– ಕರ್ನಾಟಕದಲ್ಲಿ ಲಿಂಗಾಯತರು ಬಹುಸಂಖ್ಯಾತರು ಎಂದ ಸ್ವಾಮೀಜಿ
ಗದಗ: ಜಾತಿಗಣತಿ ದೋಷಪೂರಿತ ವರದಿಯಾಗಿದೆ. ವರದಿಯಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂದು ಗದಗದ ತೋಂಟದಾರ್ಯ ಮಠದ ಪೀಠಾಧಿಪತಿ ಡಾ. ಸಿದ್ದರಾಮ ಶ್ರೀಗಳು ಅಸಮಾಧಾನ ಹೊರಹಾಕಿದರು.
ಸರ್ಕಾರ ಇನ್ನೊಮ್ಮೆ ಸಮೀಕ್ಷೆ ನಡೆಸಬೇಕು. ಮತ್ತೊಮ್ಮೆ ಜಾತಿಗಣತಿ ವರದಿ ಸಿದ್ಧಪಡಿಸಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು. ಜಾತಿಗಣತಿಯ ವರದಿ ಸಾರ್ವಜನಿಕರಲ್ಲಿ ಸಂಶಯ ಹುಟ್ಟುಹಾಕಿದೆ. ಸುಮಾರು ಏಳೆಂಟು ವರ್ಷಗಳ ಹಿಂದೆ ಜಾತಿಗಣತಿ ಸಿದ್ಧಪಡಿಸಿದ್ದಾರೆ. ಆ ಜಾತಿ ಜನಗಣತಿ ವರದಿ ಸಮರ್ಪಕವಾಗಿ ಇಲ್ಲ. ಆ ವರದಿಯನ್ನ ಸಿದ್ಧಪಡಿಸಿದ ವ್ಯಕ್ತಿಗಳು ಕರ್ನಾಟಕ ಪ್ರತಿಯೊಬ್ಬ ವ್ಯಕ್ತಿಯನ್ನು ಸಂಪರ್ಕಿಸಿಲ್ಲವೆಂಬ ಆರೋಪವಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಲಿಂಗಾಯತರು ಬಹುಸಂಖ್ಯಾತರೆಂಬುದು ಎಲ್ಲರಿಗೂ ತಿಳಿದಿದೆ. ನಂತರ ಒಕ್ಕಲಿಗರು ಸೇರಿದಂತೆ ವಿವಿಧ ಜಾತಿಯವರು ಮುಂಚೂಣಿಯಲ್ಲಿದ್ದಾರೆ. ಆದರೆ, ಲಿಂಗಾಯತರ ಜನಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಲಿಂಗಾಯತರು ಮೀಸಲಾತಿಗಾಗಿ ಉಪಜಾತಿಯ ಹೆಸರನ್ನು ಬರೆಸಿರುವ ಕಾರಣ ಇರಬಹುದು. ದೋಷಪೂರಿತ ವರದಿಯನ್ನ ಸರ್ಕಾರ ಒಪ್ಪಿಕೊಳ್ಳುವುದರಿಂದ ಅನೇಕರಿಗೆ ಅನ್ಯಾಯವಾಗಬಹುದು. ಶಿಕ್ಷಣ, ರಾಜಕಾರಣ, ಉದ್ಯೋಗ ಹಾಗೂ ವ್ಯವಸಾಯ ಸೇರಿದಂತೆ ಅನೇಕ ಜಾತಿ ಉಪಜಾತಿಗಳಿಗೆ ಅನ್ಯಾಯವಾಗಬಹುದು. ನೂರಾರು ಉಪಜಾತಿಗಳನ್ನು ವರದಿಯಲ್ಲಿ ಕೈ ಬಿಟ್ಟಿರೋದು ಅತ್ಯಂತ ಆಘಾತಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರ ಸ್ವೀಕಾರ ಮಾಡಿರುವ ವರದಿ ಸಮರ್ಪಕವಾಗಿಲ್ಲ. ಲಿಂಗಾಯತರು ಜನಸಂಖ್ಯೆ ಅಂದಾಜಿನ ಪ್ರಕಾರ ಒಂದೂವರೆ ಕೋಟಿ ಇದ್ದಾರೆ. ಆದರೆ, ಲಿಂಗಾಯತ ಸಂಖ್ಯೆ ವರದಿಯಲ್ಲಿ 72 ಲಕ್ಷಕ್ಕೆ ಇಳಿಸಿದ್ದು ಅತ್ಯಂತ ಆಘಾತಕಾರಿಯಾಗಿದೆ. ಬೇರೆ ಬೇರೆ ಜಾತಿಯವರು ಮುನ್ನೆಲೆಗೆ ಬಂದಿದ್ದಾರೆ. ಸರ್ಕಾರ ಇನ್ನೊಮ್ಮೆ ಪರಿಶೀಲನೆ ಮಾಡಿ ನೈಜ ವರದಿ ಬಿಡುಗಡೆ ಮಾಡಬೇಕು. ಸರ್ಕಾರ ಯಾರಿಗೂ ಅನ್ಯಾಯವಾಗದಂತಹ ವರದಿಯನ್ನ ಸಿದ್ಧಪಡಿಸಿ ಯೋಜನೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಜಾತಿಗಣತಿ ಮಾಡಿರುವ ಉದ್ದೇಶ ಸ್ಪಷ್ಟವಾಗಿಲ್ಲ. ಒಳಗಡೆ ಯಾವುದೋ ಒಂದು ಉದ್ದೇಶ ಇಟ್ಟಿಕೊಂಡು ಮಾಡಿರಬಹುದು. ಜಾತಿಗಣತಿ ವರದಿ ಬಹುತೇಕ ಲಿಂಗಾಯತರ ವಿರೋಧವಿದೆ. ಸಚಿವ ಸಂಪುಟದಲ್ಲಿರುವಂತಹ ಕಾಂಗ್ರೆಸ್ ಕೆಲವು ಮಂತ್ರಿಗಳ ವಿರೋಧವಿದೆ. ಸಮಾಜದ ಪ್ರಮುಖರು, ಗಣ್ಯ ವ್ಯಕ್ತಿಗಳು, ಮಠಾಧೀಶರು ಸಮಾಲೋಚನೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ತೋಂಟದಾರ್ಯ ಮಠದ ನಿಲುವು ಯಾವ ಜಾತಿಗೂ ಅನ್ಯಾಯ ಆಗಬಾರದು ಎಂಬುದು ನಮ್ಮ ಉದ್ದೇಶ ಎಂದರು.
ಸಾಮಾಜಿಕ ನ್ಯಾಯದ ಪರ ಸರ್ಕಾರ ಇರಬೇಕೆಂದು ಕೇಳಿಕೊಳ್ಳುತ್ತೇನೆ. ರಾಜಕೀಯ ಉದ್ದೇಶದಿಂದ ಜಾತಿಗಣತಿ ಜಾರಿಗೆ ತರುತ್ತಿರಬಹುದು. ಜಾತಿ ಜನಗಣತಿಯಲ್ಲಿ ಲಿಂಗಾಯತರಿಗೆ ಹೇಗೆ ಅನ್ಯಾಯವಾಗಿದೆ. ಅದೇ ರೀತಿ ಒಕ್ಕಲಿಗರಿಗೂ ಅನ್ಯಾಯವಾದಂತಿದೆ. ಹಾಗಂತ ಕಾಂಗ್ರೆಸ್ ಪಕ್ಷದ ಸಚಿವ ಸಂಪುಟದ ಪ್ರಮುಖ ಸಚಿವರೇ ಹೇಳಿದ್ದಾರೆ. ಸಂಪುಟದಲ್ಲಿರುವ ಲಿಂಗಾಯತ ಹಾಗೂ ಒಕ್ಕಲಿಗ ಸಚಿವರು ಈ ವರದಿಯಲ್ಲಿ ದೋಷವಿದೆ. ವರದಿ ಸಮರ್ಪಕವಾಗಿಲ್ಲ, ಇದನ್ನು ಮರಳಿ ಪರಿಶೀಲನೆ ಮಾಡಬೇಕು ಎಂದು ಕೆಲ ಸಚಿವರು ಹೇಳಿದ್ದಾರೆ. 17 ರಂದು ನಡೆಯುವ ವಿಶೇಷ ಸಚಿವ ಸಂಪುಟದಲ್ಲಿ ಏನು ತೀರ್ಮಾನ ಆಗುತ್ತೆ ಕಾದು ನೋಡೋಣ ಎಂದು ಸ್ವಾಮೀಜಿ ಹೇಳಿದರು.