ಉಡುಪಿ: ಜಿಲ್ಲೆಯ ಕಾರ್ಕಳ ತಾಲ್ಲೂಕಿನಲ್ಲಿ ರಣಭೀಕರ ಸುಂಟರ ಗಾಳಿ ಬೀಸಿದ್ದು, ನೋಡ ನೋಡುತ್ತಿದಂತೆ ಪೆರ್ವಾಜೆ ಬಳಿ ಇಂದು ಮಧ್ಯಾಹ್ನದ ವೇಳೆಗೆ ವಿಪರೀತ ಗಾಳಿ ಬೀಸಿದೆ. ಈ ದೃಶ್ಯಗಳನ್ನು ಕಂಡ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವಿಪರೀತ ಸುಳಿಗಾಳಿಯ ರಭಸಕ್ಕೆ ತರಗೆಲೆಗಳು, ಪ್ಲಾಸ್ಟಿಕ್, ಗೋಣಿ ಚೀಲಗಳು ಅಗಸಕ್ಕೆ ಹಾರಲಾರಂಭಿಸಿದೆ. ಅಲ್ಲದೇ ಪೆರ್ವಾಜೆ ಪ್ರದೇಶದ ನೀರು ಗಾಳಿಯ ಜೊತೆ ಸುರುಳಿ ಆಕಾರದಲ್ಲಿ ಆಕಾಶಕ್ಕೆ ಚಿಮ್ಮಿದೆ. ಗದ್ದೆಯ ನೀರು ಸುಮಾರು 200 ಅಡಿ ಎತ್ತರಕ್ಕೆ ಚಿಮ್ಮಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಪೆರ್ವಾಜೆ ವ್ಯಾಪ್ತಿಯಲ್ಲಿದ್ದ ಸುಮಾರು ಐದು ಮನೆಗಳಿಗೆ ಸುಂಟರಗಾಳಿಯ ಎಫೆಕ್ಟ್ ಆಗಿದ್ದು, ರಭಸದ ಗಾಳಿಯ ಪರಿಣಾಮ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಅಲ್ಲದೇ ಇದೇ ವ್ಯಾಪ್ತಿಯಲ್ಲಿ ಅಡಿಕೆ ಮತ್ತು ತೆಂಗಿನ ತೋಟಕ್ಕೆ ಸುಂಟರಗಾಳಿಯಿಂದ ಸಮಸ್ಯೆಯಾಗಿದ್ದು, ಈ ಭಾಗದ ಮರಗಳು ಬುಡ ಮೇಲಾಗಿದೆ. ಸುಂಟರಗಾಳಿಯ ಪರಿಣಾಮ ಲಭ್ಯವಿರುವ ಮಾಹಿತಿ ಪ್ರಕಾರ ಹತ್ತು ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಭಾಗದಲ್ಲಿ ಪರಿಶೀಲನೆಯಲ್ಲಿ ತೊಡಗಿರುವ ಅಧಿಕಾರಿಗಳು ನಷ್ಟ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಸುಂಟರ ಗಾಳಿ ಬೀಸಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಮೋಡ ಕರಗಿ ಮಳೆ ಆಗುವುದನ್ನು ನಾವು ನೋಡಿದ್ದೇವೆ, ಆದರೆ ಮಳೆ ಬಿದ್ದ ಮೇಲೆ ಆ ನೀರು ಮತ್ತೆ ಮೋಡ ಸೇರಿರುವ ದೃಶ್ಯಾವಳಿಗಳು ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಹವಾಮಾನ ಇಲಾಖೆ ಅಧಿಕಾರಿಗಳು ಮೊಬೈಲ್ ನಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಪಡೆದು ಪರಾಮರ್ಶೆ ನಡೆಸಲು ಮುಂದಾಗಿದ್ದು, ಈ ರೀತಿಯ ಸುಂಟರಗಾಳಿಗೆ ಕಾರಣ ಏನು ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.