ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಹೊಸ ಸಂಶೋಧನೆಗಳು ಅಚ್ಚರಿ ಮೂಡಿಸುತ್ತಿದ್ದರೆ, ಹೊಸ ಮಾದರಿಯ ವೈರಸ್‌ಗಳು (Virus) ವಿಶ್ವದಾದ್ಯಂತ ಜನರ ನಿದ್ದೆಗೆಡಿಸಿವೆ. ಈಚೆಗೆ ಚೀನಾದಲ್ಲಿ ನ್ಯುಮೋನಿಯಾ ಮಾದರಿಯ ವೈರಸ್ ಪತ್ತೆಯಾಗಿದ್ದು, ವಿಶ್ವವನ್ನೇ ಆತಂಕಕ್ಕೆ ದೂಡಿದೆ. ಚೀನಾದಲ್ಲಿ ಪತ್ತೆಯಾಗಿರುವ ವೈರಸ್‌ನಿಂದ ಭಾರತಕ್ಕೆ ಯಾವುದೇ ಆತಂಕ ಸದ್ಯಕ್ಕೆ ಇಲ್ಲ. ಆದ್ರೆ ನಿರ್ಲಕ್ಷ್ಯ ವಹಿಸಿದ್ರೆ ಸಂಕಷ್ಟ ಕಟ್ಟಿಟ್ಟಬುತ್ತಿ ಎಂದು ಸಾಂಕ್ರಾಮಿಕ ರೋಗತಜ್ಞರು ಹೇಳುತ್ತಾರೆ.
2020-2021ರ ವೇಳೆಗೆ ಚೀನಾದ ವುಹಾನ್ ಲ್ಯಾಬ್‌ವೊಂದರಲ್ಲಾದ ಯಡವಟ್ಟಿನಿಂದ ಇಡೀ ವಿಶ್ವವನ್ನೇ ಕೊರೊನಾ ವೈರಸ್ ಕಾಡಿತು. ವಿಶ್ವಾದ್ಯಂತ 6,09,85,964 ಜನರನ್ನು ಬಲಿ ಪಡೆದುಕೊಂಡಿತು. ಆದ್ರೆ ಕೊರೊನಾ ವೈರಸ್‌ಗಿಂತಲೂ (Corona Virus) ಭೀಕರ ವೈರಸ್‌ಗಳ ಹಾವಳಿಯನ್ನು ಈ ಜಗತ್ತು ಕಂಡಿದೆ. 20ನೇ ಶತಮಾನದಲ್ಲಿ ಇಡೀ ಮನುಕುಲಕ್ಕೆ ಸಂಚಕಾರ ತಂದಿದ್ದ ಸಿಡುಬು (ಸ್ಮಾಲ್‌ಪಾಕ್ಸ್) ಸದ್ಯ ಕಾಣೆಯಾಗಿದೆ. ನಮ್ಮ ವೈದ್ಯಕೀಯ ಲೋಕ ಬೆಳೆದಂತೆ ವೈರಾಣುಗಳಿಗೆ ಲಸಿಕೆಗಳು, ಔಷಧಗಳನ್ನು ಕಂಡುಹಿಡಿಯಲಾಗುತ್ತಿದೆ. ಆದ್ರೆ ಈವರೆಗೂ ವೈರಸ್‌ಗಳನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುವ ಯಾವುದೇ ಔಷಧವನ್ನೂ ಕಂಡುಹಿಡಿಯಲಾಗಿಲ್ಲ.
Advertisement
Advertisement
ಕೋವಿಡ್‌ಗೂ ಮುನ್ನ ಎಬೋಲಾ ಎಂಬ ವೈರಸ್ ಕೂಡ ಹೆಚ್ಚು ಭೀತಿ ಸೃಷ್ಟಿಸಿತ್ತು. 3-4 ವರ್ಷಗಳ ಹಿಂದೆ ಆಫ್ರಿಕಾದ ಕೆಲ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದ್ದ ಎಬೋಲಾ ಸೃಷ್ಟಿಸಿದ್ದ ಭೀಕರತೆ ಮಾತ್ರ ಗಂಭೀರವಾಗಿತ್ತು. ಎಬೋಲಾ ಪೀಡಿತರ ಪೈಕಿ 90% ಜನರು ಸರಿಯಾದ ಚಿಕಿತ್ಸೆ ದೊರೆಯದೇ ಸಾವಿಗೀಡಾಗಿದ್ದರು. ಆದರೀಗ ಪತ್ತೆಯಾಗಿರುವ ವೈರಸ್ ಮತ್ತೆ ಅಂತಹದ್ದೇ ಸನ್ನಿವೇಶ ಸೃಷ್ಟಿಸುತ್ತದೆಯೇ ಅನ್ನೋದು ಪ್ರಶ್ನೆಯಾಗಿದೆ.
Advertisement
ಒಮ್ಮೆ ಬಂದ ವೈರಸ್ ಸಾಯುವುದಿಲ್ಲ ಏಕೆ?
ಚೀನಾದಲ್ಲಿ ಪತ್ತೆಯಾಗಿರುವ ನ್ಯೂಮೋನಿಯಾ ವೈರಸ್‌ನಲ್ಲಿ ಹೊಸತೇನು ಇಲ್ಲ. ಇತರ ವೈರಸ್‌ಗಳಂತೆಯೆ ಇದು ಒಂದು. ವೈದ್ಯಕೀಯ ಕ್ಷೇತ್ರದಲ್ಲಿ ತಜ್ಞರು ಗುರುತಿಸಿರುವಂತೆ ಸುಮಾರು 1 ಸಾವಿರ ವೈರಸ್‌ಗಳು ಕಂಡುಬಂದಿವೆ. ಆದ್ರೆ ಅದರಲ್ಲಿ ಸಬ್ ವೇರಿಯಂಟ್‌ಗಳು (ರೂಪಾಂತರಿ) ಸಾಕಷ್ಟು ಇವೆ. ಅವುಗಳು ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತವೆ. ಸಾವಿನ ಪ್ರಮಾಣದ ತೀವ್ರತೆ ಎಷ್ಟಿರುತ್ತದೆ ಎಂಬುದನ್ನು ಗಮನಿಸಿ ಅದಕ್ಕೆ ಹೆಸರುಗಳನ್ನ ಕೊಡುತ್ತಾರೆ. ನಂತರ ಈ ವೈರಸ್ ಬಂದ್ರೆ ಹೊಸದಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳುತ್ತಾರೆ. ಆದರೆ, ಒಂದು ವೈರಸ್ ಬಂದ ನಂತರ ಅವು ಮತ್ತೆ ಹೋಗುವುದಿಲ್ಲ. ಬದುಕುವುದಕ್ಕಾಗಿ ಹೊಸ ಹೊಸ ರೂಪಗಳನ್ನ ಪಡೆದುಕೊಳ್ಳುತ್ತವೆ. ಅವು ಮಾನವನ ಜೀವಕೋಶಗಳ ಮೇಲೆ ಅವಲಂಬಿತವಾಗುತ್ತವೆ. ನಮ್ಮ ಜೀವಕಣಗಳಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾದ್ರೆ ಯಾವುದೇ ಸಮಸ್ಯೆ ಕಂಡುಬರುವುದಿಲ್ಲ. ಇಲ್ಲದಿದ್ದರೇ ಪ್ರಾಣಾಪಾಯ ಉಂಟುಮಾಡುತ್ತದೆ ಎನ್ನುತ್ತಾರೆ ಸಾಂಕ್ರಾಮಿಕ ರೋಗ ತಜ್ಞ ಹಾಗೂ ಚಾಮರಾಜನಗರ ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರ.
Advertisement
1. `ಮಾರ್ಬರ್ಗ್’ (Marburg Viruses)
1967 ರಲ್ಲಿ ವಿಜ್ಞಾನಿಗಳು ಈ ವೈರಸ್ ಗುರುತಿಸಿದರು. ಉಗಾಂಡದಿಂದ ಮಂಗಗಳನ್ನು ಲ್ಯಾಬ್ ಸಿಬ್ಬಂದಿ ಜರ್ಮನಿಗೆ ತರುತ್ತಿದ್ದರು. ಈ ವೇಳೆ ಮಂಗಗಳಿಂದ ಅವರಿಗೂ ಈ ವೈರಸ್ ತಗುಲಿತ್ತು. ಎಬೋಲಾ ವೈರಸ್ ಮಾದರಿಯಲ್ಲೆ ಮಾರ್ಬರ್ಗ್ ವೈರಸ್ ಇದ್ದು, ಹೆಮರಾಜಿಕ್ ಫೀವರ್ (ರಕ್ತಸ್ರಾವ ಜ್ವರ)ಗೆ ಕಾರಣವಾಗುತ್ತದೆ. ಅಂದರೆ, ಮಾರ್ಬರ್ಗ್ ಸೋಂಕುಪೀಡಿತ ವ್ಯಕ್ತಿಗೆ ಸಿಕ್ಕಾಪಟ್ಟೆ ಜ್ವರ ಉಂಟಾಗಿ, ರಕ್ತಸ್ರಾವ ಆಗುತ್ತದೆ. ಇದರ ಪರಿಣಾಮ ವ್ಯಕ್ತಿಗೆ ಬಹು ಅಂಗಾಂಗಗಳು ವೈಫಲ್ಯ ಕಾಣಬಹುದು ಮತ್ತು ಅಂತಿಮವಾಗಿ ಸಾವು ಸಂಭವಿಸಬಹುದು. ಮಾರ್ಬರ್ಗ್ ಮರಣದ ಪ್ರಮಾಣ 25% ರಷ್ಟಿದೆ. ಆದ್ರೆ 1998 ಮತ್ತು 2000ರಲ್ಲಿ ಈ ವೈರಸ್ ಕಾಣಿಸಿಕೊಂಡಾಗ ಮರಣ ಪ್ರಮಾಣ 80% ನಷ್ಟು ಹೆಚ್ಚಾಗಿತ್ತು. ವಿಶೇಷವಾಗಿ ಕಾಂಗೊದಲ್ಲಿ ಈ ಜ್ವರ ಕಾಣಿಸಿಕೊಂಡ ನೂರು ಜನರ ಪೈಕಿ 80 ಜನರು ಸಾವಿಗೀಡಾಗುತ್ತಿದ್ದರು. 2005ರಲ್ಲಿ ಅಂಗೋಲಾದಲ್ಲಿ ಮಾರ್ಬರ್ಗ್ ಕಾಣಿಸಿಕೊಂಡು ಹೆಚ್ಚಿನ ಸಾವು ನೋವಿಗೆ ಕಾರಣವಾಗಿತ್ತು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಭಾರತದಲ್ಲಿಯೂ ಸಹ ಈ ವೈರಸ್‌ಗೆ 9 ಮಂದಿ ಬಲಿಯಾಗಿದ್ದಾರೆ.
2. ಎಬೋಲಾ (Ebola Virus)
ಮಾರಣಾಂತಿಕ ಎಬೋಲಾ ವೈರಸ್ 1967ರ ಸಮಯದಲ್ಲಿ ಆಫ್ರಿಕಾದ ಕಾಂಗೊ ಮತ್ತು ಸೂಡಾನ್ ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಕಾಣಿಸಿಕೊಂಡಿತು. ಇದು ಕೂಡ ಡೆಡ್ಲಿವೈರಸ್ ಆಗಿದ್ದು, ಸ್ವಲ್ಪ ನಿರ್ಲಕ್ಷ್ಯ ವಹಿಸಿದರೆ ಸಾವು ಖಚಿತ. ರಕ್ತ ಅಥವಾ ದೇಹದ ಇತರ ದ್ರವ ಅಥವಾ ಸೋಂಕಿತ ವ್ಯಕ್ತಿಯು ಪ್ರಾಣಿಯ ಅಂಗಾಂಶಗಳಿಂದ ಈ ವೈರಸ್ ಹರಡುತ್ತದೆ. ತೀರಾ ಇತ್ತೀಚೆಗೆ ಅಂದರೆ 2014ರಲ್ಲಿ ಎಬೋಲಾ ಪಶ್ಚಿಮ ಆಫ್ರಿಕಾದಲ್ಲಿ ಕಾಣಿಸಿಕೊಂಡಿತ್ತು. ಆತಂಕಕಾರಿ ಸಂಗತಿ ಎಂದರೆ, ಈವರೆಗೂ ಕಂಡು ಬಂದಿರುವ ವೈರಸ್‌ಗಳ ಪೈಕಿ ಇದು ಅತ್ಯಂತ ಡೆಡ್ಲಿವೈರಸ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ವೈರಸ್‌ನಿಂದ ಸಾವಿನ ಪ್ರಮಾಣ 50% ನಿಂದ 70% ನಷ್ಟಿತ್ತು ಎಂದು ಸಾಂಕ್ರಾಮಿಕ ರೋಗ ತಜ್ಞರು ತಿಳಿಸಿದ್ದಾರೆ. ಆದ್ರೆ ಮಾಹಿತಿಗಳ ಪ್ರಕಾರ 1976 ರಿಂದ ಈ ವೈರಸ್‌ಗೆ 15 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
3. ರೇಬಿಸ್ (Rabies)
ರೇಬಿಸ್ ವೈರಸ್‌ಗೆ ಈಗ ಮದ್ದು ಇದೆ. ಆದ್ರೆ 1920ಕ್ಕಿಂತ ಮುಂಚೆ ಈ ವೈರಸ್ ಮಾರಣಾಂತಿಕವಾಗಿತ್ತು, ಆ ನಂತ್ರ ರೇಬಿಸ್‌ಗೆ ಮದ್ದು ಕಂಡುಹಿಡಿದು ಅದನ್ನು ಹತೋಟಿಗೆ ತರಲಾಯಿತು. ಈಗಲೂ ಭಾರತ ಮತ್ತು ಆಫ್ರಿಕಾದ ಕೆಲ ಭಾಗಗಳಲ್ಲಿ ರೇಬಿಸ್ ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ರೇಬಿಸ್‌ಪೀಡಿತ ವ್ಯಕ್ತಿಯ ಮೆದುಳು ತನ್ನ ಕೆಲಸವನ್ನು ನಿಲ್ಲಿಸುತ್ತದೆ. ವಿಶೇಷವಾಗಿ ನಾಯಿ ಕಚ್ಚಿದಾಗ ಈ ವೈರಸ್ ಸೋಂಕು ತಗುಲುತ್ತದೆ. ಆದ್ರೆ ರೇಬಿಸ್‌ಗೆ ಚುಚ್ಚುಮದ್ದು ಮತ್ತು ಆ್ಯಂಟಿಬಯೋಟಿಕ್ಸ್‌ಗಳು ಲಭ್ಯ ಇವೆ. ರೇಬಿಸ್‌ಪೀಡಿತ ಪ್ರಾಣಿ ಕಚ್ಚಿದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಸಾವಿನ ಪ್ರಮಾಣ 100% ಖಚಿತ ಎನ್ನುತ್ತಾರೆ ತಜ್ಞರು.
4. ಹೆಚ್‌ಐವಿ (HIV)
ಬಹುಶಃ ಹೆಚ್‌ಐವಿ ವೈರಾಣು ಸೃಷ್ಟಿಸಿದ್ದ ಆತಂಕವನ್ನು ಬೇರೆ ಯಾವುದೇ ಸೋಂಕು ಸೃಷ್ಟಿಸಿಲ್ಲವೇನೋ? ಭಾರತದಲ್ಲಿಯೂ ಈ ಕಾಯಿಲೆ ಹೆಚ್ಚಿನ ಪರಿಣಾಮವನ್ನೇ ಬೀರಿದೆ. ಆಧುನಿಕ ಜಗತ್ತಿನ ಅತ್ಯಂತ ಡೆಡ್ಲಿವೈರಸ್ ಎಂದು ಹೆಚ್‌ಐವಿಯನ್ನು ಪರಿಗಣಿಸಲಾಗುತ್ತದೆ. ಈಗಲೂ ಜನರನ್ನು ಕೊಲ್ಲುವುದರಲ್ಲಿ ಈ ವೈರಾಣು ನಂಬರ್ ಒನ್ ಸ್ಥಾನದಲ್ಲಿದೆ. 1980ರಲ್ಲಿ ಕಾಂಗೋದಲ್ಲಿ ಮೊದಲ ಬಾರಿಗೆ ಹೆಚ್‌ಐವಿ ವೈರಸ್ ಪತ್ತೆಯಾಗಿತ್ತು. ಅಲ್ಲಿಂದ ಇಲ್ಲಿವರೆಗೂ 3.6 ಕೋಟಿ ಜನರು ಈ ವೈರಾಣುವಿಗೆ ಬಲಿಯಾಗಿದ್ದಾರೆ. ಮಾನವ ಕುಲ ಈವರೆಗೆ ಕಂಡ ಅತ್ಯಂತ ಮಾರಣಾಂತಿಕ ವೈರಸ್ ಇದಾಗಿದೆ ಎಂಬುದು ತಜ್ಞರ ಅಭಿಪ್ರಾಯ. ಹೆಚ್‌ಐವಿಯನ್ನು ತಡೆಯಲು ಆ್ಯಂಟಿಬಯೋಟಿಕ್ಸ್ ಔಷಧ ಸಾಧ್ಯವಾಗಿದೆಯಾದರೂ ಅಭಿವೃದ್ಧಿ ಹೊಂದಿದ ಕೆಲವು ರಾಷ್ಟçಗಳಲ್ಲಿ ಇದರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳೂ ಸಹ ಹೆಚ್‌ಐವಿ ಸೋಂಕಿಗೆ ತುತ್ತಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ವಿಶ್ವದಲ್ಲಿ 3.9 ಕೋಟಿ ಮಂದಿ ಹೆಚ್‌ಐವಿಯೊಂದಿಗೆ ಬದುಕುತ್ತಿದ್ದಾರೆ. ಅದರಲ್ಲಿ 0-14 ವರ್ಷದೊಳಿಗಿನ ಸುಮಾರು 15 ಲಕ್ಷ ಮಕ್ಕಳು ಸೋಂಕಿಗೆ ತುತ್ತಾಗಿದ್ದಾರೆ ಎಂದು ಉಲ್ಲೇಖಿಸಿದೆ. ಭಾರತದಲ್ಲಿ 41 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
5. ಸಿಡುಬು (Smallpox)
1980ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಇಡೀ ಜಗತ್ತನ್ನು ಸ್ಮಾಲ್‌ಪಾಕ್ಸ್ (ಸಿಡುಬು) ಮುಕ್ತ ಮಾಡುವುದಾಗಿ ಘೋಷಿಸಿತು. ಆದ್ರೆ ಇದಕ್ಕೂ ಮೊದಲು ಸಾವಿರಾರು ವರ್ಷಗಳಿಂದ ಮಾನವ ಕುಲ ಈ ಸ್ಮಾಲ್‌ಪಾಕ್ಸ್ ರೋಗಾಣುವಿನ ಅಟ್ಟಹಾಸಕ್ಕೆ ನರಳಿತ್ತು. ಸೋಂಕುಪೀಡಿತ ಪ್ರತಿ ಮೂವರ ಪೈಕಿ ಒಬ್ಬರು ಸಾವಿಗೀಡಾಗುತ್ತಿದ್ದರು. ಇದರಿಂದ ಬದುಕುಳಿದವರು ಶಾಶ್ವತ ಗಾಯದ ಗುರುತುಗಳು ಮತ್ತು ಅಂಧ ಸಮಸ್ಯೆಯಿಂದ ಬಳಲಬೇಕಾಗುವ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ಭಾರತದಲ್ಲಿಯೂ 1.88 ಲಕ್ಷ ಮಂದಿ ಈ ಸೋಂಕಿಗೆ ತುತ್ತಾಗಿದ್ದರು. 31 ಸಾವಿರ ಜನರನ್ನು ಬಲಿ ಪಡೆದಿತ್ತು. ವಿಶ್ವದಾದ್ಯಂತ 30 ರಿಂದ 50 ಕೋಟಿ ಜನ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಅಂದಾಜಿಸಿದೆ.
6. ಹಂಟಾ ವೈರಸ್
ಹಂಟಾ ವೈರಸ್ ಪಲ್ಮನರಿ ಸಿಂಡ್ರೋಮ್ (ಹೆಚ್‌ಪಿಎಸ್) ಮೊದಲ ಬಾರಿಗೆ 1993ರಲ್ಲಿ ಅಮೆರಿಕದಲ್ಲಿ ಕಾಣಿಸಿಕೊಂಡಿತು. ಈ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಆದರೆ, ಸೋಂಕಿತ ಇಲಿಯ ಹಿಕ್ಕೆಯು ಮನುಷ್ಯ ಸಂಪರ್ಕಕ್ಕೆ ಬಂದರೆ ಸೋಂಕು ಗ್ಯಾರಂಟಿ ತಗುಲುತ್ತದೆ. 1950ರಲ್ಲಿ ಈ ಹಂಟಾ ವೈರಸ್ ತೀವ್ರವಾಗಿ ಕಾಣಿಸಿಕೊಂಡಿತ್ತು. ಕೊರಿಯನ್ ವಾರ್ ವೇಳೆ 3,000ಕ್ಕೂ ಹೆಚ್ಚು ಸೈನಿಕರು ಈ ವೈರಸ್‌ನಿಂದ ಬಳಲಿದ್ದರು ಮತ್ತು ಪೀಡಿತರ ಪೈಕಿ 12% ಯೋಧರು ಸಾವಿಗೀಡಾಗಿದ್ದರು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಇದು ಆಗ ಹೊಸದಾದ ರೋಗಾಣು ಆದ್ದರಿಂದ ತಕ್ಷಣಕ್ಕೆ ಯಾವುದೇ ಚಿಕಿತ್ಸೆ ಇರಲಿಲ್ಲ. ನಂತರ ಪಾಶ್ಚಿಮಾತ್ಯ ರಾಷ್ಟ್ರಗಳು ಇದಕ್ಕೆ ಔಷಧವನ್ನು ಕಂಡುಹಿಡಿದವು. ನಂತರ ಈ ವೈರಸ್ ಹರಡುವಿಕೆ ಪ್ರಮಾಣ ಕಡಿಮೆಯಾಯಿತು. ಈವರೆಗೆ 28 ದೇಶಗಳಲ್ಲಿ ವೈರಸ್ ಕಾಣಿಸಿಕೊಂಡಿದ್ದು, 1647 ಕೇಸ್ ಪತ್ತೆಯಾಗಿದೆ. ಹೆಚ್ಚಿನ ಸಾವು-ನೋವುಗಳು ವರದಿಯಾಗಿಲ್ಲ.
7. ಇನ್‌ಫ್ಲುಯೆಂಜಾ (ಸ್ಪ್ಯಾನಿಷ್ ಫ್ಲೂ)
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಪ್ರಕಾರ, ಜಗತ್ತಿನಾದ್ಯಂತ ವರ್ಷಕ್ಕೆ ಐದು ಲಕ್ಷ ಜನರು ಈ ವೈರಸ್‌ನಿಂದಾಗಿ ಸಾವಿಗೀಡಾಗುತ್ತಾರೆ. ಇದು ಕೂಡ ಅತ್ಯಂತ ಡೆಡ್ಲಿ ವೈರಸ್ ಆಗಿದ್ದು, ಇದನ್ನು ಕೆಲವೊಮ್ಮೆ ಸ್ಪಾನಿಸ್ ಫ್ಲುಎಂದೂ ಕರೆಯಲಾಗುತ್ತದೆ. 1918ರಲ್ಲಿ ಇದು ಮೊದಲ ಬಾರಿಗೆ ಪತ್ತೆಯಾಯಿತು. ಸುಮಾರು 5 ಕೋಟಿ ಜನರು ಈ ವೈರಸ್‌ಗೆ ಬಲಿಯಾಗಿದ್ದಾರೆ. ಅಮೆರಿಕ ಒಂದರಲ್ಲೇ ಈ ವೈರಸ್‌ಗೆ 6.75 ಲಕ್ಷ ಮಂದಿ ಪ್ರಾಣ ತೆತ್ತಿದ್ದಾರೆ ಎಂದು ವರದಿಗಳು ಹೇಳಿವೆ.
8. ಡೆಂಗ್ಯೂ
ಡೆಂಗ್ಯೂ ವೈರಸ್ ಬಗ್ಗೆ ಹೇಳುವುದೇ ಬೇಡ. ಪ್ರತಿ ವರ್ಷ ಡೆಂಗ್ಯೂ ವೈರಸ್ ಹಾವಳಿಯನ್ನು ಕಾಣುತ್ತೇವೆ. ಈ ವೈರಸ್ 1950ರಲ್ಲಿ ಫಿಲಿಪೈನ್ಸ್ ಮತ್ತು ಥಾಯ್‌ಲೆಂಡ್‌ನಲ್ಲಿ ಮೊದಲ ಬಾರಿಗೆ ಪತ್ತೆಯಾಯಿತು. ಆ ಬಳಿಕ ಜಗತ್ತಿನ ಉಷ್ಣ ವಲಯ ಹಾಗೂ ಸಮಸೀತೋಷ್ಣವಲಯಗಳ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಈಗಲೂ ಇದರ ಹಾವಳಿ ಕಡಿಮೆಯಾಗಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ನೂರಾರು ಮಂದಿ ಸೋಂಕಿಗೆ ತುತ್ತಾಗುತ್ತಿರುವುದನ್ನೂ ನಾವು ನೋಡುತ್ತೇವೆ. ಈ ವೈರಸ್ ಪ್ರಸರಣಕ್ಕೆ ಮುಖ್ಯ ಸೊಳ್ಳೆಗಳು ಕಾರಣ. ಈ ಸೊಳ್ಳೆಗಳಿಂದಾಗಿಯೇ ಇಡೀ ಜಗತ್ತಿನಾದ್ಯಂತ ವ್ಯಾಪಕ ರೀತಿಯಲ್ಲಿ ಡೆಂಗ್ಯೂ ಹರಡುವಂತಾಗಿದೆ. ಪ್ರತಿವರ್ಷ ಜಗತ್ತಿನಾದ್ಯಂತ 5 ಕೋಟಿಗೂ ಹೆಚ್ಚು ಮಂದಿ ಡೆಂಗ್ಯೂ ಸೋಂಕುಪೀಡಿತರಾಗುತ್ತಾರೆ. ಇದರ ಮರಣ ಪ್ರಮಾಣ ಕಡಿಮೆಯಿದೆ. ಭಾರತ ಸೇರಿದಂತೆ 20 ದೇಶಗಳಲ್ಲಿ 5 ಕೋಟಿಗೂ ಹೆಚ್ಚಿನ ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, 5,500 ಮಂದಿ ಸಾವನ್ನಪ್ಪಿದ್ದಾರೆ.
9. ರೋಟಾ ವೈರಸ್
ಮಕ್ಕಳಿಗೆ ಕಂಟಕಪ್ರಾಯವಾಗಿರುವ ಈ ರೋಟಾ ವೈರಸ್ ನಿಯಂತ್ರಣಕ್ಕೆ ಈಗ ಎರಡು ಲಸಿಕೆಗಳು ಲಭ್ಯ ಇವೆ. ಶಿಶುಗಳು ಹಾಗೂ ಮಕ್ಕಳಿಗೆ ಮಾರಣಾಂತಿಕವಾಗಿ ಕಾಯಿಲೆಯನ್ನು ಸೃಷ್ಟಿಸುತ್ತಿದ್ದ ಈ ವೈರಸ್ ಅತ್ಯಂತ ವೇಗವಾಗಿ ಹರಡಬಲ್ಲದು. ಸದ್ಯ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಈ ವೈರಸ್ ಕಾರಣಕ್ಕೆ ಸಾವಿಗೀಡಾಗುವ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇದೆ. ಆದ್ರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಇದು ಮಾರಣಾಂತಿಕವಾಗಿ ಪರಿಣಮಿಸಿದೆ. ರೀಹೈಡ್ರೇಷನ್ ಚಿಕಿತ್ಸೆ ಎಲ್ಲೆಡೆ ಇರದಿರುವುದೇ ಇದಕ್ಕೆ ಕಾರಣ. 2008ರಲ್ಲಿ 5 ವರ್ಷದೊಳಗಿನ ಲಕ್ಷಾಂತರ ಮಕ್ಕಳು ಮೃತಪಟ್ಟರು. ಆ ಬಳಿಕ ಲಸಿಕೆ ಪೂರೈಸಿದ ಪರಿಣಾಮ ಮರಣ ಪ್ರಮಾಣದಲ್ಲಿ ಇಳಿಕೆ ಕಂಡಿತು. ಮಾಹಿತಿ ಪ್ರಕಾರ ವಿಶ್ವಾದ್ಯಂತ 2 ಲಕ್ಷ ಮಕ್ಕಳು ರೋಟಾ ವೈರಸ್‌ಗೆ ಬಲಿಯಾಗಿದ್ದು, ಭಾರತದಲ್ಲೇ 78 ಸಾವಿರ ಮಕ್ಕಳು ಮೃತಪಟ್ಟಿರುವುದು ವಿಷಾದನೀಯ.
10. ನಿಫಾ ವೈರಸ್
ಬಾವಲಿ ಕಚ್ಚಿದ ಹಣ್ಣುಗಳು ಮಾನವನ ಸಂಪರ್ಕಕ್ಕೆ ಬಂದಾಗ ಈ ನಿಫಾ ಸೋಂಕು ತಗುಲುತ್ತದೆ. ಈ ಸೋಂಕಿಗೂ ನಿಖರವಾದ ಔಷಧ ಇಲ್ಲದಿದ್ದರೂ, ವೈರಸ್‌ಗೆ ತುತ್ತಾಗದಂತೆ ತಡೆಯುವ ಲಸಿಕೆಗಳು ಲಭ್ಯವಿದೆ. ಮಲೇಷ್ಯಾದ ನಿಫಾ ಎಂಬ ಹಳ್ಳಿಯೊಂದರಲ್ಲಿ ಈ ವೈರಸ್ ಕಾಣಿಸಿಕೊಂಡಿದ್ದರಿಂದ ಈ ವೈರಸ್‌ಗೆ ನಿಫಾ ಎಂಬ ಹೆಸರು ಬಂದಿತು. 2018ರ ಮಾಹಿತಿ ಪ್ರಕಾರ 700 ಜನರಿಗೆ ನಿಫಾ ಸೋಂಕು ತಗುಲಿತ್ತು ಮತ್ತು ವೈರಾಣುಪೀಡಿತರ ಪೈಕಿ ಶೇ.50ರಿಂದ 70ರಷ್ಟು ಮಂದಿ ನಿಧನರಾಗಿದ್ದರು. ನಮ್ಮ ನೆರೆಯ ಕೇರಳದಲ್ಲಿ ನಿಫಾ ಭಾರಿ ಭೀತಿಯನ್ನು ಸೃಷ್ಟಿಸಿತ್ತಲ್ಲದೇ 17 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು.