ಮನೆಗಳಲ್ಲಿ ಬೆಳಗಲಿ ದೀಪ.. ಕಲರ್‌ಫುಲ್ ದೀಪಾವಳಿಗೆ 10 ದೀಪಾಲಂಕಾರಗಳ ಟಿಪ್ಸ್

Public TV
4 Min Read
diwali lights decoration

ಬೆಳಕಿನ ಹಬ್ಬ ದೀಪಾವಳಿ (Deepavali). ಕತ್ತಲೆಯ ಕಳೆದು ಬೆಳಕಿನ ಹಾದಿಯಲ್ಲಿ ಸಾಗುವುದನ್ನು ಸಂಕೇತಿಸುವ ಹಬ್ಬ. ಮನೆಗಳಲ್ಲಿ ಹಣತೆ.. ಮನದಲ್ಲಿ ಜ್ಞಾನ ಜ್ಯೋತಿಯ ಬೆಳಗಿ ಸಾರ್ಥಕತೆ ಮೆರೆಯುವ ಸುದಿನ. ಹಣತೆ ಬೆಳಗುವುದು ಶ್ರೇಷ್ಠತೆಯ ಪರಿಕಲ್ಪನೆ. ಸೂರ್ಯ ಈ ಭೂಮಿಯನ್ನು ಬೆಳಗಿ ಸೃಷ್ಟಿಗೆ ಚೈತನ್ಯ ನೀಡುವಂತೆ ಮನೆಮನಗಳಲ್ಲಿ ಬೆಳಗುವುದು ಅಂಧಕಾರದ ನಿವಾರಣೆಯ ದ್ಯೋತಕವೇ ಆಗಿದೆ. ಹೀಗಾಗಿ, ದೀಪಾವಳಿ ಹಬ್ಬ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ.

ದೀಪಾವಳಿಯು ಕೇವಲ ಬೆಳಕಿನ ಹಬ್ಬವಷ್ಟೇ ಅಲ್ಲ. ಭರವಸೆ, ಸಕಾರಾತ್ಮಕತೆ, ಸಂಪತ್ತು, ಸಮೃದ್ಧಿಯ ಹಬ್ಬವಾಗಿದೆ. ಈ ಹಬ್ಬದಲ್ಲಿ ಅಲಂಕಾರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಹೂವಿನ ಅಲಂಕಾರ, ರಂಗೋಲಿ, ಜವಳಿ ಅಲಂಕಾರ ಮತ್ತು ಪೂಜಾ ಕೊಠಡಿಯ ಅಲಂಕಾರಗಳನ್ನು ಮಾಡಲಾಗುತ್ತದೆ. ದೀಪಗಳ ಅಲಂಕಾರ ಈ ಹಬ್ಬದ ಪ್ರಮುಖ ಆಕರ್ಷಣೆ. ದೀಪಾವಳಿಯ ಸಮಯದಲ್ಲಿ ನಿಮ್ಮ ಮನೆಯನ್ನು ಬೆಳಗಿಸಲು ಹಲವಾರು ಮಾರ್ಗಗಳಿವೆ. ಮನೆಗಳನ್ನು ದೀಪಗಳಿಂದ ಬೆಳಗಲು ನಿಮಗೆ 10 ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ.

oil lamp

ಎಣ್ಣೆ ದೀಪಗಳು
ದೀಪಾವಳಿಯ ಸಮಯದಲ್ಲಿ ಎಣ್ಣೆ ದೀಪಗಳು ಬೆಳಕಿನ ಮತ್ತೊಂದು ಸುಂದರ ಮೂಲವಾಗಿದೆ. ಪೂಜಾ ಕೋಣೆಯಲ್ಲಿ ಎಣ್ಣೆ ದೀಪಗಳನ್ನು ನೇತುಹಾಕಿ ಮನೆಯ ಅಲಂಕಾರಗೊಳಿಸಬಹುದು. ಇದು ಹಬ್ಬದ ಆಚರಣೆಯ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತದೆ. ಎಣ್ಣೆ ದೀಪಗಳಿಂದ ಹೊಮ್ಮುವ ಬೆಳಕು ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸುತ್ತದೆ. ಆಧ್ಯಾತ್ಮಿಕತೆ ಮತ್ತು ಮಂಗಳಕರ ಮಾಂತ್ರಿಕ ಸೆಳವು ಹರಡುತ್ತದೆ. ಸುತ್ತಲ ವಾತಾವರಣವನ್ನು ಪ್ರಶಾಂತ ಮತ್ತು ಶಾಂತಗೊಳಿಸುತ್ತದೆ.

Earthen Diyas

ಮಣ್ಣಿನ ಹಣತೆ
ದೀಪಾವಳಿಯು ಮಣ್ಣಿನ ದಿಯಾಗಳಿಗೆ ಸಮಾನಾರ್ಥಕವಾಗಿದೆ. ಸಾಂಪ್ರದಾಯಿಕವಾಗಿ ಜೇಡಿಮಣ್ಣು ಮತ್ತು ಟೆರಾಕೋಟಾದಿಂದ ಮಾಡಿದ ಪರಿಸರ ಸ್ನೇಹಿ ದಿಯಾಗಳು ದೀಪಾವಳಿಯ ಸಮಯದಲ್ಲಿ ಹೆಚ್ಚು ವ್ಯಾಪಕವಾಗಿ ಬಳಕೆಯಲ್ಲಿರುತ್ತವೆ. ಅವು ಆರ್ಥಿಕವಾಗಿ ಮಾತ್ರವಲ್ಲದೆ ಪ್ರಕೃತಿಗೆ ಪೂರಕವಾಗಿವೆ. ಸರಳ ಸುಂದರ ಮಣ್ಣಿನ ದಿಯಾಗಳನ್ನು ಹಬ್ಬದಂದು ಬೆಳಗಬಹುದು. ಮಕ್ಕಳು ತಮ್ಮ ಅಗಾಧವಾದ ಸೃಜನಶೀಲತೆಯಿಂದ ಮಣ್ಣಿನ ದಿಯಾಗಳನ್ನು ಅಲಂಕರಿಸುವುದನ್ನು ಆನಂದಿಸುತ್ತಾರೆ. ಮಣ್ಣಿನ ಹಣತೆಗಳನ್ನು ವೈವಿಧ್ಯಮಯವಾಗಿ ಅಲಂಕರಿಸಬಹುದು. ಇದು ದೀಪಾವಳಿಗೆ ಮೆರುಗು ನೀಡುತ್ತದೆ.

Candles

ಮೇಣದಬತ್ತಿಗಳು
ಮೇಣದಬತ್ತಿಗಳು ಸುತ್ತಲೂ ಸಕಾರಾತ್ಮಕ ಸೆಳವು ಹರಡುವ ಅಂತರ್ಗತ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇವುಗಳ ಅಲಂಕಾರ ಆಕರ್ಷಣೀಯವಾಗಿರುತ್ತವೆ. ವರ್ಣ, ವಿನ್ಯಾಸಗಳಲ್ಲಿ ಬರುವ ಮೇಣದಬತ್ತಿಗಳು ಯಾವುದೇ ಹಬ್ಬ ಆಚರಣೆಯಲ್ಲಿ ವಿಶೇಷ ಅನುಭೂತಿ ನೀಡುತ್ತವೆ. ಲ್ಯಾವೆಂಡರ್, ಲೆಮೊನ್ಗ್ರಾಸ್, ಗುಲಾಬಿ, ಮಲ್ಲಿಗೆ, ದಾಲ್ಚಿನ್ನಿ, ಕಿತ್ತಳೆ, ಸ್ಟ್ರಾಬೆರಿ, ಕಾಫಿ ಮತ್ತು ಹೆಚ್ಚಿನವುಗಳಂತಹ ವಿವಿಧ ಸಮ್ಮೋಹನಗೊಳಿಸುವ ಸುವಾಸನೆ ಬೀರುವ ಮೇಣದಬತ್ತಿಗಳ ಆಯ್ಕೆ ಉತ್ತಮ. ನಿಮ್ಮ ದೀಪಾವಳಿಯನ್ನು ನಿಜವಾಗಿಯೂ ವಿಶೇಷವಾಗಿಸುತ್ತದೆ.

string lights

ಸ್ಟ್ರಿಂಗ್ ಲೈಟ್ಸ್
ಮನೆಯ ಅಂದವನ್ನು ಹೆಚ್ಚಿಸಿ ಕಲರ್‌ಫುಲ್ ಆಗಿ ದೀಪಾವಳಿ ಹಬ್ಬ ಆಚರಿಸಲು ಸ್ಟ್ರಿಂಗ್ ಲೈಟ್ಸ್ ಕೂಡ ಉತ್ತಮ ಆಯ್ಕೆ. ಸಣ್ಣ ಮಿನುಗುವ ಎಲ್‌ಇಡಿ ಬಲ್ಬ್‌ಗಳೊಂದಿಗೆ ವರ್ಣರಂಜಿತ ಸ್ಟ್ರಿಂಗ್ ಲೈಟ್‌ಗಳು ಆನ್ ಮತ್ತು ಆಫ್ ಆಗಿ ಹೊಳೆಯುವುದು ತುಂಬಾ ಆಕರ್ಷಕವಾಗಿರುತ್ತದೆ. ಸ್ಟ್ರಿಂಗ್ ಲೈಟ್‌ಗಳು ಮನೆಯ ಅಂದವನ್ನು ಹೆಚ್ಚಿಸುತ್ತದೆ. ಬೆಳಕಿನ ಹಬ್ಬದ ಸಮಯದಲ್ಲಿ ನಿಮ್ಮ ಮನೆಗೆ ಅದ್ಭುತ ನೋಟವನ್ನು ನೀಡುತ್ತವೆ. ಮಿನುಗುವ ಲೈಟ್ಸ್ಗಳೊಂದಿಗೆ ನಿಮ್ಮ ಮನೆಯನ್ನು ಹಬ್ಬದ ನಿವಾಸವಾಗಿ ಪರಿವರ್ತಿಸಿ.

Bottle Lights

ಬಾಟಲ್ ಲೈಟ್ಸ್
ಗಾಜಿನ ಬಾಟಲಿಗಳಲ್ಲಿ ಇರಿಸಲಾಗಿರುವ ಸುಂದರವಾದ ರೋಮಾಂಚಕ ಎಲ್‌ಇಡಿ ಸಣ್ಣ ಬಲ್ಬ್‌ಗಳು ಮೋಡಿ ಮಾಡುತ್ತವೆ. ಗಾಜಿನ ಬಾಟಲಿಗಳಲ್ಲಿ ಸಣ್ಣ ಎಲ್‌ಇಡಿ ಲೈಟ್ ಸ್ಟ್ರಿಂಗ್‌ಗಳನ್ನು ಇರಿಸಿ ಮತ್ತು ಅವುಗಳನ್ನು ನಿಮ್ಮ ಫೋಯರ್ ಪ್ರದೇಶ, ಕಾಫಿ ಟೇಬಲ್ ಅಥವಾ ಬಾಲ್ಕನಿಯಲ್ಲಿ ಅಲಂಕರಿಸಬಹುದು. ಇದು ನಿಮ್ಮ ದೀಪಾವಳಿ ಹಬ್ಬಕ್ಕೆ ಮೆರುಗು ನೀಡುತ್ತದೆ.

outdoor Lights

ಹೊರಾಂಗಣ ದೀಪಗಳು
ದೀಪಾವಳಿ ಸಂದರ್ಭದಲ್ಲಿ ಒಳಮನೆಯಷ್ಟೇ ಅಲ್ಲ, ಮನೆ ಹೊರಗನ್ನೂ ಬೆಳಗುವುದು ಮುಖ್ಯವಾಗುತ್ತದೆ. ನಿಮ್ಮ ಹೊರಮನೆಯ ವಿನ್ಯಾಸಕ್ಕೆ ತಕ್ಕಂತೆ ಸ್ಟ್ರಿಂಗ್ ಲೈಟ್‌ಗಳನ್ನು ಅಲಂಕರಿಸುವುದು ಹೆಚ್ಚು ಸೂಕ್ತ. ಜೊತೆಗೆ ಮನೆ ಹೊರಗೆ ಗಿಡದ ಪಾಟ್‌ಗಳು, ಮರಗಳಿದ್ದರೆ, ಲೈಟ್‌ಗಳ ಮೂಲಕ ಅವುಗಳನ್ನು ಅಲಂಕರಿಸಿದರೆ ಹೊರಾಂಗಣ ಚಿತ್ರಣ ಸೊಗಸಾಗಿರುತ್ತದೆ. ನಿಮ್ಮ ಪ್ರೀತಿ ಪಾತ್ರರಿಗೆ ಆತ್ಮೀಯ ಸ್ವಾಗತ ಕೋರಲು ಈ ವಿಧಾನವನ್ನು ಅನುಕರಿಸಿ.

Wall Sconces

ವಾಲ್ ಸ್ಕೋನ್ಸ್
ಹಬ್ಬಗಳೆಂದರೆ ಸಾಮೂಹಿಕ ಸಂಭ್ರಮ. ಕುಟುಂಬಸ್ಥರು, ನೆಂಟರಿಸ್ಟರು ಒಟ್ಟಿಗೆ ಸೇರಿ ಹಬ್ಬಗಳನ್ನು ಆಚರಿಸುವುದೇ ಹೆಚ್ಚು. ಕೆಲವೊಮ್ಮೆ ಹಬ್ಬಗಳು ವೈಯಕ್ತಿಕವಾಗಿಯೂ ಸುಂದರ ಅನುಭವ ನೀಡುವಂತಿರಬೇಕು. ಅದಕ್ಕೆ ದೀಪಾವಳಿ ಉತ್ತಮ ಆಯ್ಕೆಯೂ ಆಗಿದೆ. ವಾಲ್ ಸ್ಕೋನ್ಸ್ ಮೂಲಕ ನಿಮ್ಮ ವೈಯಕ್ತಿಕ ಕೊಠಡಿಗಳನ್ನು ಅಲಂಕರಿಸಿ ಏಕಾಂತವಾಗಿ ಹಬ್ಬದ ಅನುಭೂತಿ ಪಡೆಯಬಹುದು. ವಾಲ್ ಸ್ಕೋನ್ಸ್ಗಳು ನಿಮ್ಮ ಕೋಣೆಯ ಅಲಂಕಾರಕ್ಕೆ ನಯವಾದ ನೋಟ ನೀಡಬಹುದು. ಗಾಜಿನ ಶೇಡ್ ಅಥವಾ ಮೆಟಾಲಿಕ್, ಅಕ್ರಿಲಿಕ್ ಅಥವಾ ಫ್ಯಾಬ್ರಿಕ್ ಶೇಡ್ ಇರುವ ವಾಲ್ ಸ್ಕೋನ್ ಆಯ್ಕೆಗಳು ಉತ್ತಮ. ಹಬ್ಬ ಮುಗಿದ ನಂತರವೂ ನಿಮ್ಮ ಕೋಣೆಗಳಲ್ಲಿ ಶಾಶ್ವತ ಬೆಳಕಿನ ಆಯ್ಕೆಯಾಗಿ ಉಳಿಯುತ್ತವೆ.

Urli With Tea Light Candles

ಉರ್ಲಿ ವಿತ್ ಟೀ ಲೈಟ್ ಕ್ಯಾಂಡಲ್
ಹಣತೆ ಮಾದರಿಯ ದೀಪಗಳು ಮನೆಯ ಅಲಂಕಾರದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತವೆ. ಟೀ ಲೈಟ್ ಕ್ಯಾಂಡಲ್‌ಗಳನ್ನು ಅಲಂಕಾರಿಕ ಉರ್ಲಿಗಳಲ್ಲಿ (ಗುಂಡಗಿನ ಆಳವಿಲ್ಲದ ಹಿತ್ತಾಳೆ ಅಥವಾ ತಾಮ್ರದ ಬಟ್ಟಲುಗಳು) ಇರಿಸಿ ನೋಡಿ. ನಿಮಗೆ ಬೇರೆಯದೇ ಅನುಭವ ಸಿಗುತ್ತದೆ. ಉರ್ಲಿಗಳು ಮಂಗಳಕರ ವಾತಾವರಣದ ಮೂಲ. ಹೂವಿನ ಮುತ್ತುಗಳ ಮಧ್ಯದಲ್ಲಿ ಬೆಳಗುವ ಮೇಣದಬತ್ತಿಗಳು ಅಲಂಕಾರಕ್ಕೆ ಹೇಳಿಮಾಡಿಸಿದಂತಿರುತ್ತದೆ.

Chandeliers

ಗೊಂಚಲು ಮಾದರಿ ಲೈಟ್ಸ್
ಗೊಂಚಲು ಮಾದರಿಯ ಲೈಟ್ಸ್ ಐಷಾರಾಮಿ ಆಯ್ಕೆಗಳಾಗಿವೆ. ಅದನ್ನು ಲಿವಿಂಗ್ ರೂಮಿನ ಮಧ್ಯದಲ್ಲಿ ಚಾವಣಿಯ ಮೇಲೆ ತೂಗು ಹಾಕಲಾಗುತ್ತದೆ. ಸುಂದರವಾದ ವಿನ್ಯಾಸ ಮತ್ತು ಮಾದರಿಗಳಲ್ಲಿ ಎಲ್‌ಇಡಿ ದೀಪಗಳನ್ನು ಹೊಂದಿರುವ ಗೊಂಚಲುಗಳು ಸಾಮಾನ್ಯವಾಗಿ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಹರಳುಗಳು, ಮಣಿಗಳಲ್ಲಿ ಅತ್ಯುತ್ತಮವಾದ ಕರಕುಶಲತೆಯನ್ನು ಪ್ರದರ್ಶಿಸಲಾಗುತ್ತದೆ. ಹೀಗಾಗಿ, ದೀಪಾವಳಿಯ ಸಮಯದಲ್ಲಿ ಈ ಆಕರ್ಷಕ ಬೆಳಕಿನ ಆಯ್ಕೆಯನ್ನು ಮರೆಯಬೇಡಿ. ಮನೆಯ ಅಲಂಕಾರಕ್ಕೆ ಇದು ರಾಯಲ್ ಟಚ್ ನೀಡುತ್ತದೆ.

Table Lamps

ಟೇಬಲ್ ಲ್ಯಾಂಪ್ಸ್
ದೀಪಾವಳಿಯ ಸಮಯದಲ್ಲಿ ಟೇಬಲ್ ಲ್ಯಾಂಪ್‌ಗಳು ಬೆಳಕಿನ ಅದ್ಭುತ ಮೂಲವಾಗಿದೆ. ಹಬ್ಬದ ಋತುವಿನಲ್ಲಿ ಸ್ವಾಗತಾರ್ಹ ಹಾಗೂ ಸ್ನೇಹಶೀಲ ವಾತಾವರಣವನ್ನು ಸೃಷ್ಟಿಸುತ್ತದೆ. ಇವುಗಳನ್ನು ಸುಲಭವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಒಯ್ಯಬಹುದು. ನಿಮ್ಮ ವಾಸಸ್ಥಾನದ ಸೌಂದರ್ಯವನ್ನು ಇವು ಹೆಚ್ಚಿಸುತ್ತವೆ.

Share This Article