ಆರ್ಥಿಕತೆಯಲ್ಲಿ ವೇಗವಾಗಿ ಬೆಳವಣಿಗೆಯಾಗುತ್ತಿರುವ ಟಾಪ್ 10 ರಾಜ್ಯಗಳು – ಕರ್ನಾಟಕಕ್ಕೆ ಎರಡನೇ ಸ್ಥಾನ
ನವದೆಹಲಿ: ಆರ್ಥಿಕತೆಯಲ್ಲಿ ವೇಗವಾಗಿ ಬೆಳವಣಿಗೆಯಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್(Gujarat) ಮೊದಲ ಸ್ಥಾನವನ್ನು ಪಡೆದರೆ ಕರ್ನಾಟಕ(Karnataka) ಎರಡನೇ ಸ್ಥಾನವನ್ನು ಪಡೆದಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ರಾಜ್ಯದ ಆಂತರಿಕ ಉತ್ಪನ್ನ(GSDP) ಆಧಾರಿಸಿ ಒಂಬತ್ತು ವರ್ಷಗಳ (2012 ಹಣಕಾಸು ವರ್ಷದಿಂದ 2021 ವರೆಗೆ) ಕ್ರೋಢಿಕೃತ ವಾರ್ಷಿಕ ಬೆಳವಣಿಗೆ ದರ(CAGR) ಬಿಡುಗಡೆ ಮಾಡಿದೆ. ಗುಜರಾತ್ ಸಿಎಜಿಆರ್ ಶೇ. 8.2 ಇದ್ದರೆ ಕರ್ನಾಟಕದ್ದು ಶೇ.7.3 ಇದೆ. ಇದನ್ನೂ ಓದಿ: ಗುಜರಾತ್ ಆಯ್ತು, ಇಂದಿನಿಂದಲೇ ಕರ್ನಾಟಕ ಚುನಾವಣೆಗೆ ತಯಾರಿ
2012ರಲ್ಲಿ ಗುಜರಾತ್ ಜಿಎಸ್‌ಡಿಪಿ 6.16 ಲಕ್ಷ ಕೋಟಿ ರೂ. ಇದ್ದರೆ 2021ರಲ್ಲಿ ಇದು 12.48 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. 2012ರಲ್ಲಿ ಕರ್ನಾಟಕದ ಜಿಎಸ್‌ಡಿಪಿ 6.06 ಲಕ್ಷ ಕೋಟಿ ರೂ. ಇದ್ದರೆ 2021ರಲ್ಲಿ ಇದು 11.44 ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ಮೂಲಕ ಎರಡನೇ ಸ್ಥಾನ ಪಡೆದಿದೆ.
ಮೂರನೇ ಸ್ಥಾನವನ್ನು ಹರ್ಯಾಣ ಪಡೆದುಕೊಂಡಿದ್ದು 2021ರಲ್ಲಿ 5.36 ಲಕ್ಷ ಕೋಟಿ ರೂ.ಗೆ ಜಿಎಸ್‌ಡಿಪಿ ತಲುಪಿದ್ದು, 2012ರಲ್ಲಿ ಇದು 2.97 ಲಕ್ಷ ಕೋಟಿ ರೂ. ಇತ್ತು.
ನಾಲ್ಕನೇ ಸ್ಥಾನವನ್ನು ಮಧ್ಯಪ್ರದೇಶ ಪಡೆದುಕೊಂಡರೆ ಆಂಧ್ರಪ್ರದೇಶ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ತೆಲಂಗಾಣ, ತಮಿಳುನಾಡು, ಒಡಿಶಾ, ದೆಹಲಿ, ಅಸ್ಸಾಂ ಅನುಕ್ರಮವಾಗಿ ನಂತರದ ಸ್ಥಾನವನ್ನು ಪಡೆದಿದೆ.
ಕೇರಳ ಶೇ.3.9, ಜಮ್ಮು ಕಾಶ್ಮೀರ ಶೇ.4.1, ಜಾರ್ಖಂಡ್ ಶೇ.4.2 ಸಿಎಜಿಆರ್ ಹೊಂದಿದ್ದು ಅತ್ಯಂತ ನಿಧಾನ ಬೆಳವಣಿಗೆಯಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.