ನವದೆಹಲಿ: ರಾಜಿಯಾದ (Compromise) ಮಾತ್ರಕ್ಕೆ ಲೈಂಗಿಕ ಕಿರುಕುಳ ಕೇಸ್ ರದ್ದು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ.
ರಾಜಸ್ಥಾನದ (Rajasthan) ಶಿಕ್ಷಕನೊಬ್ಬನ ವಿರುದ್ಧ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣ ದಾಖಲಾಗಿತ್ತು. ಬಳಿಕ ಶಿಕ್ಷಕ, ಸಂತ್ರಸ್ಥೆಯ ಕುಟುಂಬದ ಜೊತೆ ರಾಜಿಯಾಗಿದ್ದ. ಇದಾದ ನಂತರ ಶಿಕ್ಷಕನಿಗೆ ರಾಜಸ್ಥಾನ ಹೈಕೋರ್ಟ್ ಪ್ರಕರಣ ರದ್ದುಗೊಳಿಸಿ ರಿಲೀಫ್ ನೀಡಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಶಿಕ್ಷಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶಿಸಿದೆ.
Advertisement
2022ರಲ್ಲಿ ರಾಜಸ್ಥಾನದ ಗಂಗಾಪುರದಲ್ಲಿ ಅಪ್ರಾಪ್ತ ದಲಿತ ಬಾಲಕಿಯೊಬ್ಬಳು ಸರ್ಕಾರಿ ಶಾಲೆಯ ಶಿಕ್ಷಕನ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಳು. ಈ ಪ್ರಕರಣದಲ್ಲಿ ಪೋಕ್ಸೊ ಕಾಯಿದೆ (POCSO Act) ಮತ್ತು ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಅಡಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಅಪ್ರಾಪ್ತೆಯ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿತ್ತು.
Advertisement
Advertisement
ಆರೋಪಿ ಶಿಕ್ಷಕ ವಿಮಲ್ ಕುಮಾರ್ ಗುಪ್ತಾ ಎಂಬಾತ ಬಾಲಕಿಯ ಕುಟುಂಬದೊಂದಿಗೆ ರಾಜೀ ಮಾಡಿಕೊಂಡು, ಸ್ಟಾಂಪ್ ಪೇಪರ್‌ನಲ್ಲಿ, ತಪ್ಪು ತಿಳುವಳಿಕೆಯಿಂದ ಪ್ರಕರಣ ದಾಖಲಿಸಲಾಗಿದೆ. ಶಿಕ್ಷಕರ ವಿರುದ್ಧ ಯಾವುದೇ ಕ್ರಮವನ್ನು ಬಯಸುವುದಿಲ್ಲ ಎಂದು ಬರೆಸಿಕೊಂಡಿದ್ದ. ಇದನ್ನು ಸ್ವೀಕರಿಸಿದ ಪೊಲೀಸರು ವರದಿ ಸಲ್ಲಿಸಿದ್ದರು. ಕೆಳ ನ್ಯಾಯಾಲಯವು ಈ ಹೇಳಿಕೆಯನ್ನು ತಿರಸ್ಕರಿಸಿತ್ತು.
Advertisement
ಬಳಿಕ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ. ಅದನ್ನು ಒಪ್ಪಿಕೊಂಡು ಎಫ್‌ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ಸಾಮಾಜಿಕ ಕಾರ್ಯಕರ್ತ ರಾಮ್‌ಜಿ ಲಾಲ್ ಬೈರ್ವಾ ಅವರು ಈ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ನ್ಯಾಯಮೂರ್ತಿ ಸಿ.ಟಿ.ರವಿಕುಮಾರ್ ಮತ್ತು ನ್ಯಾಯಮೂರ್ತಿ ಪಿ.ವಿ.ಸಂಜಯ್ ಕುಮಾರ್ ಅವರಿದ್ದ ಪೀಠವು ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿದೆ.