Connect with us

Bengaluru City

ನವ ವರ್ಷದ ಮೊದಲ ವಾರದಲ್ಲೇ ಗ್ರಹಣದ ಹಿಡಿತ-ಜನವರಿ ತಿಂಗಳಲ್ಲೇ ಡಬಲ್ ಗ್ರಹಣ

Published

on

ಬೆಂಗಳೂರು: ನವ ವರ್ಷದ ಕ್ಯಾಲೆಂಡರ್ ಡಿಸೆಂಬರ್ 31ರ ಕೊನೆ ಕ್ಷಣದ ಆಗಮನಕ್ಕಾಗಿ ಕಾದಿದೆ. ಪ್ರತಿಯೊಬ್ಬರ ಮನದಲ್ಲೂ 2018 ಮುಗಿದು 2019ರ ಮೊದಲ ಮುಂಜಾವು ಬದುಕಿನುದ್ದಕ್ಕೂ ಹೊಸಬೆಳಕನ್ನೇ ಹರಿಸಲಿದೆ ಅನ್ನೋ ಭರವಸೆ ಹೆಚ್ಚಿಸಿದೆ. ಇತ್ತ 2019ರಲ್ಲಿ ಘಟಿಸಲಿರುವ ಸೂರ್ಯ, ಚಂದ್ರ ಮತ್ತು ಭೂಮಿಯ ನಡುವೆ ನಡೆಯಲಿರೋ ಆ ಕಣ್ಣಾಮುಚ್ಚಾಲೆ ಆಟದ ಗ್ರಹಣದ ಕಥೆ ನಿಮ್ಮ ಕೌತುಕತೆಯನ್ನು ಇಮ್ಮಡಿಗೊಳಿಸಲಿದೆ.

ಹೊಸ ವರ್ಷ ಆರಂಭವಾದ ಕೆಲವೇ ದಿನಗಳಲ್ಲಿ ಧರಣಿಗೆ ಬೆಳಕು ಹರಿಸೋ ಸೂರ್ಯನ ಮೇಲೆ ಚಂದ್ರನ ಛಾಯೆಯ ಮುಸುಕು ವ್ಯಾಪಿಸಿ ನಮ್ಮೆಲ್ಲರನ್ನೂ ತನ್ನತ್ತ ಸೆಳೆಯಲಿದೆ ಸೌರಮಂಡಲ. ಆ ದಿನಗಳನ್ನು ನೋಡುವ ಸಮಯ ಬಹಳ ದೂರವೇನಿಲ್ಲ. ಗ್ರಹಣದ ಛಾಯೆಯಿಂದ ಫಳ ಫಳ ಹೊಳೆಯುವ ಚಂದಿರನು ಕೆಂಬಣ್ಣಕ್ಕೆ ತಿರುಗಿ ಕುಪಿತನಾದವಂತೆ ಗೋಚರಿಸಿ ಅದ್ಯಾವ ಸಂದೇಶ ಹೇಳಬರುತ್ತಿರುವನೋ ಗೊತ್ತಿಲ್ಲ, ಆದ್ರೆ ಆ ದಿನವನ್ನು ನೋಡುವ ಸಮಯವೂ ಬಹಳ ದೂರವೇನಿಲ್ಲ.

ಖಗೋಳ ತಜ್ಞರ ಚಿತ್ತ ಸೆಳೆದಿರುವ ಈ ಗ್ರಹಣಗಳಿಂದ ಚಂದ್ರ ಮತ್ತು ಸೂರ್ಯರ ಬಗೆಗಿನ ಕೇಳಿರದ ಹೊಸ ಸಂಗತಿಗಳನ್ನು ಅರಿಯಲು ವಿಜ್ಞಾನಿಗಳು ಕಾತುರರಾಗಿದ್ದಾರೆ. ಗ್ರಹಣಕ್ಕೆ ಫಿಕ್ಸಾಗಿರೋ ಐದು ದಿನಗಳಿಗಾಗಿ ಆಸಕ್ತಿಯಿಂದ ಕಾದಿದ್ದಾರೆ. ಆದ್ರೆ ಜ್ಯೋತಿಷಿಗಳಿಗೆ ಈ ಗ್ರಹಣಗಳು ಕೊಂಚ ಚಿಂತೆ ಹೆಚ್ಚಿಸಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement
Continue Reading Below

ಐದು ಗ್ರಹಣಗಳು: 2019ರ ಜನವರಿ 6ರ ದಿನ ಖಗೋಳಲೋಕಕ್ಕೆ ಅತ್ಯಂತ ಮಹತ್ವದ್ದು. ಅಂದು ಮುಂಜಾವಿಗೇ ಸೂರ್ಯದೇವನೇನೋ ಎಂದಿನಂತೆ ಬೆಳಕು ಹರಿಸಲು ಎಚ್ಚರವಾಗುವನು. ಆದರೆ ಅದಾಗಲೇ ಗ್ರಹಣದ ಛಾಯೆ ಸೂರ್ಯದೇವನ ರಶ್ಮಿಗಳನ್ನು ಆವರಿಸಿಬಿಟ್ಟಿರುತ್ತಂತೆ. ಅದೇ ರೀತಿ ಜನವರಿ 21ರಂದು ಹೊಳೆಯಲಿರುವ ಚಂದಿರನ ಮೇಲೆ ಗ್ರಹಣದ ನೆರಳು ಆವರಿಸಲಿದೆ. 2019ರಲ್ಲಿ ಇಂಥ ಒಟ್ಟು 5 ದಿನಗಳು ಬರಲಿದ್ದು ಇಡೀ ಜಗತ್ತು ಆವತ್ತಿಗೆ ಅಚ್ಚರಿಯ ಕಂಗಳಿಂದ ಆಕಾಶ ದಿಟ್ಟಿಸುತ್ತಾ ನೋಡುತ್ತಿದೆ.

ಜನವರಿ ಗ್ರಹಣ..!: ಜನವರಿ 6ರಂದು ಜರುಗುವ ವರ್ಷದ ಪ್ರಪ್ರಥಮ ಸೂರ್ಯಗ್ರಹಣವು ಜಗತ್ತಿನಾದ್ಯಂತ ಭಾಗಶಃ ಗೋಚರಿಸಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಸಂಜೆ 5 ಗಂಟೆ 4 ನಿಮಿಷದಿಂದ ರಾತ್ರಿ 9 ಗಂಟೆ 18 ನಿಮಿಷದವರೆಗೂ ಗೋಚರಿಸಲಿದೆ. ಗ್ರಹಣದ ಈ ಕಾಲಮಾನ ನೋಡಿದ್ರೆ ಗೊತ್ತಾಗುತ್ತೆ, ಭಾರತದಲ್ಲಂತೂ ಈ ಸೂರ್ಯಗ್ರಹಣ ಗೋಚರಿಸುವುದಿಲ್ಲ.

ಗ್ರಹಣ ಕಾಲ:
2019ರ ಜುಲೈ 2ರಂದು ನಡೆಯುವ ವರ್ಷದ 2ನೇ ಸೂರ್ಯ ಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11.31ರಿಂದ ಬೆಳಗಿನ ಜಾವ 2.41ರ ತನಕ ಜರುಗುವುದು. ಈ ಅವಧಿಯಲ್ಲೂ ಭಾರತದಲ್ಲಿ ಕತ್ತಲು ಆವರಿಸಿರೋದ್ರಿಂದ 2ನೇ ಸೂರ್ಯಗ್ರಹಣವೂ ಭಾರತೀಯರಿಗೆ ಗೋಚರಿಸುವ ಸಂಭವವೇ ಇಲ್ಲ. ವರ್ಷದ ಕೊನೆಯಲ್ಲಿ ಡಿಸೆಂಬರ್ 26ರಂದು ಬರುವ ಕೊನೆಯ ಗ್ರಹಣವು ಭಾರತೀಯರಿಗೆ ಗೋಚರಿಸುವ ಏಕೈಕ ಸೂರ್ಯ ಗ್ರಹಣವಾಗಿದೆ.

ಭಾರತೀಯರಿಗೆ ಗೋಚರಿಸುವ ಈ ಸೂರ್ಯ ಗ್ರಹಣವು ಬೆಳಗ್ಗೆ 8 ಗಂಟೆ 17 ನಿಮಿಷದಿಂದ ಬೆಳಗ್ಗೆ 10 ಗಂಟೆ 57 ನಿಮಿಷದವರೆಗೂ ಇರಲಿದೆ. ಭಾರತದಲ್ಲಿ ಈ ಗ್ರಹಣದ ಸಾಕ್ಷಾತ್ ದರ್ಶನವಾಗೋದ್ರಿಂದ ಈ ವೇಳೆ ಸೂತಕವಿರಲಿದೆ ಅಂತ ಹೇಳಲಾಗ್ತಿದೆ. ಯಾವ ರೀತಿಯ ಸೂತಕ? ಆ ಸೂತಕದಿಂದ ಏನಾದ್ರೂ ಕಂಟಕವುಂಟಾ ಅನ್ನೋದು ಕೌತುಕ ಕೆರಳಿಸಿದೆ. ಹೊಸ ವರ್ಷದ ಜನವರಿಯ 21ನೇ ತಾರೀಖು ಜರುಗಲಿರೋ ಗ್ರಹಣವು ಪೂರ್ಣ ಚಂದ್ರ ಗ್ರಹಣವಾಗಿರಲಿದ್ದು, 9 ಗಂಟೆ 3 ನಿಮಿಷದಿಂದ ಶುರುವಾಗಿ, 12 ಗಂಟೆ 20 ನಿಮಿಷದವರೆಗೂ ಘಟಿಸಲಿದೆ.

ವರ್ಷದ 2ನೇ ಚಂದ್ರ ಗ್ರಹಣದ ಯೋಗವು ಜುಲೈ 16-17ನೇ ತಾರೀಖಿನ ಅವಧಿಯಲ್ಲಿ ಘಟಿಸಲಿದೆ. ಈ ಚಂದ್ರಗ್ರಹಣವು ಭಾಗಶಃ ಗೋಚರಿಸಲಿದ್ದು, ರಾತ್ರಿ 1 ಗಂಟೆ 31 ನಿಮಿಷದಿಂದ ಶುರುವಾಗಿ ಬೆಳಗಿನ ಜಾವ 4 ಗಂಟೆ 29 ನಿಮಿಷದವರೆಗೂ ನಡೆಯಲಿದೆ. ಭಾರತ ಮತ್ತು ಇತರೆ ಏಷ್ಯಾ ದೇಶಗಳಲ್ಲದೆ ದ.ಅಮೆರಿಕ, ಯುರೋಪ್, ಆಫ್ರಿಕಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಕಾಣಬಹುದಾಗಿದೆ.

ಪಂಚ ಗ್ರಹಣದ ಫಲಾಫಲ:
ಗ್ರಹಣಗಳು ಬಂದರೆ ಖಗೋಳ ಲೋಕದಲ್ಲಿರುವಂತೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಇನ್ನಿಲ್ಲದ ಮಹತ್ವವಿರೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ವಿಜ್ಞಾನಿಗಳ ಪಾಲಿಗೆ ಅವೆಷ್ಟೋ ಉತ್ತರವಿಲ್ಲದ ಪ್ರಶ್ನೆಗಳಿಗೆ ಗ್ರಹಣಗಳು ಜವಾಬು ಕೊಡಲಿದ್ದರೆ, ಜ್ಯೋತಿಷಿಗಳು ಈಗಲೇ ಈ ಪಂಚಗ್ರಹಣಗಳಿಂದ ದ್ವಾದಶ ರಾಶಿಗಳ ಮೇಲಾಗುವ ಆಗುಹೋಗುಗಳ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ. ಯಾರಿಗೆ ಕಂಟಕ? ಯಾರಿಗೆ ಸಂತಸ? ಯಾರಿಗೆ ಯಾವ ಪರಿಹಾರ ಅನ್ನೋ ಅಂದಾಜು ಜೋರಾಗಿ ನಡೆಯುತ್ತಿದೆ.

ಸೂರ್ಯ ಗ್ರಹಣದ ಕುರಿತಂತೆ ಜ್ಯೋತಿಷ್ಯ ಮತ್ತು ಧಾರ್ಮಿಕವಾಗಿರುವ ಮಹತ್ವವನ್ನು ಹಲವರು ತಳ್ಳಿ ಹಾಕುತ್ತಾರೆ. ಆದರೆ ಇದಕ್ಕಿರೋ ವೈಜ್ಞಾನಿಕ ಮಹತ್ವವನ್ನು ಯಾರೂ ತಳ್ಳಿ ಹಾಕಲಾರರು. ಯಾಕಂದ್ರೆ ಗ್ರಹಣದ ಅವಧಿಯು ಬ್ರಹ್ಮಾಂಡದಲ್ಲಿ ಘಟಿಸುವ ಅಸಂಖ್ಯ ವಿಲಕ್ಷಣ ಘಟನಾವಳಿಗಳನ್ನು ಕಣ್ಮುಂದೆ ತರುವ ಪ್ರಮುಖ ಕ್ಷಣವಾಗಿರುತ್ತದೆ. ಇದರಿಂದಾಗಿ ವಿಜ್ಞಾನಿಗಳಿಗೆ ಹೊಸ ಹೊಸ ತತ್ವಗಳನ್ನು ಅರಿಯುವ ಸುವರ್ಣಾವಕಾಶ ಒದಗಿಬರುತ್ತದೆ.

ಚಂದ್ರ ಭೂಮಿಗೆ ಅತ್ಯಂತ ಸನಿಹದಲ್ಲಿರುವ ಗ್ರಹ. ಹಾಗಾಗಿಯೇ ಚಂದ್ರನಿಂದ ಭೂಮಿಯ ಮೇಲೆ ಅತಿ ಹೆಚ್ಚು ಪ್ರಭಾವಗಳು ಸಂಭವಿಸುವವು. ಹುಣ್ಣಿಮೆಯ ದಿನಗಳಲ್ಲಿ ಭೂಮಿಗೆ ಅತಿ ಸನಿಹಕ್ಕೆ ಬರುವ ಚಂದ್ರನಿಂದ ಹೆಚ್ಚುವ ಗುರುತ್ವಾಕರ್ಷಣ ಬಲದಿಂದ ಸಮುದ್ರದಲ್ಲಿ ಆಳೆತ್ತರದ ಅಲೆಗಳು ಅಬ್ಬರಿಸುತ್ತವೆ. ಕೆಲವೊಮ್ಮೆ ಭೂಮಿಯ ಒಳಪದರಗಳು ಅಲುಗುವುದರ ಹಿಂದೆಯೂ ಚಂದ್ರಮನ ಇದೇ ಶಕ್ತಿಯ ಪ್ರಭಾವ ಕಾರಣವಂತೆ. ಅದರ ಘೋರ ಪರಿಣಾಮವೇ ಭಯಂಕರ ಭೂಕಂಪಗಳು. ಈ ವರ್ಷ ಸಂಭವಸಿದ ಗ್ರಹಣದ ವೇಳೆಯಲ್ಲೂ ಕೆಲ ಅಹಿತಕರ ಘಟನೆಗಳಿಗೆ ಜಗತ್ತು ಸಾಕ್ಷಿಯಾಗಿದ್ದನ್ನು ಈ ವೇಳೆ ಉಲ್ಲೇಖಿಸಬಹುದು.

https://www.youtube.com/watch?v=C-pwPrGbAWo

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *