2025ರ ವರ್ಷಾರಂಭವು ಭಾರತ (Team India) ಮತ್ತು ಇಂಗ್ಲೆಂಡ್ ನಡುವಿನ ಟಿ20 ಹಾಗೂ ಏಕದಿನ ದ್ವಿಪಕ್ಷೀಯ ಸರಣಿಯೊಂದಿಗೆ ಆರಂಭವಾಯಿತು. ಇದರೊಂದಿಗೆ 2025ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ, ಟಿ20 ಏಷ್ಯಾಕಪ್ ಟೂರ್ನಿಗೂ ತಯಾರಿ ಆರಂಭವಾಯಿತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂಥ ದಿಗ್ಗಜರಿಲ್ಲದ ಟಿ20 ಕ್ರಿಕೆಟ್ ಪಡೆ ಸೂರ್ಯಕುಮಾರ್ ನಾಯಕತ್ವದಲ್ಲಿ ಹಲವು ಸರಣಿಗಳನ್ನ ಗೆದ್ದುಕೊಂಡಿತ್ತು. ಆದ್ರೆ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಸರಣಿಗಳಲ್ಲಿ ಕೆಲ ಸೋಲು ಕಂಡು ಕೈ ಸುಟ್ಟುಕೊಂಡಿತು. ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಕಾಣದ ಸೋಲು, ವಿವಾದದ ನಡುವೆಯೂ ಪಾಕ್‌ನೊಂದಿಗೆ ಜಿದ್ದಾಜಿದ್ದಿಯಲ್ಲಿ ಭಾರತ ಟ್ರೋಫಿ ಗೆದ್ದಿದ್ದನ್ನ ಮರೆಯುವಂತೆಯೇ ಇಲ್ಲ.
2025ರ ವರ್ಷದಲ್ಲಿ ಕ್ರಿಕೆಟ್ ವಿಭಾಗದಲ್ಲಿ ಚಾಂಪಿಯನ್ಸ್ ಟ್ರೋಫಿ, ಟಿ20 ಏಷ್ಯಾಕಪ್ ಟೂರ್ನಿ ಗಮನ ಸೆಳೆದರೂ ಈ ಸಂದರ್ಭದಲ್ಲಿ ನಡೆದ ಅನೇಕ ಬೆಳವಣಿಗೆಗಳ ಬಗ್ಗೆ ತಿಳಿಯಲೇಬೇಕಾದ ಸಂಗತಿಗಳಿವೆ. ಅವುಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

ಆಂಗ್ಲರ ವಿರುದ್ಧ ದ್ವಿಪಕ್ಷೀಯ ಸರಣಿ ಜಯ
ವರ್ಷಾರಂಭದಲ್ಲಿ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಮತ್ತು ಏಕದಿನ ದ್ವಿಪಕ್ಷೀಯ ಸರಣಿಗಳನ್ನು ಗೆಲ್ಲುವುದರೊಂದಿಗೆ ಭಾರತ ತಂಡ ಶುಭಾರಂಭ ಮಾಡಿತ್ತು.

ರೋಹಿತ್ ನಾಯಕತ್ವದಲ್ಲಿ ಭಾರತಕ್ಕೆ ಚಾಂಪಿಯನ್ಸ್ ʻಟ್ರೋಫಿʼ
ಇದಾದ ಬಳಿಕ ಫೆಬ್ರುವರಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಒಂದೇ ಒಂದು ಪಂದ್ಯವನ್ನೂ ಸೋಲದೇ ಚಾಂಪಿಯನ್ಸ್ ಟ್ರೋಫಿ ಜಯಿಸಿತು. 2013ರ ನಂತರ ಭಾರತ ತಂಡ ಈ ಸಾಧನೆ ಮಾಡಿತು. ಪಾಕಿಸ್ತಾನ ಈ ಟೂರ್ನಿಯ ಆತಿಥ್ಯ ವಹಿಸಿತ್ತು. ಆದರೆ ಭಾರತವು ಪಾಕ್ ನೆಲದಲ್ಲಿ ಪಂದ್ಯಗಳನ್ನು ಆಡಲು ನಿರಾಕರಿಸಿದ್ದರಿಂದ ಯುಎಇನಲ್ಲಿ ಪಂದ್ಯ ಆಡಿಸಲಾಯಿತು. ಟೂರ್ನಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದು ಭಾರತ ಟ್ರೋಫಿಗೆ ಮುತ್ತಿಟ್ಟಿತ್ತು.

