ಬೆಂಗಳೂರು/ ಉಡುಪಿ: 13 ವರ್ಷಗಳ ಬಳಿಕ ಮಲೆನಾಡು ಕರಾವಳಿಯಲ್ಲಿ ನಕ್ಸಲ್ ಎನ್‌ಕೌಂಟರ್ (Naxal Encounter) ನಡೆದಿದೆ. ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡ (Vikram Gowda) ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.
ಉಡುಪಿಯ ಹೆಬ್ರಿ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ (Kabbinale Forest) ನಕ್ಸಲ್ ನಿಗ್ರಹ ಪಡೆ (ANF) ಎನ್‌ಕೌಂಟರ್ ಮಾಡಿ ವಿಕ್ರಂ ಗೌಡನನ್ನು ಹತ್ಯೆ ಮಾಡಿದೆ. ಸೋಮವಾರ ಸಂಜೆ ನಡೆದ ಗುಂಡಿನ ಕಾಳಗದಲ್ಲಿ ಎರಡು, ಮೂರು ನಕ್ಸಲರು ಗಾಯಗೊಂಡಿದ್ದು ಅವರಿಗೆ ಅರಣ್ಯದಲ್ಲಿ (Forest) ಶೋಧ ಕಾರ್ಯ ನಡೆಯುತ್ತಿದೆ.
ಯಾರು ಈ ವಿಕ್ರಂ ಗೌಡ?
ಕರ್ನಾಟಕದ ಮೋಸ್ಟ್ ವಾಂಟೆಡ್ ನಕ್ಸಲ್ ಆಗಿರುವ ವಿಕ್ರಂ ಗೌಡನ ಮೂಲ ಉಡುಪಿ ಹೆಬ್ರಿ ತಾಲೂಕಿನ ಕೂಡ್ಲು ನಾಡ್ವಾಲು ಗ್ರಾಮ. ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಯ ನಾಯಕತ್ವ ತಮಿಳುನಾಡು ಮೂಲದ ಕುಪ್ಪುಸ್ವಾಮಿ ವಹಿಸಿಕೊಂಡಿದ್ದರೆ, ರಾಜ್ಯದಲ್ಲಿನ ಜವಾಬ್ದಾರಿ ವಿಕ್ರಂ ಗೌಡ ಹೆಗಲಿಗೆ ಬಿದ್ದಿತ್ತು.
20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿರುವ ವಿಕ್ರಂ ಗೌಡ ಕಳೆದ 20 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ. ಕಾರ್ಮಿಕ ಸಂಘಟನೆಯಿಂದ ಬಂದಿದ್ದ ವಿಕ್ರಂ ಗೌಡ ಮೂರು ಬಾರಿ ಕರ್ನಾಟಕ ಪೊಲೀಸರ ಕೈಯಿಂದ ಪರಾರಿಯಾಗಿದ್ದ. 2016ರಲ್ಲಿ ಕೇರಳ ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿದ್ದ.
ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಸರ್ಕಾರದ ಯೋಜನೆಗೆ ವಿಕ್ರಂ ಗೌಡ ವಿರೋಧ ಹೊಂದಿದ್ದ. ಅಷ್ಟೇ ಅಲ್ಲದೇ ಈ ಯೋಜನೆಯಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದಕ್ಕೆ ಗೌರಿ ಲಂಕೇಶ್ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಿತ್ತಿಪತ್ರಗಳನ್ನೂ ಕೂಡ ಹಂಚಿದ್ದ.