪ್ರಯಾಣವು ಆದ್ಯತೆಯಾಗಿ ಮುಂದುವರಿಯುತ್ತದೆ. ಇದರ ಜೊತೆಗೆ, ನಮ್ಮ ಸರಕು ಪಾಲುದಾರಿಕೆಗಳು ನಮ್ಮ ವ್ಯಾಪಾರದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿವೆ. BLR ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ 2 (T2) ಉದ್ಘಾಟನೆಯೊಂದಿಗೆ ನಮ್ಮ ಕಾರ್ಯಾಚರಣೆಯ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿರುವುದರಿಂದ 2022 ವರ್ಷವು ನಮಗೆ ಮಹತ್ವದ ಮೈಲಿಗಲ್ಲು ಸಾಧಿಸಲು ಸಾಧ್ಯವಾಗಿದೆ. T2 ಕಾರ್ಯಾಚರಣೆಯೊಂದಿಗೆ, ನಾವು ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ನೈಸರ್ಗಿಕ ಹೆಬ್ಬಾಗಿಲಾಗಿ ಸೇವೆ ಸಲ್ಲಿಸುವ ಮೂಲಕ ಇನ್ನಷ್ಟು ಉತ್ತಮ ಸ್ಥಾನವನ್ನು ಪಡೆದುಕೊಳ್ಳುತ್ತೇವೆ ಎಂಬ ಭರವಸೆ ಇದೆ ಎಂದು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (BIAL) ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸಾತ್ಯಕಿ ರಘುನಾಥ್ ತಿಳಿಸಿದ್ದಾರೆ.

BENGALURU AIRPORT 4

ಕಾರ್ಗೋ ಬೆಳವಣಿಗೆ:
BLR ಕಾರ್ಗೋ ಸತತ ಎರಡನೇ ವರ್ಷ, ಪೆರಿಷೆಬಲ್‌ ಸರಕುಗಳ ಸಾಗಾಟಣೆಯಲ್ಲಿ ಮೊದಲ ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದೆ. ಜೊತೆಗೆ, ಅಂತಾರಾಷ್ಟ್ರೀಯ ಸರಕು ಸಾಗಣೆಯಲ್ಲಿ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿಯೂ ಹೆಸರು ಪಡೆದುಕೊಂಡಿದೆ. ಇದಲ್ಲದೆ UPS, DHL ಮತ್ತು FedEx ಎಂಬ ವಿಶ್ವದ ಮೂರು ಬಹು ದೊಡ್ಡ ಎಕ್ಸ್‌ಪ್ರೆಸ್ ಸರಕು ಸಾಗಣೆದಾರರನ್ನು ಹೊಂದಿರುವ ಭಾರತದ ಎರಡನೇ ವಿಮಾನ ನಿಲ್ದಾಣವೂ ಆಗಿದೆ.

14 ದೇಶೀಯ ಮತ್ತು ವಿದೇಶಿ ಸರಕು ವಾಹಕಗಳು 41 ನೇರ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. BLR ಕಾರ್ಗೋ, ದೇಶದ ಅಗ್ರ ಕಾರ್ಗೋ ವಿಮಾನ ನಿಲ್ದಾಣಗಳಲ್ಲಿ BLR ವಿಮಾನ ನಿಲ್ದಾಣದ ಸ್ಥಾನವನ್ನು ಭದ್ರಮಾಡಿಕೊಂಡಿದೆ.

2022 ವರ್ಷದಲ್ಲಿ ಸರಕು ಪ್ರಮಾಣವು 412,668 MT ಆಗಿದ್ದು, ಇದು ವಿಮಾನ ನಿಲ್ದಾಣದ ಪ್ರಾರಂಭದ ದಿನದಿಂದ ನಿರ್ವಹಿಸಲಾದ ಅತ್ಯಧಿಕ ಪ್ರಮಾಣದ ಸರಕಾಗಿದೆ. ಜುಲೈ ತಿಂಗಳಲ್ಲಿ ಅತಿ ಹೆಚ್ಚು ಟನ್‌ ಸರಕು ಸಾಗಣೆ ಆಮದು ಮಾಡಿಕೊಳ್ಳುವ ಮೂಲಕ 2022ರಲ್ಲಿ ದೇಶೀಯ ಸರಕು ಶೇ.8ರಷ್ಟು ಹೆಚ್ಚಳವಾಗಿದೆ. ಸೆಪ್ಟೆಂಬರ್ 29 ರಂದು ಒಂದೇ ದಿನದಲ್ಲಿ 1,612 MT ಅತ್ಯಧಿಕ ಸರಕು ಸಾಗಣೆಯಾಗುವ ಮೂಲಕ ದಾಖಲೆ ನಿರ್ಮಿಸಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *