42 ಪಾಸಿಟಿವ್ – ಭಾರತದಲ್ಲಿ 649 ಮಂದಿಗೆ ಕೊರೊನಾ

Public TV
2 Min Read
corona india app

ನವದೆಹಲಿ: ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 42 ಪಾಸಿಟಿವ್ ಕೇಸ್ ಜೊತೆ 4 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಭಾರತದಲ್ಲಿ ಸದ್ಯ ಈಗ 649 ಕೊರೊನಾ ಪ್ರಕರಣಗಳಿವೆ. ಈ ಪೈಕಿ 13 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

649 ರೋಗಿಗಳ ಪೈಕಿ 593 ರೋಗಿಗಳು ದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ 42 ರೋಗಿಗಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಒಟ್ಟು 649 ರೋಗಿಗಳ ಪೈಕಿ 47 ಮಂದಿ ವಿದೇಶಿಯರು ಇದ್ದಾರೆ. ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ಇದು ಹೊಸದಾಗಿ 4 ಮಂದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ.

ಇಲ್ಲಿಯವರೆಗೆ ಕರ್ನಾಟಕದಲ್ಲಿ ವಿದೇಶಕ್ಕೆ ತೆರಳಿದದವರಿಗೆ ಮತ್ತು ಅವರ ಜೊತೆ ಸಂಪರ್ಕಕ್ಕೆ ಬಂದ ವ್ಯಕ್ತಿಗಳಿಗೆ ಕೊರೊನಾ ಬಂದಿತ್ತು. ಆದರೆ ಈಗ ಯಾರ ಸಂಪರ್ಕಕ್ಕೆ ಸಿಗದ ವ್ಯಕ್ತಿಗೆ ಕೊರೊನಾ ಬಂದಿದೆ. ಈ ಪೈಕಿ ರೋಗಿ 52 ಪ್ರಕರಣ ಶಾಕಿಂಗ್ ಆಗಿದ್ದು, ಈ ವ್ಯಕ್ತಿ ಯಾವೊಬ್ಬ ಕೊರೊನಾ ಪೀಡಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿಲ್ಲ. ಆದರೂ ಈ ವ್ಯಕ್ತಿಗೆ ಕೊರೊನಾ ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಎದ್ದಿದೆ. ಇಂದು 4 ಹೊಸ ಪ್ರಕರಣದಿಂದಾಗಿ ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.

ಮೈಸೂರು ಜಿಲ್ಲೆಯ 35 ವರ್ಷದ ಪುರುಷನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ವ್ಯಕ್ತಿ ಯಾವುದೇ ಹೊರಗಿನ ಪ್ರದೇಶಕ್ಕೆ ತೆರಳಿಲ್ಲ. ಜೊತೆಗೆ ಕೊರೊನಾ ಸೋಂಕು ಪಾಸಿಟಿವ್ ಇರುವ ವ್ಯಕ್ತಿಗಳ ಜೊತೆ ಸಂಪರ್ಕಕ್ಕೆ ಬಂದಿಲ್ಲ. ಈ ವ್ಯಕ್ತಿ ನಂಜನಗೂಡಿನಲ್ಲಿರುವ ಒಂದು ಔಷಧ ಉತ್ಪಾದನಾ ಕೈಗಾರಿಕೆಯ ಗುಣ ನಿಯಂತ್ರಣ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಂದರ್ಭದಲ್ಲಿ ಅನೇಕ ವೈದ್ಯಕೀಯ ತಂತ್ರಜ್ಞರೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ. ಅವರ ವಿವರದ ಬಗ್ಗೆ ವೈದ್ಯಕೀಯ ತನಿಖೆ ನಡೆಯುತ್ತಿದೆ. ಇಲ್ಲಿಯವರೆಗೆ ಏಳು ಜನ ಪ್ರಾಥಮಿಕ ಸಂಪರ್ಕ ವ್ಯಕ್ತಿಗಳನ್ನು ಪತ್ತೆ ಮಾಡಿದ್ದು, ಅವರನ್ನು ಮನೆಯಲ್ಲಿಯೇ ಕ್ವಾರಂಟೈನ್‍ನಲ್ಲಿ ಇಡಲಾಗಿದೆ.

ಕರೆ ಮಾಡಿ: ಉತ್ತರ ಕನ್ನಡ ಜಿಲ್ಲೆಯ 65 ವರ್ಷದ ವ್ಯಕ್ತಿಯೊಬ್ಬರು ದುಬೈಗೆ ಪ್ರಯಾಣ ಬೆಳೆಸಿ ಮಾರ್ಚ್ 17ಕ್ಕೆ ಮುಂಬೈ ಮೂಲಕ ಭಾರತಕ್ಕೆ ಬಂದಿದ್ದಾರೆ. ಅಂದು ಅವರು ಮಂಗಳೂರು ಎಕ್ಸ್ ಪ್ರೆಸ್ ರೈಲಿನ ಎಸ್3 ಕೋಚ್ ಲೋಯರ್ ಬರ್ತ್ ನಲ್ಲಿ ಮುಂಬೈನಿಂದ ಭಟ್ಕಳಕ್ಕೆ ಮಾರ್ಚ್ 18 ರಂದು ಮರಳಿದ್ದಾರೆ. ಕೊರೊನಾ ಈಗ ಮೂರನೇ ವ್ಯಕ್ತಿಗಳಿಗೂ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬೋಗಿಯಲ್ಲಿನ ಪ್ರಯಾಣಿಸಿದ ಎಲ್ಲ ಪ್ರಯಾಣಿಕರು ದಯವಿಟ್ಟು ಈ ಕೂಡಲೇ ಶುಲ್ಕ ರಹಿತ 104, 080-4684600 ಅಥವಾ 080 66692000 ನಂಬರಿಗೆ ಕರೆ ಮಾಡಬೇಕು ಎಂದು ಸರ್ಕಾರ ಕೇಳಿಕೊಂಡಿದೆ.

Share This Article