18 ವರ್ಷಗಳ ವನವಾಸ ಅಂತ್ಯ – ಆರ್‌ಸಿಬಿಗೆ ಸಂಭ್ರಮ; ಸೂತಕ
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ 18 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಕೋಟ್ಯಂತರ ಅಭಿಮಾನಿಗಳ ಕನಸು ನನಸಾಯಿತು. ರಜತ್ ಪಾಟೀದಾರ್ ನಾಯಕತ್ವ ವಹಿಸಿಕೊಂಡ ಮೊದಲ ಟೂರ್ನಿಯಲ್ಲಿಯೇ ತಂಡವು ಸಾಧನೆ ಮಾಡಿತು. ಆದ್ರೆ ಆರ್‌ಸಿಬಿಯ ಈ ಸಂಭ್ರಮ ಒಂದು ದಿನವೂ ಕಳೆಯಲಿಲ್ಲ. ಅಭಿಮಾನಿಗಳು ಸಂಭ್ರಮದಲ್ಲಿರುವಾಗಲೇ ದುರಂತವೊಂದು ನಡೆದುಹೋಯಿತು. ಆರ್‌ಸಿಬಿ ಟ್ರೋಫಿ ಗೆದ್ದ ಮರುದಿನವೇ ಅಂದ್ರೆ ಜೂನ್ 4ರಂದು ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ದುರ್ಮರಣಕ್ಕೀಡಾದರು. ಇದು ಭಾರೀ ವಿವಾದಕ್ಕೆ ಕಾರಣವಾಯಿತು. ಅಲ್ಲದೇ ಈ ದುರಂತದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಟೂರ್ನಿಗಳು ನಡೆದಿಲ್ಲ, ಮುಂಬರುವ ಟೂರ್ನಿ ನಡೆಯುವುದೂ ಕೂಡ ಅನುಮಾನವಾಗಿದೆ.

ಚೋಕರ್ಸ್ ಹಣೆಪಟ್ಟಿ ಕಳಚಿ ಚಾಂಪಿಯನ್ಸ್ ಆದ ದ.ಆಫ್ರಿಕಾ
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು 2025ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಪ್ರಶಸ್ತಿಯನ್ನು ಗೆದ್ದುಕೊಂಡಿತು. ಲಾರ್ಡ್ಸ್ ಕ್ರೀಡಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಟೆಂಬಾ ಬವುಮಾ ನಾಯಕತ್ವದ ಆಸ್ಟ್ರೇಲಿಯಾ ಟ್ರೋಫಿ ಮುಡಿಗೇರಿಸಿಕೊಂಡಿತು. ಇದು ದಕ್ಷಿಣ ಆಫ್ರಿಕಾದ ಮೊದಲ WTC ಪ್ರಶಸ್ತಿಯೂ ಆಯಿತು. ಇದರೊಂದಿಗೆ 27 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಂಡಿತು. ದಕ್ಷಿಣ ಆಫ್ರಿಕಾ 1998ರಲ್ಲಿ ಕೊನೇ ಬಾರಿಗೆ ಐಸಿಸಿ ಪ್ರಶಸ್ತಿ ಗೆದ್ದುತ್ತು. ಹಲವು ಬಾರಿ ಸೆಮಿಸ್, ಫೈನಲ್‌ವರೆಗೆ ತಲುಪಿ ಸೋತು ಚೋಕರ್ಸ್ ಹಣೆಪಟ್ಟಿ ಕಟ್ಟಿಕೊಂಡಿತ್ತು. 2025ರಲ್ಲಿ ಈ ಹಣೆಪಟ್ಟಿ ಕಳಚಿತು.

ಟೆಸ್ಟ್ ಕ್ರಿಕೆಟ್‌ಗೆ ದಂತಕತೆಗಳು ಗುಡ್‌ಬೈ
ಮಾರ್ಚ್‌ನಲ್ಲಿ ಈ ಕಾಲಘಟ್ಟದ ಕ್ರಿಕೆಟ್ ದಂತಕತೆಯೇ ಆಗಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಇಬ್ಬರೂ ಆಟಗಾರರೊಂದಿಗೆ ಕೋಚ್ ಗೌತಮ್ ಗಂಭೀರ್ ಭಿನ್ನಾಭಿಪ್ರಾಯ ಹೊಂದಿದ್ದ ಕಾರಣಕ್ಕೆ ಅವರು ನಿವೃತ್ತಿಯಾಗಬೇಕಾಯಿತು ಎಂಬ ಮಾತುಗಳು ಕೇಳಿಬಂದವು. 2024ರ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಇಬ್ಬರು ಸದ್ಯ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಆದ್ರೆ ಇತ್ತೀಚೆಗೆ ಕೊಹ್ಲಿ ಮತ್ತೆ ಟೆಸ್ಟ್ ಕ್ರಿಕೆಟ್‌ಗೆ ಮರಳುತ್ತಾರೆ ಅನ್ನೋ ಮಾತುಗಳೂ ಕೇಳಿಬರುತ್ತಿವೆ.

ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಸಿಹಿ ಕಹಿ
ಇದಾದ ಮೇಲೆ ಅವರಿಬ್ಬರೂ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ಆಡಿದರು. ಈ ಸರಣಿ ಭಾರತ ಸೋತರೂ ರೋಹಿತ್ ಶರ್ಮಾ ಗರಿಷ್ಠ ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು, ಜೊತೆಗೆ ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಆದ್ರೆ ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಕಿಂಗ್ ಕೊಹ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಐಸಿಸಿ ರ‍್ಯಾಂಕಿಂಗ್‌ನಲ್ಲಿ ನಂ.2 ಸ್ಥಾನಕ್ಕೇರಿದರು. ಅಲ್ಲದೇ ದ. ಆಫ್ರಿಕಾ ವಿರುದ್ಧ ಭಾರತ ಸರಣಿ ಗೆದ್ದಿತು.

ಶುಭಮನ್ ಗಿಲ್‌ಗೆ ಟೆಸ್ಟ್ ಪರೀಕ್ಷೆ
ಯುವ ಆಟಗಾರ ಶುಭಮನ್ ಗಿಲ್ ಅವರಿಗೆ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕತ್ವ ನೀಡಲಾಯಿತು. ಗಿಲ್ ನಾಯಕತ್ವದಲ್ಲಿ ಇಂಗ್ಲೆಂಡ್ ತವರಿನಲ್ಲಿ ಟೆಸ್ಟ್ ಸರಣಿ ಆಡಿದ ಭಾರತ ಸಮಬಲ ಸಾಧಿಸಿತು. ನಂತ್ರ ವೆಸ್ಟ್ ಇಂಡೀಸ್ ಎದುರಿನ 2 ಪಂದ್ಯಗಳ ಸರಣಿ ಗೆದ್ದುಕೊಂಡಿತಾದರೂ, ದಕ್ಷಿಣ ಆಫ್ರಿಕಾ ಎದುರು ಮುಗ್ಗರಿಸಿತು. ಇದೇ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್ ಆಗಿರುವ ದಕ್ಷಿಣ ಆಫ್ರಿಕಾ, ಭಾರತದಲ್ಲಿ ಎರಡು ದಶಕಗಳ ನಂತರ ಟೆಸ್ಟ್ ಸರಣಿ ಜಯಿಸಿತು. ಆದ್ರೆ ಇದು ಟೀಂ ಇಂಡಿಯಾಕ್ಕೆ ನುಂಗಲಾರದ ತುತ್ತಾಯಿತು. ಏಕೆಂದ್ರೆ ವೈಟ್ ವಾಶ್ ಅನುಭವಿಸಿ ಹಿಂದೆಂದೂ ಕಾಣದ ಸೋಲು ಕಂಡಿತು.

ಸಿಂಧೂರ ಸಮರ ಬಳಿಕ ಪಾಕ್ ವಿರುದ್ಧ ಏಷ್ಯಾಕಪ್
ಪಹಲ್ಗಾಮ್ ಭಯೋತ್ಪಾದನಾ ದಾಳಿಯನ್ನು ಖಂಡಿಸಿದ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಆಡಲು ನಿರಾಕರಿಸಿತು. ಅದರಿಂದಾಗಿ ದುಬೈನಲ್ಲಿ ಪಂದ್ಯಗಳನ್ನು ಆಯೋಜಿಸಲಾಯಿತು. ಈ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನ ಎದುರಿನ ಪಂದ್ಯಗಳನ್ನು ಬಹಿಷ್ಕರಿಸಬೇಕು ಎಂಬ ಒತ್ತಾಯ ಕೇಳಿಬಂದವು. ಆದರೆ ಸೂರ್ಯಕುಮಾರ್ ಯಾದವ್ ನಾಯಕತ್ವದ ತಂಡವು ಆಡಿತು. ಫೈನಲ್ ಸೇರಿದಂತೆ ಮೂರು ಪಂದ್ಯಗಳಲ್ಲಿ ಪಾಕ್ ವಿರುದ್ಧ ಗೆದ್ದಿತು. ಈ ಪಂದ್ಯಗಳಲ್ಲಿ ಪಾಕ್ ಆಟಗಾರರಿಗೆ ಹ್ಯಾಂಡ್ ಶೇಕ್ ಮಾಡಲು ಭಾರತದ ಆಟಗಾರರು ತಿರಸ್ಕರಿಸಿದರು. ಫೈನಲ್‌ನಲ್ಲಿ ಗೆದ್ದ ಭಾರತವು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಪಾಕಿಸ್ತಾನದ ಸಚಿವ ಮೊಕ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡ ನಿರಾಕರಿಸಿತು. ಟ್ರೋಫಿಯನ್ನು ಎಸಿಸಿ ಕಚೇರಿಯಲ್ಲಿಟ್ಟಿದ್ದು ಇದುವರೆಗೂ ಭಾರತಕ್ಕೆ ಹಸ್ತಾಂತರಿಸಿಲ್ಲ.
ಇನ್ನೂ ದೇಶಿ ಕ್ರಿಕೆಟ್‌ನಲ್ಲಿ 2024-25ರ ಸಾಲಿನ ರಣಜಿ ಟ್ರೋಫಿಯನ್ನು ವಿದರ್ಭ ಗೆದ್ದುಕೊಂಡಿತು. ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯನ್ನು ಇಶಾನ್ ಕಿಶನ್ ನಾಯಕತ್ವದ ಜಾರ್ಖಂಡ್ ಜಯಿಸಿತು ಎಂಬುದು ಗಮನಾರ್ಹ. ಈ ಟೂರ್ನಿಯಲ್ಲಿ ಇಶಾನ್ ಕಿಶನ್ ಅವರ ಪ್ರದರ್ಶನ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆದುಕೊಳ್ಳುವಂತೆ ಮಾಡಿತು.

ವಿಶ್ವಕ್ಕೆ ಭಾರತೀಯ ವನಿತೆಯರೇ ಬಾಸ್
ಭಾರತ ಮಹಿಳಾ ಕ್ರಿಕೆಟ್ ತಂಡವು ಇದೇ ಮೊದಲ ಸಲ ಏಕದಿನ ವಿಶ್ವಕಪ್ ಜಯಿಸಿತು. ಹರ್ಮನ್ ಪ್ರೀತ್ ಕೌರ್ ನಾಯಕತ್ವದ ತಂಡವು ನವೀ ಮುಂಬೈನಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಜಯ ಸಾಧಿಸುವ ಮೂಲಕ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡಿತು. ದಕ್ಷಿಣ ಆಫ್ರಿಕಾ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ಮಹಿಳಾ ಕ್ರಿಕೆಟ್ ಉತ್ತುಂಗಕ್ಕೆ
ಇನ್ನೂ ಬೆಂಗಳೂರಿನ ನಿಕಿ ಪ್ರಸಾದ್ ನಾಯಕಿಯಾಗಿದ್ದ 19 ವರ್ಷದೊಳಗಿನವರ ಮಹಿಳಾ ಕ್ರಿಕೆಟ್ ತಂಡವೂ ಫೆಬ್ರುವರಿಯಲ್ಲಿ ಮಲೇಷ್ಯಾದಲ್ಲಿ ಟಿ20 ವಿಶ್ವಕಪ್ ಜಯಿಸಿತು. ಇದಾದ ಬಳಿಕ ದೀಪಿಕಾ ಟಿ.ಸಿ ನಾಯಕತ್ವದ ಭಾರತ ಅಂಧ ಮಹಿಳಾ ತಂಡವು ಅಂಧರ ಕ್ರಿಕೆಟ್ ವಿಶ್ವಕಪ್ ಜಯಿಸಿತು.

