ಅಮಿತ್ ಶಾ ಸಲಹೆ ನಂತ್ರ ಜೆಡಿಯುಗೆ ಪ್ರಶಾಂತ್ ಕಿಶೋರ್ ಸೇರ್ಪಡೆ

Public TV
2 Min Read
Prashant Kishore JDU

ಪಾಟ್ನಾ: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಜೆಡಿಯು ಸೇರ್ಪಡೆ ಸಂಬಂಧ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಎರಡು ಬಾರಿ ನನಗೆ ಸಲಹೆ ನೀಡಿದ್ದರು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿತೀಶ್ ಕುಮಾರ್ ಅವರಿಗೆ ಪ್ರಶಾಂತ್ ಕಿಶೋರ್ ಅವರನ್ನು ಚುನಾವಣಾ ತಂತ್ರಗಾರನನ್ನಾಗಿ ಮಾತ್ರ ನೇಮಿಸಿದ್ದೋ ಅಥವಾ ಭವಿಷ್ಯದ ಜೆಡಿಯು ಉತ್ತಾರಾಧಿಕಾರಿಯನ್ನಾಗಿ ಮಾಡಲು ನೇಮಿಸಲಾಗಿದೆಯೋ ಎನ್ನುವ ಪ್ರಶ್ನೆಯನ್ನು ಕೇಳಲಾಯಿತು.

prashant nitish 759

ಪ್ರಶಾಂತ್ ಕಿಶೋರ್ ನನಗೆ ಹೊಸ ಮುಖ ಏನು ಅಲ್ಲ. 2015ರಲ್ಲಿ ಅವರು ನಮ್ಮ ಜೊತೆ ಕೆಲಸ ಮಾಡಿದ್ದರು. ಪ್ರಶಾಂತ್ ಕಿಶೋರ್ ಜೆಡಿಯು ಸೇರುವಂತೆ ಹೇಳಿದ್ದು ಬೇರೆ ಯಾರೂ ಅಲ್ಲ. ಅಮಿತ್ ಶಾ ಎರಡು ಬಾರಿ ನನ್ನ ಜೊತೆ ಮಾತನಾಡಿ ಪ್ರಶಾಂತ್ ಕಿಶೋರ್ ಅವರನ್ನು ಜೆಡಿಯುಗೆ ಸೇರಿಸಿಕೊಳ್ಳಿ ಎಂದು ಸಲಹೆ ನೀಡಿದ್ದರು ಎಂದು ತಿಳಿಸಿದರು.

ಯಾವುದೇ ರಾಜಕೀಯ ಕುಟುಂಬದಿಂದ ಜನಿಸದೇ ಇದ್ದರೂ ಪಕ್ಷವನ್ನು ಸಾಮಾಜಿಕ ಜಾಲತಾಣದ ಮೂಲಕ ಹೇಗೆ ಸಂಘಟಿಸಬೇಕು ಎನ್ನುವ ನೈಪುಣ್ಯತೆಯನ್ನು ಪ್ರಶಾಂತ್ ಕಿಶೋರ್ ಹೊಂದಿದ್ದಾರೆ ಎಂದರು.

ಪ್ರಶಾಂತ್ ಕಿಶೋರ್ ಬಗ್ಗೆ ನನಗೆ ಬಹಳ ಪ್ರೀತಿಯಿದೆ. ಈಗ ನನ್ನ ಉತ್ತರಾಧಿಕಾರಿ ವಿಚಾರದ ಬಗ್ಗೆ ಮಾತನಾಡುವುದು ಬೇಡ. ಇಲ್ಲಿ ರಾಜಪ್ರಭುತ್ವ ಇಲ್ಲ ಎಂದು ಸ್ಪಷ್ಟಪಡಿಸಿದರು.

prashanth kishore

ಪ್ರಶಾಂತ್ ಕಿಶೋರ್ ಯಾರು?
2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ನಂತರ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡು ಗೆಲುವಿನ ರೂವಾರಿಯಾಗಿದ್ದರು. ಈ ಕಾರಣಕ್ಕಾಗಿ ಪ್ರಶಾಂತ್ ಕಿಶೋರ್ ಅವರಿಗೆ ರಾಹುಲ್ ಗಾಂಧಿ ಉತ್ತರ ಪ್ರದೇಶ ಚುನಾವಣೆ ಉಸ್ತುವಾರಿ ವಹಿಸಿದ್ದರು. ಆದರೆ ಉತ್ತರ ಪ್ರದೇಶದಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಕೆಗೆ ಸೋಲಾಗಿತ್ತು. ಮೇಲ್ವರ್ಗದ ಮತಗಳನ್ನು ಸೆಳೆಯುವ ಉದ್ದೇಶ ಮತ್ತು ಕಾಂಗ್ರೆಸ್ ಯಾವಾಗಲೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಪಕ್ಷ ಎನ್ನುವ ಕಲ್ಪನೆಯಿಂದ ಹೊರಬರಲು ಪ್ರಶಾಂತ್ ಕಿಶೋರ್ ಅವರು ಈ ಬಾರಿ ಬ್ರಾಹ್ಮಣ ಸಮುದಾಯ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲು ಶೀಲಾ ದೀಕ್ಷಿತ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಸಲಹೆ ನೀಡಿದ್ದರು. ಈ ಸಲಹೆಗೆ ಕಾಂಗ್ರೆಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು.

modi prashanth kishore

2014ರ ಚುನಾವಣೆಯ ವೇಳೆ ಪ್ರಶಾಂತ್ ಕಿಶೋರ್ ಸಲಹೆಯಂತೆ ಚಾಯ್‍ಪೇ ಚರ್ಚಾ ಬಿಜೆಪಿಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು. ಇದಾದ ಬಳಿಕ ಅಮಿತ್ ಶಾ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಪ್ರಶಾಂತ್ ಕಿಶೋರ್ ಬಿಜೆಪಿ ಪಾಳೆಯವನ್ನು ತೊರೆದಿದ್ದರು. ಬಿಹಾರದಲ್ಲಿ ಮಹಾಘಟ್‍ಬಂಧನ್ ಮೈತ್ರಿಕೂಟ ನಡೆಸಿ ನಿತೀಶ್ ಕುಮಾರ್ ಅವರನ್ನು ಪ್ರಶಾಂತ್ ಕಿಶೋರ್ ಗೆಲ್ಲಿಸಿದ್ದರು. 2017ರ ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ ಪ್ರಶಾಂತ್ ಕಿಶೋರ್ ತಂಡ ಕಾಂಗ್ರೆಸ್‍ನೊಂದಿಗೆ ಕೈಜೋಡಿಸಿತ್ತು. ಆಗಲೂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಎದುರಾಳಿಯನ್ನ ಮಣಿಸಿ ಅಧಿಕಾರ ಹಿಡಿದರು. ಹಲವು ವರ್ಷಗಳಿಂದ ಚುನಾವಣೆಯಲ್ಲಿ ಸತತ ಸೋಲು ಕಂಡಿದ್ದ ಕಾಂಗ್ರೆಸ್‍ಗೆ ಈ ಗೆಲುವು ಸಮಾಧಾನ ತಂದುಕೊಟ್ಟಿತ್ತು.

prashanth kishore 2

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *